ಮಂಗಳವಾರ, ಮಾರ್ಚ್ 28, 2023
23 °C

ರಾಜ್ಯದ ಅಭಿವೃದ್ಧಿಗೆ ಯುವಪೀಳಿಗೆ ಮುಂದಾಗಲಿ: ಸಚಿವ ಮುನೇನಕೊಪ್ಪ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ಅಖಂಡ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ, ನಮ್ಮ ಯುವ ಪೀಳಿಗೆ ಪಾಲುದಾರರಾಗಬೇಕು. ತಮ್ಮ ಅಧ್ಯಯನ, ವ್ಯಾಸಂಗದ ಜೊತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಜಿಲ್ಲಾಡಳಿತವು ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

‘ನಮ್ಮ ಪರಂಪರೆಯ ವಾರಸುದಾರರಾಗಿ ಕನ್ನಡತನ, ಕನ್ನಡತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕೋವಿಡ್ ವೈರಾಣುವಿನ ವಿರುದ್ಧ ಹೋರಾಟ ಮುಂದುವರೆಸಲು ಪ್ರತಿಯೊಬ್ಬ ನಾಗರಿಕರು ಈ ಸಂದರ್ಭದಲ್ಲಿ ಪಣ ತೊಡಬೇಕು. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪದೇ ಪದೇ ಕೈ ತೊಳೆಯುವ, ಸ್ವಚ್ಛತೆ ಕಾಪಾಡುವ ರೂಢಿ ಅಳವಡಿಸಿಕೊಳ್ಳಬೇಕು’ ಎಂದರು.

‘ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊರೆತಿರುವ ಪ್ರಾಮುಖ್ಯತೆಯೇ, ಕರ್ನಾಟಕ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಯೂ ಮಹತ್ವ ಪಡೆದಿದೆ. ಸುಮಾರು 19 ಆಡಳಿತ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು, ಬ್ರಿಟಿಷರ ಆಡಳಿತದ ನಂತರ ಮತ್ತೆ ಒಂದಾಗಿದ್ದು ನಮ್ಮೆಲ್ಲರ ಸೌಭಾಗ್ಯದ ಮತ್ತು ಐಕ್ಯತೆಯ ಸಂಗತಿ. ಕರ್ನಾಟಕ ಏಕೀಕರಣದ ಚಳವಳಿಯು ಇದೇ ನಮ್ಮ ಧಾರವಾಡದ ನೆಲದಲ್ಲಿ ಜನ್ಮ ತಾಳಿದ್ದು ನಮಗೆಲ್ಲ ಅಭಿಮಾನದ ವಿಷಯ’ ಎಂದರು.

‘10ನೇ ಶತಮಾನದಲ್ಲಿ ಅಣ್ಣಿಗೇರಿಯವರಾದ ಕನ್ನಡದ ಮೊದಲ ಕವಿ ಪಂಪ, 15ನೇ ಶತಮಾನದ ಕೋಳಿವಾಡ ಗ್ರಾಮದ ಕುಮಾರವ್ಯಾಸ, ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದ ನರೇಂದ್ರ ಗ್ರಾಮದ ರಾ. ಹ.ದೇಶಪಾಂಡೆ, ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಅಮೂಲ್ಯ ಕೊಡುಗೆ ನೀಡಿದ ಡೆಪ್ಯೂಟಿ ಚನ್ನಬಸಪ್ಪ, ಏಕೀರಣಕ್ಕೆ 23 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ ಅದರಗುಂಚಿ ಶಂಕರಗೌಡರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ದ.ರಾ.ಬೇಂದ್ರೆ, ಡಾ. ವಿ.ಕೃ.ಗೋಕಾಕ, ಡಾ. ಗಿರೀಶ ಕಾರ್ನಾಡ ಅವರು ಈ ಮಣ್ಣಿನವರು ಎನ್ನುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕರ್ನಾಟಕ ರಾಜ್ಯೋತ್ಸವದ ಹಿಂದೆ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಸರ್.ಸಿದ್ಧಪ್ಪ ಕಂಬಳಿ, ಬಿ.ಬಸವಲಿಂಗಪ್ಪ, ಹಳ್ಳಿಕೇರಿ ಗುದ್ಲೆಪ್ಪನವರು, ಆಲೂರು ವೆಂಕಟರಾಯರು, ಡಿ.ಪಿ.ಕರಮಕರ್, ರಂಗನಾಥ ದಿವಾಕರ್, ಮೊಹರೆ ಹಣಮಂತರಾಯರು, ಟಿ.ಆರ್.ನೇಸ್ವಿ, ಶ್ರೀರಂಗರು, ಹೊಸಮನಿ ಸಿದ್ಧಪ್ಪ, ವೀರನಗೌಡ ಪಾಟೀಲ, ಕೆ.ಎಫ್.ಪಾಟೀಲ ಮೊದಲಾದ ಮಹನೀಯರ ಹೋರಾಟ ಮತ್ತು ತ್ಯಾಗವಿದೆ.

ಶಾಸಕ ಅಮೃತ ದೇಸಾಯಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಇದ್ದರು.

ಸಮಾರಂಭಕ್ಕೂ ಮುನ್ನ ಸಚಿವರು ಡೆಪ್ಯೂಟಿ ಚನ್ನಬಸಪ್ಪ, ಪ್ರೊ. ಕೆ.ಜಿ.ಕುಂದಣಗಾರ ಅವರ ಪ್ರತಿಮೆಗಳಿಗೆ ಹಾಗೂ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಮತ್ತು ವಿವಿಧ ದಳಗಳಿಂದ ಗೌರವ ರಕ್ಷೆ ಸ್ವೀಕರಿಸಿದರು.

ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಆಕರ್ಷಕವಾಗಿ ಸಿದ್ಧಪಡಿಸಿದ್ದ ಲಸಿಕಾ ತೇರುಗಳ ಮೂಲಕ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು