ಮೇಕೆದಾಟು: ಕಾಲಮಿತಿಯೊಳಗೆ ಅನುಷ್ಠಾನಕ್ಕೆ ಒತ್ತಾಯ

7
ಅಂಧರ ಶಾಲೆ ಆವರಣದಲ್ಲಿ ರೈತರ ಸಭೆ: ಮಾವು, ರೇಷ್ಮೆ ಬೆಳೆಗಾರರ ಹಿತರಕ್ಷಣೆಗೆ ಸರ್ಕಾರಕ್ಕೆ ಆಗ್ರಹ

ಮೇಕೆದಾಟು: ಕಾಲಮಿತಿಯೊಳಗೆ ಅನುಷ್ಠಾನಕ್ಕೆ ಒತ್ತಾಯ

Published:
Updated:
Deccan Herald

ರಾಮನಗರ: ಕಾಲಮಿತಿಯೊಳಗೆ ಮೇಕೆದಾಟು ಅಣೆಕಟ್ಟೆ ನಿರ್ಮಾಣ, ವೃಷಭಾವತಿ ನದಿ ಮಾಲಿನ್ಯಕ್ಕೆ ಬಿಬಿಎಂಪಿಯನ್ನೇ ಹೊಣೆಗಾರನ್ನಾಗಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವುದು. ರೇಷ್ಮೆ ಬೆಳೆಗೆ ಹಿಂದಿನಂತೆ ಪ್ರೋತ್ಸಾಹ ಧನ ಹಾಗೂ ಮಾವು ಸಂಸ್ಕರಣಾ ಘಟಕ ಶೀಘ್ರ ಆರಂಭಕ್ಕೆ ಒತ್ತಾಯಿಸಲು ಶನಿವಾರ ನಡೆದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅರ್ಚಕರಹಳ್ಳಿಯ ಬಿಜಿಎಸ್ ಅಂಧರ ಶಾಲೆಯ ಆವರಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಪರ್ಯಾಯ ಮಾರ್ಗೋಪಾಯಗಳ ಕುರಿತು ಚರ್ಚೆ ನಡೆಯಿತು. ಕನಕಪುರ ತಾಲ್ಲೂಕಿನಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಆಗುತ್ತಿರುವುದು ಸಂತಸದ ವಿಷಯ. ಇದರಿಂದ ಈ ಭಾಗದ ಜನರ ನೀರಿನ ಬವಣೆ ನೀಗಲಿದೆ. ಇದನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಡಿಪಿಆರ್‌, ನಿರ್ಮಾಣ ಕಾಮಗಾರಿ ಎಲ್ಲವೂ ತ್ವರಿತವಾಗಿ ನಡೆಯಬೇಕು. ಅಗತ್ಯ ಕಾನೂನು ತಜ್ಞರನ್ನು ನೇಮಿಸಿಕೊಂಡು ಯಾವುದೇ ಅಡೆತಡೆ ಬರದ ಹಾಗೆ ನಿರ್ವಹಣೆ ಮಾಡಬೇಕು ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಸಲಹೆ ನೀಡಿದರು.

ಮೇಕೆದಾಟಿಗೆ ವೃಷಭಾವತಿ ನದಿ ನೀರು ಬೆರೆತರೆ ತೊಂದರೆಯೇ ಹೆಚ್ಚು. ಬೆಂಗಳೂರು ಕೊಳಚೆ ನೀರನ್ನು ಶುದ್ಧೀಕರಿಸದೇ ನದಿಗೆ ಬಿಡುವ ಕಾರ್ಯವು ಮೊದಲು ನಿಲ್ಲಬೇಕು. ಇಂತಹದ್ದೊಂದು ಅನಾಹುತಕ್ಕೆ ಕಾರಣವಾಗುತ್ತಿರುವ ಸರ್ಕಾರದ ಸಂಸ್ಥೆಗಳನ್ನು ಇದಕ್ಕೆ ಹೊಣೆಗಾರರಾಗಿಸಬೇಕು. ನದಿಯ ನೀರನ್ನು ಶುದ್ಧೀಕರಿಸುವ ಕೆಲಸ ಮುಖ್ಯವಾಗಿ ಆಗಬೇಕು ಎಂದು ಆಗ್ರಹಿಸಿದರು.

ಕೊಳಚೆ ನೀರು ಶುದ್ಧೀಕರಣಕ್ಕೆ ಈಗ ಸಾಕಷ್ಟು ದೇಸಿ–ವಿದೇಶಿ ತಂತ್ರಜ್ಞಾನವು ಲಭ್ಯವಿದೆ. ಸರ್ಕಾರ ಈ ತಂತ್ರಜ್ಞಾನವನ್ನು ಬಳಸಿಕೊಂಡು ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು. ಚಿಕ್ಕಬಳ್ಳಾಪುರ–ಕೋಲಾರದಲ್ಲಿ ಕೆ.ಸಿ. ವ್ಯಾಲಿ ಮೂಲಕ ಕೆರೆಗಳಿಗೆ ಕೊಳಚೆ ನೀರು ಹರಿಸಿದ್ದರಿಂದ ಆಗಿರುವ ಅನಾನುಕೂಲವೇ ಹೆಚ್ಚು. ಇದು ಇಲ್ಲಿ ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕಿದೆ’ ಎಂದು ಸಲಹೆ ನೀಡಿದರು.

ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ ಮಾತನಾಡಿ ‘ಕೆರೆಗಳ ಮಾಲಿನ್ಯಕ್ಕೆ ಬೆಂಗಳೂರಿನ ಬೆಳ್ಳಂದೂರು ಜ್ವಲಂತ ಉದಾಹರಣೆಯಾಗಿದೆ. ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ದಕ್ಷಿಣ ಭಾರತವು ಈಗ ತೀವ್ರ ತರದ ಪರಿಸರ ಮಾಲಿನ್ಯಕ್ಕೆ ತೆರೆದುಕೊಳ್ಳುತ್ತಿದೆ. ಈ ಬಗ್ಗೆ ನಾವೆಲ್ಲರೂ ಎಚ್ಚರ ವಹಿಸಬೇಕಿದೆ’ ಎಂದರು.

ರೈತರ ವಂಚನೆ: ‘ರಾಜ್ಯ ಸರ್ಕಾರವು ರೇಷ್ಮೆಗೂಡಿಗೆ ಸಂರಕ್ಷಣಾ ದರದ ನೆಪದಲ್ಲಿ ರೈತರನ್ನು ವಂಚಿಸುತ್ತಿದೆ’ ಎಂದು ಸಭೆಯಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

‘ರಾಮನಗರ ಗೂಡು ಮಾರುಕಟ್ಟೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ರೈತರಿಗೆ ಕೇವಲ ₹16 ಲಕ್ಷ ನೀಡಲಾಗಿದೆ. ಕೆಲವು ರೈತರಿಗೆ ಸರ್ಕಾರ ₹50–100 ನೀಡಿದೆ’ ಎಂದು ಪುಟ್ಟಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ರೇಷ್ಮೆ ಸಚಿವರು ಕೂಡಲೇ ಬೆಳೆಗಾರರ ಸಭೆ ಕರೆದು ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿದರು.

‘ಮಾರುಕಟ್ಟೆಯಲ್ಲಿ ಗೂಡಿನ ಗುಣಮಟ್ಟವನ್ನು ರೀಲರ್‌ಗಳು ನೀಡುವ ಬೆಲೆಯ ಮೇಲೆ ಸರ್ಕಾರ ಅಳೆಯುತ್ತಿರುವುದು ಸರಿಯಲ್ಲ’ ಎಂದು ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗೌತಮ್‌ ಹಾಗೂ ಕಾರ್ಯಾಧ್ಯಕ್ಷ ರವಿ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರವು ಈ ಹಿಂದಿನ ಪದ್ಧತಿಯಂತೆ ಪ್ರತಿ ಕೆ.ಜಿ. ಗೂಡಿಗೆ ₹50 ಪ್ರೋತ್ಸಾಹ ಧನವನ್ನು ಎಲ್ಲರಿಗೂ ನೀಡುವಂತೆ ಒತ್ತಾಯಿಸಿದರು.

ಸಂಸ್ಕರಣಾ ಘಟಕ: ‘ಜಿಲ್ಲೆಯಲ್ಲಿ ಈಗಾಗಲೇ ಮಾವು ಹೂ ಬಿಟ್ಟಿದ್ದು, ರೈತರ ಹಿತ ಕಾಯಲು ಜಿಲ್ಲಾಡಳಿತವು ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ರೈತರು ದೂರಿದರು.

‘ಮಾವು ಸಂಸ್ಕರಣಾ ಘಟಕ ಆರಂಭಕ್ಕೆ ಇ–ಟೆಂಡರ್ ಪ್ರಕ್ರಿಯೆಯು ಚಾಲನೆಯಲ್ಲಿದೆ. ಜಿಲ್ಲೆಯಲ್ಲಿ ವಾರ್ಷಿಕ 2.5 ಲಕ್ಷ ಟನ್‌ ಮಾವು ಉತ್ಪಾದನೆ ಆಗುತ್ತಿದ್ದು, ಇದರಲ್ಲಿ ಕನಿಷ್ಠ 1.5 ಲಕ್ಷ ಟನ್ ಉತ್ಪನ್ನವನ್ನು ಇಲ್ಲಿಯೇ ಸಂಸ್ಕರಣೆ ಮಾಡಲು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಅಪ್ಪಾಜಿ ಗೌಡ, ರಘು ತಮ್ಮಯ್ಯ, ರಾಂಪುರ ಧರಣೇಶ್‌, ಮುನಿರಾಜು, ಗಜೇಂದ್ರ ಹಾಗೂ ಜಿಲ್ಲೆಯ ರೈತರು ಪಾಲ್ಗೊಂಡಿದ್ದರು.

*
ಮೇಕೆದಾಟು ಅಣೆಕಟ್ಟೆ ನಿರ್ಮಾಣ ಹಾಗೂ ವೃಷಭಾವತಿ ಶುದ್ಧೀಕರಣದ ಸಾಧಕ–ಬಾಧಕಗಳ ಬಗ್ಗೆ ರಾಜ್ಯ ಸರ್ಕಾರವು ಪ್ರಕಟಣೆ ಹೊರಡಿಸಬೇಕು.
-ಸಿ. ಪುಟ್ಟಸ್ವಾಮಿ, ರೈತ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !