ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆ ಯುಗದಲ್ಲಿ ನಾನು...

ಮಹಿಳೆ ದಿನ ವಿಶೇಷ
Last Updated 6 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಮಹಿಳೆ ಯಾವತ್ತಿದ್ದರೂ ಎರಡನೆಯ ದರ್ಜೆ ಪ್ರಜೆ ಅನ್ನುವ ಮಾತಿದೆ. ಅದು ಬಹುತೇಕ ಸತ್ಯವೂ ಹೌದು. ಸ್ತ್ರೀವಾದದ ನೆಲೆಗಟ್ಟಿನಲ್ಲಿ ಹೋದಾಗ ಮಹಿಳೆಯರಿಗಿನ್ನೂ ಸಮಾನ ವೇತನ, ಸಮಾನ ಅವಕಾಶಗಳು ದೊರೆತಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳೂ ಸಿಗುತ್ತವೆ. ಆದರೆ ಈ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ ‘ನಾನು ಸಮಾನತೆಯ ಯುಗದವಳು’ ಎಂಬ ಥೀಮ್‌ಲೈನ್‌ ನೀಡಿದ್ದಾರೆ.

ವ್ಯತಿರಿಕ್ತವೆನಿಸಬಹುದು. ಕ್ಲೀಷೆಯೂ ಎನಿಸಬಹುದು. ಆದರೆ ಮರಳುಗಾಡಿನಲ್ಲಿ ಓಯಾಸಿಸ್‌ ಸಿಗುವುದಿಲ್ಲವೇ? ಹಿಮಾಲಯದಲ್ಲಿ ಬಿಸಿನೀರ ಬುಗ್ಗೆ ಹಿತಾನುಭವ ನೀಡುವುದಿಲ್ಲವೇ? ಸಂಘರ್ಷಗಳ ಬದುಕಿನಲ್ಲಿಯೂ ಸಮಾನತೆಯ ಸಿಹಿಯುಂಡವರೂ ಸಿಗುತ್ತಾರೆ. ಅಂಥದ್ದೊಂದು ಪೀಳಿಗೆ ಇದೀಗ ಸಿದ್ಧವಾಗುತ್ತಿದೆ.

ಇಷ್ಟು ವರ್ಷಗಳೂ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಾಯಿತು. ಮಹಿಳೆ ಸಬಲಳಾದಾಗ ಅವಳನ್ನು ದಮನಿಸುವ ಯತ್ನಗಳೇ ಹೆಚ್ಚಾದವು. ಕಾರಣ ಪುರುಷಾಹಂಕಾರಕ್ಕೆ ಈಗಲೂ ಹೆಣ್ಣುಮಕ್ಕಳು ತಮಗಿಂತ ಒಂದ್ಹೆಜ್ಜೆ ಮುಂದೆ ಇರುವುದನ್ನು ಸಹಿಸಲಾಗದು. ಅದರ ಹಿಂದೆ ಒಂದು ಕುಹಕ, ಒಂದು ವ್ಯಂಗ್ಯ ಇದ್ದೇ ಇರುತ್ತದೆ. ಏನೂ ಇರದಿದ್ದಲ್ಲಿ ತೀರ ಮಹಿಳೆಯರ ದಿರಿಸು, ಉಡುಪು, ನಗು, ಚಾರಿತ್ರ್ಯ ಇವೆಲ್ಲವೂ ಬಾಯಿಗೆ ರಸಗವಳಗಳಾಗಿಯೇ ಸಿಗುತ್ತವೆ.

ಮಹಿಳಾ ಸಾಕ್ಷರತೆಯ ಪ್ರಮಾಣ ಹೆಚ್ಚಾದಂತೆ, ಅಕ್ಷರಸ್ಥ, ಅಶಿಕ್ಷಿತ ಪುರುಷರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಇವರಿಗೆ ಹೆಣ್ಣುಮಕ್ಕಳ ಯಶಸ್ಸನ್ನು ಸಹಿಸುವ ಬಗೆ ಹೇಳಿಕೊಡಬೇಕಿದೆ. ಸಮಾನವೇತನ ಪಡೆಯುವಾಗ ಸಮಾನ ಗೌರವದ ಪರಿಕಲ್ಪನೆ ತಿಳಿಹೇಳಬೇಕಿದೆ.

ಪಿತೃಪ್ರಧಾನ ಕುಟುಂಬದಲ್ಲಿ ಈಗಲೂ ಸ್ತ್ರೀ ಕುಟುಂಬದ ಅಡಿಯಾಳು ಎಂಬಂತೆಯೇ ನೋಡಲಾಗುತ್ತದೆ. ಅದೇ ಕಾರಣಕ್ಕೆ ವೃತ್ತಿಜೀವನದ ಮಹತ್ವದ ಬಡ್ತಿಗಳನ್ನು, ವರ್ಗಾವಣೆಗಳನ್ನು ಹೆಣ್ಣುಮಕ್ಕಳು ತ್ಯಜಿಸಬೇಕಾಗುತ್ತದೆ. ಈಗಲೂ ಒಂದು ಗುಂಪು ತಮ್ಮಲ್ಲಿ ಅನಾವಶ್ಯಕವಾಗಿ ಅಪರಾಧಿ ಮನೋಭಾವವನ್ನು ಬೆಳೆಸಿಕೊಳ್ಳುತ್ತಲೇ ಖಿನ್ನತೆಗೆ ಒಳಗಾಗುತ್ತದೆ.

ಮನಸಿನಾಳದಲ್ಲಿ ಬೇರೂರಿದ ಭಾವನೆಗಳಿವೆಯಲ್ಲ, ಮನೆಗೆ, ಮಕ್ಕಳಿಗೆ ಪೂರ್ಣಪ್ರಮಾಣದ ಸಮಯ ನೀಡಲಾಗುತ್ತಿಲ್ಲವೆಂಬ ಭಾವನೆ ಒಳಗೊಳಗೇ ಕುಂದುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ಬಹುತೇಕ ಮಹಿಳೆಯರು ಉನ್ನತ ಪದವಿಗೇರುವ ಮುನ್ನವೇ ಆದ್ಯತೆಯ ಹೆಸರಿನಲ್ಲಿ ಮನೆಯ ನಾಲ್ಕು ಗೋಡೆಗಳ ನಡುವೆ ಮರಳುತ್ತಾರೆ.

ಇಂಥದ್ದೆಲ್ಲವನ್ನೂ ಮೀರಿ, ಒಬ್ಬ ಮಹಿಳೆಯು ತನ್ನ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದರೆ ಅದರ ಹಿಂದೆ ಸಮಾನ ಅವಕಾಶಗಳನ್ನು ನೀಡಿದ, ಸಮಾನ ಮನೋಭಾವದ ತಂದೆ, ಸಹೋದರ, ಸಂಗಾತಿ ಮತ್ತು ಕೆಲಮಟ್ಟಿಗೆ ಸಹೋದ್ಯೋಗಿಗಳೂ ಸೇರಿರುತ್ತಾರೆ.

ಅಂಥ ಸ್ವಾಸ್ಥ್ಯಮಯ ಸಮಾಜ ಹೆಚ್ಚಾಗಲು ಕಾರಣ ಕಳೆದ ಸಹಸ್ರಮಾನದ ಅಂತ್ಯದಲ್ಲಿ ಲಿಂಗ ಸಂವೇದನೆಗೆ ಸಂಬಂಧಿಸಿದಂತೆ ಆದ ಜಾಗೃತಿ ಕಾರ್ಯಕ್ರಮಗಳು ಎಂದ್ಹೇಳಬಹುದು. ಆರತಿಗೆ ಮಗಳು, ಕೀರ್ತಿಗೆ ಮಗ ಎಂಬುದು, ಆರತಿಗೂ, ಕೀರ್ತಿಗೂ ಮಗಳು ಎಂಬ ಮನೋಭಾವ ಬೆಳೆದು ಬಂದಿದ್ದೇ ಈ ಸಹಸ್ರಮಾನದ ಹಿರಿಯ ಸಾಧನೆ ಎನ್ನಬಹುದು. ಒಂದಷ್ಟು ಸಿಂಗಲ್‌ ಗರ್ಲ್‌ ಚೈಲ್ಡ್‌ ಶಿಕ್ಷಣ ಸೌಲಭ್ಯ ಪಡೆಯುತ್ತಿದ್ದರೆ ಅವರೆಲ್ಲರೂ ಸಮಾನತೆಯ ಯುಗದವರೆಂದೇ ಹೇಳಬಹುದು.

ಲಿಂಗಾನುಪಾತದಲ್ಲಿ ಹೇಳಿಕೊಳ್ಳುವಂಥ ವ್ಯತ್ಯಾಸ ಕಾಣದಿದ್ದರೂ, ಈ ಜಗಕ್ಕೆ ಬಂದ ಹೆಣ್ಮಕ್ಕಳು ಜಗಬೆಳಗುವ ದೀವಿಗೆಯಾಗುತ್ತಿದ್ದಾರೆ. ‘ನಾನು’ ಹಾಗೂ ‘ನನ್ನತನ’ವನ್ನು ಸಂಭ್ರಮಿಸುವ ಎಲ್ಲ ಮಹಿಳೆಯರೂ ಈ ಸಮಾನತೆಯ ಯುಗಕ್ಕೆ ಸೇರ್ಪಡೆಯಾದವರೇ.

ಸಂಘರ್ಷಗಳ ಬದುಕಿನಲ್ಲಿ ಯಶಸ್ವಿಯಾದ ಕತೆಗಳಿಲ್ಲಿ ಹಲವು ಇವೆ. ಆದರೆ ಬೆಣ್ಣೆಯಂಥ ರಸ್ತೆ ಮೇಲಿನ ನಡಿಗೆಯಿಂದ ಗುರಿ ಸಾಧಿಸಿದವರು ಅದೆಷ್ಟು ಜನ ಎಂಬುದು ಇನ್ಮೇಲೆ ತೀರ್ಮಾನವಾಗಬೇಕಿದೆ. ಇಂಥ ಕತೆಗಳು ಪ್ರೇರಣೆಯೂ ಆಗಲಿವೆ. ಪಾಠವೂ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT