ಮಂಗಳವಾರ, ಅಕ್ಟೋಬರ್ 20, 2020
22 °C

ರಸ್ತೆ ಸುರಕ್ಷತೆಗೆ ವೈಟ್‌ಟಾಪಿಂಗ್‌ ಪರಿಹಾರ: ಕುರಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಗುಂಡಿಗಳೇ ತುಂಬಿರುವ ರಸ್ತೆಗಳಿಂದ ನಗರದ ಅಂದ ಹಾಳಾಗಿದೆ. ರಸ್ತೆ ನಿರ್ಮಾಣ ಹಾಗೂ ದುರಸ್ತಿಗಾಗಿಯೇ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಲಾಗುತ್ತಿದೆ. ಆದ್ದರಿಂದ ವೈಟ್‌ ಟಾಪಿಂಗ್‌ ರಸ್ತೆಗಳನ್ನು ನಿರ್ಮಿಸುವುದು ಈ ಸಮಸ್ಯೆಗೆ ಉತ್ತಮ ಪರಿಹಾರ ಎಂದು ಇನ್‌ಫ್ರಾಸ್ಟ್ರಕ್ಟರ್‌ ಕೇರಳ ಲಿಮಿಟೆಡ್‌ನ ಮುಖ್ಯ ಸಲಹೆಗಾರ (ತಾಂತ್ರಿಕ) ಜೋಸ್‌ ಕುರಿಯನ್‌ ಅಭಿಪ್ರಾಯಪಟ್ಟರು.

ವೈಟ್‌ ಟಾಪಿಂಗ್‌ನಿಂದ ಆಗುವ ಅನುಕೂಲಗಳ ಬಗ್ಗೆ ಮಂಗಳವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು ‘ಮಳೆ ಬಂದರೆ ರಸ್ತೆಗಳು ಮೇಲಿಂದ ಮೇಲೆ ಹಾಳಾಗುತ್ತವೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದು ಕೂಡ ಇದಕ್ಕೆ ಕಾರಣ. ಇದರಿಂದ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಇವೆಲ್ಲವನ್ನೂ ತಪ್ಪಿಸಲು ವೈಟ್‌ ಟಾಪಿಂಗ್‌ ರಸ್ತೆಗಳು ಉತ್ತಮ’ ಎಂದರು.

‘ಪುಣೆ, ಮುಂಬೈ ಮತ್ತು ಬೆಂಗಳೂರಿನಲ್ಲಿ ವೈಟ್‌ ಟಾಪಿಂಗ್‌ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಉತ್ತಮ ಗುಣಮಟ್ಟ ಹೊಂದಿವೆ. ಆದ್ದರಿಂದ ಇದೇ ರೀತಿ ರಸ್ತೆ ನಿರ್ಮಿಸಲು ಆದ್ಯತೆ ನೀಡಬೇಕೆಂದು ಎಲ್ಲ ರಾಜ್ಯ ಸರ್ಕಾರಗಳಿಗೂ ಸಲಹೆ ನೀಡಿದ್ದೇನೆ. ಈ ರಸ್ತೆಗಳು ಕನಿಷ್ಠ 20ರಿಂದ 25 ವರ್ಷ ಬಾಳಿಕೆ ಬರುತ್ತವೆ. ಇಂಧನ ಉಳಿತಾಯವಾಗಿ ಮಾಲಿನ್ಯ ಕಡಿಮೆಯಾಗುತ್ತದೆ. ಅಪಘಾತಗಳ ಪ್ರಮಾಣ ಕಡಿಮೆ ಮಾಡಿ ಸುರಕ್ಷತೆಗೆ ಒತ್ತು ನೀಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಎಲ್ಲ ರಾಜ್ಯ ಸರ್ಕಾರಗಳ ಸರಿಯಾಗಿ ಯೋಜನೆ ರೂಪಿಸಿದರೆ ವೈಟ್‌ ಟಾಪಿಂಗ್‌ ರಸ್ತೆಗಳನ್ನು ನಿರ್ಮಿಸುವುದು ಕಷ್ಟವೇನಲ್ಲ. ಇದರಿಂದ ಪ್ರತಿ ವರ್ಷ ರಸ್ತೆಗಳನ್ನು ನಿರ್ಮಿಸುವ, ದುರಸ್ತಿ ಮಾಡಿಸುವ ಸಮಸ್ಯೆ ತಪ್ಪಿಸಬಹುದು. ಪುಣೆಯ ಬಹುತೇಕ ಕಡೆ ಬಡಾವಣೆ ಒಳಗಿನ ಮತ್ತು ಸಂಪರ್ಕ ರಸ್ತೆಗಳು ಕೂಡ ವೈಟ್‌ ಟಾಪಿಂಗ್‌ ಆಗಿವೆ. ಸ್ಥಳೀಯ ಆಡಳಿತ ಸಂಸ್ಥೆಗಳ ಅನುದಾನದ ಮೇಲಷ್ಟೇ ಈ ರೀತಿಯ ರಸ್ತೆ ನಿರ್ಮಾಣ ಕಷ್ಟ’ ಎಂದರು.

‘ಉಣಕಲ್‌ನ ಮೂರನೇ ಕ್ರಾಸ್‌ನಲ್ಲಿರುವ ಅನೇಕ ಗುಂಡಿಗಳು ಹಾಗೂ ಅಸುರಕ್ಷಿತ ರಸ್ತೆಗಳಿಂದ ಸವಾರರು ಬೇಸತ್ತು ಹೋಗಿದ್ದಾರೆ. ಶಿರೂರು ಪಾರ್ಕ್‌ನಿಂದ ತೋಳನಕೆರೆವರೆಗಿನ ರಸ್ತೆಯನ್ನು ವೈಟ್‌ ಟಾಪಿಂಗ್‌ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಈ ರಸ್ತೆಗಳಲ್ಲಿ ಸಂಚಾರ ಸರಾಗವಾಗುತ್ತದೆ. ಪರಿಸರ ಸ್ನೇಹಿಯೂ ಆಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು