ಶಿವಮೊಗ್ಗ: ನಗರದ ಸಮೀಪ ಇರುವ ತ್ಯಾವರೆಕೊಪ್ಪ ಹುಲಿ–ಸಿಂಹಧಾಮದಲ್ಲಿ ಹುಲಿ, ಸಿಂಹಗಳ ಸಂತತಿ ಸಂಪೂರ್ಣ ಕ್ಷೀಣಿಸಿದೆ.
ಹುಲಿ–ಸಿಂಹಧಾಮದಲ್ಲಿ ಪ್ರಸ್ತುತ ಏಳು ಹುಲಿಗಳು ಮತ್ತು ನಾಲ್ಕು ಸಿಂಹಗಳಿವೆ. ಅವುಗಳಿಗೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಗರ್ಭಕೋಶದ ಶಸ್ತ್ರ ಚಿಕಿತ್ಸೆಯಿಂದಾಗಿ ಸಂತಾನೋತ್ಪತ್ತಿ ಸಾಧ್ಯವಾಗುತ್ತಿಲ್ಲ.
ಏಳು ಹುಲಿಗಳಲ್ಲಿ ಐದು ಗಂಡು ಮತ್ತು ಎರಡು ಹೆಣ್ಣು. ಆದರೆ, ಎರಡು ಹುಲಿಗಳಿಂದ ಸಂತಾನಾಭಿವೃದ್ಧಿ ಸಾಧ್ಯವಿಲ್ಲ. ಹುಲಿಗಳ ಸಂಖ್ಯೆಯನ್ನು ಹೆಚ್ಚಿಸಲು ಹುಲಿ–ಸಿಂಹಧಾಮಕ್ಕೆ ಹೊಸ ಹುಲಿ ಆಗಮನ ಅನಿವಾರ್ಯವಾಗಿದೆ. ಆದ್ದರಿಂದ ಮೈಸೂರಿನ ಚಾಮರಾಜೇಂದ್ರಮೃಗಾಲಯದಿಂದ ಹುಲಿಯನ್ನು ತರಲು ಸಂಬಂಧಪಟ್ಟ ಅಧಿಕಾರಿಗಳು ನಿರ್ಧರಿಸಿದ್ದಾರೆ.
ತ್ಯಾವರೆಕೊಪ್ಪಕ್ಕೆ ಹುಲಿಯನ್ನು ಕಳುಹಿಸಿ ಕೊಡಲು ಕೋರಿ ಮೈಸೂರು ಮೃಗಾಲಯದ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಕೇಂದ್ರ ಮೃಗಾಲಯ ಪ್ರಾಧಿಕಾರವು ಅನುಮೋದನೆ ನೀಡಿದ ನಂತರ ಮೈಸೂರು ಮೃಗಾಲಯದಿಂದ ತ್ಯಾವರೆಕೊಪ್ಪಕ್ಕೆ ಹುಲಿಯನ್ನು ಕಳುಹಿಸುವ ಸಾಧ್ಯತೆಯಿದೆ.
‘ಐದರಿಂದ ಏಳು ವರ್ಷದೊಳಗಿನ ಹುಲಿಗಳಿಗೆ ಮಾತ್ರಸಂತಾನೋತ್ಪತ್ತಿ ಮಾಡಲು ಸಾಧ್ಯವಿದೆ. ಈಗಿರುವ ಐದು ಗಂಡು ಹುಲಿಗಳಿಗೆ ಸುಮಾರು 14 ವರ್ಷ ಮತ್ತು ಎರಡು ಹುಲಿಗಳಿಗೆ ಸುಮಾರು 12 ವರ್ಷ ವಯಸ್ಸಾಗಿದೆ. ಹಾಗಾಗಿ ಈ ಹುಲಿಗಳಿಂದಸಂತಾನೋತ್ಪತ್ತಿ ಸಾಧ್ಯವಿಲ್ಲ. ಸಫಾರಿಗೆ ಮತ್ತೊಂದು ಹುಲಿಯ ಅವಶ್ಯಕತೆಯಿದೆ’ ಎಂದು ತ್ಯಾವರೆಕೊಪ್ಪ ಹುಲಿ–ಸಿಂಹಧಾಮ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್ ಚಂದ್ ಹೇಳುತ್ತಾರೆ.
ಹುಲಿ– ಸಿಂಹಧಾಮದಲ್ಲಿ ಹುಲಿಗಳಂತೆ ಸಿಂಹಗಳ ಸಂಖ್ಯೆಯೂ ಕಡಿಮೆ ಇದ್ದು, ಅವುಗಳ ಸಂಖ್ಯೆಯನ್ನೂ ಹೆಚ್ಚು ಮಾಡುವ ಚಿಂತನೆ ನಡೆದಿತ್ತು. ಅದಕ್ಕಾಗಿ 2017ರ ನವೆಂಬರ್‌ನಲ್ಲಿ ಸಿಂಹಿಣಿ ಸುಷ್ಮಿತಾ ಮತ್ತು ಸಿಂಹ ಸರ್ವೇಶ್ ಅನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ತ್ಯಾವರೆಕೊಪ್ಪಕ್ಕೆ ತರಲಾಗಿತ್ತು.
2012ರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದಸಿಂಹಿಣಿ ಸುಶ್ಮಿತಾಗೆ 2014ರಲ್ಲಿ ಅಂದರೆಕೇವಲ ಎರಡು ವರ್ಷದವಳಿದ್ದಾಗಲೇ ಪಶುವೈದ್ಯಕೀಯ ಶಸ್ತ್ರ ಚಿಕಿತ್ಸಕರು ಗರ್ಭಕೋಶದ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಹಾಗಾಗಿ ಈಗ ಅದರಿಂದಲೂ ಸಂತಾನೋತ್ಪತ್ತಿ ಸಾಧ್ಯವಿಲ್ಲ.
‘ಸಿಂಹಿಣಿ ನಾಲ್ಕು ವರ್ಷದಿಂದ 12 ವರ್ಷಗಳವರೆಗೆ ಮರಿಗಳಿಗೆ ಜನ್ಮ ನೀಡಬಹುದು. ಸುಶ್ಮಿತಾಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಲು ಪ್ರಮುಖ ಕಾರಣ ಅದರ ತಾಯಿಗೆ ಅನೇಕ ಸಂಗಾತಿಗಳು ಇದ್ದರು. ಅಂತಹ ಸಿಂಹಿಣಿಗಳಿಂದ ಜನಿಸಿದ ಹೆಣ್ಣು ಮರಿಗಳು ಐದು ವರ್ಷ ದಾಟಿದಾಗ ವಿರೂಪಗೊಂಡ ಮರಿಗಳಿಗೆ ಜನ್ಮ ನೀಡುವ ಸಾಧ್ಯತೆಯಿದೆ. ಹಾಗಾಗಿ ಸುಷ್ಮಿತಾಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು’ ಎಂದು ಮುಕುಂದ್ ಚಂದ್ ಮಾಹಿತಿ ನೀಡಿದರು.
ತ್ಯಾವರೆಕೊಪ್ಪ ಹುಲಿ–ಸಿಂಹಧಾಮ ಸದ್ಯ ಮೈಸೂರು ಮೃಗಾಲಯದಿಂದ ಹುಲಿಯ ಆಗಮನಕ್ಕಾಗಿ
ಕಾಯುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.