ಸೋಮವಾರ, ಜನವರಿ 20, 2020
20 °C
ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ

ಉತ್ತಮ ಆರೋಗ್ಯದ ಆಶಾಕಿರಣ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಯೋಗವು ಆಶಾಕಿರಣವಾಗಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌ಪಿವೈಎಸ್‌ಎಸ್‌) ಮತ್ತು ಯೋಗ ಸ್ಪರ್ಶ ಪ್ರತಿಷ್ಠಾನ ಜನವರಿಯಲ್ಲಿ ಹಮ್ಮಿಕೊಂಡಿರುವ ‘ಯೋಗ ಸಂಗಮ–2020’ರ ಆಮಂತ್ರಣ ಪತ್ರಿಕೆಯನ್ನು ಹುಬ್ಬಳ್ಳಿಯಲ್ಲಿ ಭಾನುವಾರ ಬಿಡುಗಡೆ ಮಾಡಿ ಅವರು ಆಶೀರ್ವಚನ ನೀಡಿದರು.

‘ಸಂಪತ್ತಿನ ಬೆನ್ನು ಹತ್ತಿರುವ ಮನುಷ್ಯ ಇಂದು ಹಲವು ದೌರ್ಬಲ್ಯಗಳಿಂದ ಬಳಲುತ್ತಿದ್ದಾನೆ. ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕೆಡಿಸಿಕೊಂಡಿದ್ದಾನೆ. ಆದರೆ, ಉತ್ತಮ ಆರೋಗ್ಯವೇ ದೊಡ್ಡ ಸಂಪತ್ತು ಎಂಬುದನ್ನು ಮರೆತಿದ್ದಾನೆ. ರೋಗ ಮುಕ್ತ ಜೀವನವೇ ಸಾಧನೆಗೆ ಪ್ರೇರಣೆ. ಹಾಗಾಗಿ, ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡಬೇಕು. ಅದಕ್ಕಾಗಿ, ಯೋಗ ಮಾಡಬೇಕು’ ಎಂದರು.

‘ನಮ್ಮ ಹಿರಿಯರ ಆರೋಗ್ಯದ ಗುಟ್ಟು ದೈಹಿಕ ಶ್ರಮವಾಗಿತ್ತು. ಹಾಗಾಗಿಯೇ ಅವರೆಲ್ಲಾ ನೂರ್ಕಾಲ ಬಾಳಿದರು ಎಂಬುದನ್ನು ತಿಳಿದುಕೊಳ್ಳಬೇಕು. ಯೋಗ ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ. ಇದು ಉತ್ತಮ ಆರೋಗ್ಯ ಬಯಸುವವರ ಸ್ವತ್ತು. ಯೋಗಾಭ್ಯಾಸ ಮಾಡುವವರು ತಮ್ಮ ಜತೆಗೆ, ಇತರರಿಗೂ ಕಲಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು’ ಎಂದು ಸಲಹೆ ನೀಡಿದರು.

‘ಇಂದು ಜಾತಿ, ಧರ್ಮ ಹಾಗೂ ಭಾಷೆಯ ವಿಷಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಸಮಾಜಕ್ಕೆ ಕಂಟಕವಾಗಿವೆ. ದೇಶ ಮತ್ತು ಧರ್ಮ ಸಮಾಜದ ಎರಡು ಕಣ್ಣುಗಳು ಎಂದು ಭಾವಿಸಿ, ಎಲ್ಲರೂ ಸಂಘರ್ಷರಹಿತ ಬದುಕನ್ನು ಸಾಗಿಸಬೇಕು’ ಎಂದು ಕರೆ ನೀಡಿದರು.

ಎಸ್‌ಪಿವೈಎಸ್‌ಎಸ್‌ ಪ್ರಾಂತ ಸಂಚಾಲಕ ಪ್ರಸನ್ನ ದೀಕ್ಷಿತ, ‘ವೈಯಕ್ತಿಕ ಮಟ್ಟದಲ್ಲಷ್ಟೇ ನಡೆಯುತ್ತಿದ್ದ ಯೋಗವು, 2015ರ ಯೋಗ ದಿನಾಚರಣೆ ಮೂಲಕ ವ್ಯಾಪಕ ಪ್ರಚಾರ ಪಡೆಯಿತು. ಯೋಗ ಚಳವಳಿ ಮಾದರಿಯಲ್ಲಿ ಮನೆ ಮನೆಯನ್ನು ತಲುಪುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಯೋಗ ಸಂಗಮದ ಸಂಚಾಲಕರಾದ ಮಂಜುನಾಥ ಬಳಗಾನೂರ, ಗಾಯತ್ರಿ ಜೋಶಿ, ಸ್ವಾಗತ ಸಮಿತಿ ಸದಸ್ಯರಾದ ಶಂಕರಣ್ಣ ಮುನವಳ್ಳಿ, ರಾಜಣ್ಣ ಕೊರವಿ, ಮಹೇಂದ್ರ ಠಕ್ಕರ, ರಂಗಾ ಬದ್ದಿ, ಸುಭಾಸಿಂಗ ಜಮಾದಾರ, ಯೋಗ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಪ್ರಕಾಶ ಬೆಂಡಿಗೇರಿ, ರಾಘವೇಂದ್ರ ಪ್ರಭು ಇದ್ದರು.

‘ಯೋಗ ಸಂಗಮ–2020’ ಜ. 9ರಿಂದ
ಯೋಗ ವಿದ್ಯೆ ಬಗ್ಗೆ ಅರಿವು ಮೂಡಿಸುವ ‘ಯೋಗ ಸಂಗಮ–2020’ರ ಅಂಗವಾಗಿ, ಹುಬ್ಬಳ್ಳಿಯಲ್ಲಿ ವಿವಿಧೆಡೆ ಜ. 9ರಿಂದ 12ರವರೆಗೆ ವಿವಿಧೆಡೆ ಏಕಕಾಲಕ್ಕೆ ಶಿಬಿರಗಳನ್ನು ಆಯೋಜಿಸಲಾಗಿದೆ. ದೇಶ–ವಿದೇಶಗಳ ಯೋಗ ವಿದ್ಯಾ ಪ್ರವೀಣರು, ಆಧ್ಯಾತ್ಮಿಕ ಸಾಧಕರು, ಚಿಂತಕರು ಹಾಗೂ ಯೋಗ ಶಿಕ್ಷಕರು ತರಬೇತಿ ನೀಡಲಿದ್ದು, 500ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಲಿದ್ದಾರೆ. 11ರಂದು ‘ಬೃಹತ್ ಯೋಗ ನಡಿಗೆ ಆಯೋಜಿಸಿದ್ದು, ಅಂದು ನೆಹರೂ ಮೈದಾನದಲ್ಲಿ ಸಂಜೆ 5.30ರಿಂದ 8ರವರೆಗೆ ಸಭಾ ಕಾರ್ಯಕ್ರಮ ಜರುಗಲಿದೆ.

ಮಾಹಿತಿಗೆ: 99001 57174, 95383 01414.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು