ಸೋಮವಾರ, ಮೇ 17, 2021
28 °C

ಮಳೆನಾಡಲ್ಲೂ ಕಾಡುವ ಬರ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪಶ್ಚಿಮಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಯ ವ್ಯಾಪ್ತಿಯಲ್ಲೇ ನಿರಂತರ ನಾಲ್ಕು ವರ್ಷಗಳು ನೀರಿನ ಬವಣೆ ಎದುರಾಗಿತ್ತು. ಬರದ ಪರಿಸ್ಥಿತಿಯ ನಂತರ ಎಚ್ಚೆತ್ತುಕೊಂಡ ಸಾರ್ವಜನಿಕರು ನೀರು ಸಂರಕ್ಷಣೆಯತ್ತ ಚಿತ್ತ ಹರಿಸಿದ್ದಾರೆ.

ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ ಪಡೆದ ಆಗುಂಬೆ, ದಶಕದಿಂದ ಈಚೆಗೆ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹುಲಿಕಲ್, ಮಾಸ್ತಿಕಟ್ಟೆ ಪ್ರದೇಶದ ಗ್ರಾಮಗಳೂ ನೀರಿಗೆ ಬರ ಎದುರಿಸಿದ್ದವು. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಹರಿಯುವ ಮಲಪಹಾರಿ, ನಾಬಳ, ನಾಲೂರು, ಮಾಲತಿ ನದಿಗಳ ಹರಿವು ನಿಂತಿತ್ತು. ಜಿಲ್ಲೆಯ ಜೀವನದಿಗಳಾದ ಶರಾವತಿ, ತುಂಗಾ ನದಿಗಳ ಹರಿವೂ ಕ್ಷೀಣಿಸಿತ್ತು. ತೆರೆದ ಬಾವಿಗಳಲ್ಲಿ ನೀರು ಪಾತಾಳ ಕಂಡಿತ್ತು. ಚಕ್ರ, ವರಾಹಿ, ಸಾವೆಹಕ್ಲು, ಮಾಣಿ ಜಲಾಶಯಗಳು ಬರಿದಾಗಿದ್ದವು.

ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕುಗಳ ವ್ಯಾಪ್ತಿಯ ನೂರಾರು ಗ್ರಾಮಗಳ ಕೊಳವೆಬಾವಿಗಳು ಬತ್ತಿಹೋಗಿದ್ದವು. ಕುಡಿಯುವ ನೀರಿಗೆ ಸಾಕಷ್ಟು ತೊಂದರೆಯಾಗಿತ್ತು. ಹಲವು ಹಳ್ಳಿ ಗಳಲ್ಲಿ ನಾಲ್ಕೈದು ಕಿ.ಮೀ. ದೂರದ ಖಾಸಗಿ ಜಮೀನುಗಳ ಕೊಳವೆ ಬಾವಿಗಳಿಂದ ನೀರು ಹೊತ್ತು ತರಲಾಗುತ್ತಿತ್ತು. ಹಿಂದಿನ ವರ್ಷ ಹಿಂಗಾರಿ ನಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿತ್ತು. ಕೆರೆ, ಕಟ್ಟೆಗಳು ಭರ್ತಿಯಾಗಿದ್ದವು. ಆದರೂ, ಈ ಬಾರಿ ಬೇಸಿಗೆಯಲ್ಲಿ ಜಿಲ್ಲೆಯ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ.

256 ಚೆಕ್‌ ಡ್ಯಾಂಗಳು: ಮಲೆನಾಡಿನಲ್ಲೂ ಜಲಕ್ಷಾಮ ಎದುರಾದ ಪರಿಣಾಮ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅಂತರ್ಜಲ ಸಂರಕ್ಷಣೆಗೆ ಹಲವು ಕ್ರಮ ಕೈಗೊಂಡಿವೆ. ಉದ್ಯೋಗ ಖಾತ್ರಿಯೂ ಸೇರಿ ವಿವಿಧ ಯೋಜನೆ ಗಳ ಅಡಿ ಹಳ್ಳ, ಕೊಳ್ಳಗಳಿಗೆ 224 ಚೆಕ್ ಡ್ಯಾಂ ನಿರ್ಮಿಸಲಾಗಿದೆ. 270 ಕೊಳವೆ ಬಾವಿಗಳ ಸುತ್ತ ಜಲ ಮರುಪೂರಣ ಮಾಡಲಾಗಿದೆ. ಒಂದೂವರೆ ಕೋಟಿ ಸಸಿಗಳನ್ನು ನೆಡಲಾಗಿದೆ. ಆದರೆ, ಸರ್ಕಾರಿ ಕಚೇರಿಗಳು, ಮನೆಗಳ ಮೇಲಿನ ಮಳೆ ನೀರು ಸಂಗ್ರಹ ಕುರಿತು ಸೂಕ್ತ ಯೋಜನೆ ರೂಪುಗೊಂಡಿಲ್ಲ.

ಪ್ರತಿ ದಿನ 0.2 ಟಿಎಂಸಿ ಅಡಿ: ನಾಲ್ಕೂವರೆ ಲಕ್ಷ ಜನಸಂಖ್ಯೆ ಇರುವ ಶಿವಮೊಗ್ಗ ನಗರಕ್ಕೆ ತುಂಗಾ ಜಲಾಶಯದಿಂದ ದಿನದ 24 ಗಂಟೆ ನೀರು ಸರಬರಾಜು ಮಾಡುವ ಯೋಜನೆ ಅನುಷ್ಠಾನಗೊಳ್ಳುತ್ತಿದೆ. 3.24 ಟಿಎಂಸಿ ಅಡಿ ನೀರು ಸಂಗ್ರಹಣ ಸಾಮರ್ಥ್ಯ ಇರುವ ಜಲಾಶಯದಿಂದ ನಿತ್ಯ 0.2 ಟಿಎಂಸಿ ಅಡಿ ನೀರಿನ ಸರಬರಾಜು ಮಾಡಲಾಗುತ್ತಿದೆ. ಹಿಂದಿನ ಬೇಸಿಗೆಯಲ್ಲಿ ಜಲಾಶಯ ಬರಿದಾದ ಕಾರಣ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಹಾಗಾಗಿ, ನಗರದ ವಿವಿಧೆಡೆ 50ಕ್ಕೂ ಹೆಚ್ಚು ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದ್ದು, ನೀರು ಸಂಗ್ರಹಣೆಗೆ ಒತ್ತು ನೀಡಲಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು