ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಾತೃತ್ವ ಸಾಧಿಸಿದರೆ ಭಾರತವಾಗಲಿದೆ ಸೂಪರ್ ಪವರ್

ಟೈಕಾನ್ ‘ಇವಿನಿಂಗ್ ವಿತ್ ಲೆಜೆಂಡ್ಸ್’ ಸಂವಾದದಲ್ಲಿ ಯೋಗ ಗುರು ಬಾಬಾ ರಾಮದೇವ್ ಅಭಿಪ್ರಾಯ
Last Updated 3 ಫೆಬ್ರುವರಿ 2020, 9:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಭ್ರಾತೃತ್ವ ಸಾಧಿಸಿದರೆ, ಮುಂದಿನ ಹತ್ತು ವರ್ಷದಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರವಾಗಲಿದೆ’ – ಟೈಕಾನ್–2020 ಸಮಾವೇಶದ ‘ಇವಿನಿಂಗ್ ವಿತ್ ಲೆಜೆಂಡ್ಸ್‌ ಸಂವಾದ’ದಲ್ಲಿ ಉದ್ಯಮಿ ಮೋಹನ್‌ದಾಸ್ ಪೈ ಕೇಳಿದ ‘ಭಾರತ ಸೂಪರ್ ಪವರ್ ಆಗಲು ಏನು ಮಾಡಬೇಕು?’ ಎಂಬಪ್ರಶ್ನೆಗೆ ಯೋಗ ಗುರು ಬಾಬಾ ರಾಮದೇವ್ ಕೊಟ್ಟ ಪ್ರತಿಕ್ರಿಯೆ ಇದು.

‘ಜಾತಿ–ಧರ್ಮದ ಹೆಸರಿನ ಸಂಘರ್ಷಗಳು ನಿಲ್ಲಬೇಕು. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವುದನ್ನು ಬಿಡಬೇಕು. ಭ್ರಾತೃತ್ವ ಮತ್ತು ಗೌರವಯುತ ರಾಜಕಾರಣದಿಂದ ದೇಶದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆ ಸಾಧ್ಯ’ ಎಂದು ಬಾಬಾ ಅಭಿಪ್ರಾಯಪಟ್ಟರು.

‘ನಿಮ್ಮ ಯಶಸ್ಸಿನ ರಹಸ್ಯ ಏನು?’ ಎಂಬ ಮಾತಿಗೆ, ‘ನಿರೀಕ್ಷೆ ಇಲ್ಲದ ನಿರಂತರ ಕೆಲಸ ನನ್ನ ರಹಸ್ಯ. ದಿನಕ್ಕೆ 18 ತಾಸು ಕೆಲಸ ಮಾಡುವ ನನಗೆ ಯಾವುದೇ ಟಾರ್ಗೆಟ್ ಇಲ್ಲ. ಹಣ ಅಥವಾ ಯಶಸ್ಸಿನ ಹಿಂದೆ ನಾನು ಬಿದ್ದಿಲ್ಲ. ದೇಶಕ್ಕಾಗಿ ಏನಾದರೂ ಮಾಡಬೇಕು ಅಂದುಕೊಂಡು ಪತಂಜಲಿ ಆರಂಭಿಸಿದ್ದೇನೆಯೇ ಹೊರತು, ದೊಡ್ಡ ಉದ್ಯಮಿಯಾಗಬೇಕೆಂದೇನೂ ಅಲ್ಲ’ ಎಂದ ಅವರು, ‘ನನಗೆ ಹೆಂಡತಿಯೂ ಇಲ್ಲ. ನಾನು ರಾಜಕಾರಣಿಗಳಿಗೆ ಹೆದರುವುದಿಲ್ಲ ಹಾಗೂ ಹೆದರಿಸುವುದಿಲ್ಲ’ ಎಂದು ನಕ್ಕರು.

‘ನಾನು ಗಳಿಸಿದ್ದನ್ನು ಸಮಾಜಕ್ಕೆ ವಿವಿಧ ರೀತಿಯಲ್ಲಿ ದಾನ ನೀಡುತ್ತಿದ್ದೇನೆ. ಪತಂಜಲಿಯನ್ನು ವಿದೇಶಗಳಿಗೂ ವಿಸ್ತರಿಸುವ ಆಲೋಚನೆ ಇದೆ. ಬರುವ ಲಾಭಾಂಶವನ್ನು ಆ ದೇಶಗಳಿಗೆ ದಾನ ಮಾಡುವೆ. ಪ್ಯೂರಿಟಿ ವಿತ್ ಚಾರಿಟಿ ಜನರನ್ನು ಸದಾ ಸೆಳೆಯಲಿದೆ’ ಎಂದರು.

ಸಂಜಯ ಗೋಡಾವತ್ ಗ್ರೂಪ್ ಮುಖ್ಯಸ್ಥ ಸಂಜಯ ಗೋಡಾವತ್ ಮಾತನಾಡಿ, ‘ಬದುಕು ಕಾರು ಇದ್ದಂತೆ. ನಾವು ಹೇಗೆ ಗೇರ್ ಬದಲಾಯಿಸುತ್ತೇವೊ ಅದೇ ರೀತಿ, ಜೀವನದಲ್ಲೂ ಸಮಯಕ್ಕೆ ತಕ್ಕಂತೆ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಜ್ಯೋತಿಷ್ಯ ಅಥವಾ ಕುಂಡಲಿಯಿಂದ ಬದುಕು ಬದಲಾಗದು. ಕಠಿಣ ಪರಿಶ್ರಮದ ಜತೆಗೆ, ಸ್ಮಾರ್ಟ್‌ ವರ್ಕ್ ಮಾಡುವುದನ್ನೂ ಮೈಗೂಡಿಸಿಕೊಳ್ಳಬೇಕು’ ಎಂದರು.

ಉದ್ಯಮಿ ಟಿ.ಎಂ. ಮೋಹನ್‌ದಾಸ್ ಪೈ ‘ಇಂಡಿಯಾ@2030’ ಕುರಿತು ಮಾತನಾಡಿದರು.

ಪ್ರಶಸ್ತಿ ಪ್ರದಾನ

ಸುವರ್ಣ ಗ್ರೂಪ್ ಆಫ್ ಕಂಪನೀಸ್‌ನ ಡಾ. ವಿ.ಎಸ್‌.ವಿ. ಪ್ರಸಾದ್ ಹಾಗೂ ಅನುಷಾ ಪ್ರಸಾದ್ ಅವರಿಗೆ ‘ವರ್ಷದ(2020) ಉದ್ಯಮಿ’ ಪ್ರಶಸ್ತಿ, ಕೆಂಭಾವಿ ಆರ್ಕಿಟೆಕ್ಚರ್ ಫೌಂಡೇಷನ್‌ನ ಪಾರ್ಥ ಕೆಂಭಾವಿ ಮತ್ತು ಸೌಮ್ಯಾ ಕೆಂಭಾವಿ ಅವರಿಗೆ ‘ಎಕ್ಸಲೆನ್ಸ್ ಇನ್ ಸರ್ವೀಸ್ ಇಂಡಸ್ಟ್ರಿ’, ಸಾಂಖ್ಯಾ ಲ್ಯಾಬ್ಸ್‌ ಪ್ರೈವೇಟ್ ಲಿಮಿಟೆಡ್‌ನ ಪರಾಗ್ ನಾಯಕ್ ಅವರಿಗೆ ‘ಎಕ್ಸಲೆನ್ಸ್ ಇನ್ ಟೆಕ್ನಾಲಜಿ’, ಅಡ್ವಾನ್ಸ್‌ ಡೈ ಕಾಸ್ಟ್ ಕಂಪನಿಯ ನಾಗರಾಜ್ ದಿವಟೆ ಮತ್ತು ಶಿವರಾಮ್ ಹೆಗ್ಡೆ ಅವರಿಗೆ ‘ಎಕ್ಸ್‌ಲೆನ್ಸ್ ಇನ್ ಮ್ಯಾನ್ಯುಫ್ಯಾಕ್ಚರಿಂಗ್’, ಡಾಕೆಟ್ ರನ್‌ನ ಕಂಪನಿ ಸಿಇಒ ಅಜಯ್ ಕಬಾಡಿ ಮತ್ತು ಸಿಟಿಒ ಶ್ವೇತಾ ಶೆಟ್ಟರ್ ಅವರಿಗೆ ‘ಬೆಸ್ಟ್ ಸ್ಟಾರ್ಟಪ್‌ ಆಫ್ ದಿ ಇಯರ್’ ಹಾಗೂ ಸೋನಾಲ್ ಮೊಮಯಾ ಅವರಿಗೆ ‘ 2020ನೇ ಸಾಲಿನ ಅತ್ಯುತ್ತಮ ಮಹಿಳಾ ಉದ್ಯಮಿ’ ಪ್ರಶಸ್ತಿ ನೀಡಲಾಯಿತು.

ಶಾಸಕ ಅರವಿಂದ ಬೆಲ್ಲದ, ಟೈಕಾನ್ ಅಧ್ಯಕ್ಷ ಶಶಿಧರ ಶೆಟ್ಟರ, ಸಂಚಾಲಕರಾದ ಶ್ರಾವಣಿ ಪವಾರ್, ವಿಜೇಶ್ ಸೆಹಗಲ್‌, ಉದ್ಯಮಿಗಳಾದ ವಿಜಯ ಸಂಕೇಶ್ವರ ಹಾಗೂ ಆನಂದ ಸಂಕೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT