‘ಲಿಂಗಾಯತ’ ಒಡೆಯಲು ಮುನ್ನುಡಿ ಬರೆದಿದ್ದೇ ಬಿಜೆಪಿ: ಡಿ.ಕೆ.ಶಿವಕುಮಾರ್ ಆರೋಪ

ಸೋಮವಾರ, ಮೇ 27, 2019
33 °C

‘ಲಿಂಗಾಯತ’ ಒಡೆಯಲು ಮುನ್ನುಡಿ ಬರೆದಿದ್ದೇ ಬಿಜೆಪಿ: ಡಿ.ಕೆ.ಶಿವಕುಮಾರ್ ಆರೋಪ

Published:
Updated:

ಶಿವಮೊಗ್ಗ: ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು. ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು ಎಂದು ವೀರಶೈವ ಮಹಾಸಭಾ ನೇತೃತ್ವದಲ್ಲಿ ಬಿ.ಎಸ್. ಯಡಿಯೂರಪ್ಪ ಅಂದಿನ ಯುಪಿಎ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಲಿಂಗಾಯತ ಸಮಾಜ ಒಡೆಯಲು ಮುನ್ನುಡಿ ಬರೆದಿದ್ದೇ ಬಿಜೆಪಿ ಎಂದು ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದರು.

ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಲಾಭಕ್ಕೆ ಕಾಂಗ್ರೆಸ್‌ ಲಿಂಗಾಯತ ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿದ್ದಾರೆ. ಸಮಾಜ ಒಡೆಯುವ ಕಾರ್ಯಕ್ಕೆ ಮುನ್ನುಡಿ ಬರೆದವರು ಅವರದೇ ಪಕ್ಷದ ಮುಖಂಡರು ಎಂಬ ಸಾಮಾನ್ಯ ಜ್ಞಾನವೂ ಅವರಿಗಿಲ್ಲ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ, ಜಿ.ಎಸ್. ಬಸವರಾಜು, ಶಶಿಕಲಾ ಜೊಲ್ಲೆ ಮತ್ತಿತರರ ಸಹಿ ಇರುವ; ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ ಮನವಿಪತ್ರ ಬಿಡುಗಡೆ ಮಾಡಿದರು.

ಜುಲೈ 2013ರಲ್ಲಿ ಅವರು ಸಲ್ಲಿಸಿದ್ದ ಮನವಿಯ ಆಧಾರದಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿತ್ತು. ವೈಯಕ್ತಿಕ ನೆಲೆಗಟ್ಟಿನಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರ ತಪ್ಪು ಎಂದು ಹೇಳಿದ್ದೇನೆ.

ಈ ವಿಷಯವನ್ನೇ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಕೇಂದ್ರ ಸರ್ಕಾರ 5 ವರ್ಷಗಳಲ್ಲಿ ಮಾಡಿದ ಸಾಧನೆ ಶೂನ್ಯ. ಈ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಇಂತಹ ಸಣ್ಣ ಸಣ್ಣ ವಿಷಯಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಜಾತಿ, ಧರ್ಮ ಒಡೆಯುವ ಕೆಲಸ ಯಾವತ್ತೂ ಮಾಡಿಲ್ಲ. ಅದೆಲ್ಲ ಬಿಜೆಪಿ ಕೆಲಸ ಎಂದು ತಿರುಗೇಟು ನೀಡಿದರು.

ಪುಲ್ವಾಮಾ ಘಟನೆ ಕೇಂದ್ರ ಸರ್ಕಾರದ ವೈಫಲ್ಯ. ಗುಪ್ತಚರ ಮಾಹಿತಿ ಇದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಯೋಧರ ಜೀವಗಳನ್ನು ಬಲಿಕೊಟ್ಟಿದೆ. ಘಟನೆಯನ್ನು ಈಗ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದರು.

ಡೈರಿಯ ಪ್ರತಿ ಇದ್ದದ್ದು ಸತ್ಯ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಡೈರಿಯ ಒಂದು ಪ್ರತಿ ತಮ್ಮ ಮನೆಯಲ್ಲಿ ಇದ್ದದ್ದು ಸತ್ಯ. ಆದಾಯ ತೆರಿಗೆ ದಾಳಿ ಸಮಯದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡರು.

ಡೈರಿ ಕುರಿತು ಕೇಳಲಾದ ಮತ್ತಷ್ಟು ಪ್ರಶ್ನೆಗಳಿಗೆ ಈ ಕುರಿತು ಹೆಚ್ಚಿಗೆ ಕೇಳಬೇಡಿ. ಏನಾದರೂ ಗೊಂದಲಗಳು ಇದ್ದರೆ ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಅವರ ಆಪ್ತ ಸಹಾಯಕರನ್ನು ಸಂಪರ್ಕಿಸಿ ಎಂದು ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !