ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ: ಬರ ಮರೆಸಿದ ಮಳೆ; ಬಿತ್ತನೆಗೆ ಸಿದ್ಧತೆ

ರೋಹಿಣಿ, ಮೃಗಶಿರಾ ಮಳೆಗೆ ತುಂಬಿದ ಕೃಷಿ ಹೊಂಡ, ಕೆರೆ ಕಟ್ಟೆಗಳು
Published 10 ಜೂನ್ 2024, 5:48 IST
Last Updated 10 ಜೂನ್ 2024, 5:48 IST
ಅಕ್ಷರ ಗಾತ್ರ

ನರಗುಂದ: ಬರದಿಂದ ತತ್ತರಿಸಿದ್ದ ತಾಲ್ಲೂಕಿನ ರೈತರಿಗೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಹೊಸ ಭರವಸೆ ಮೂಡಿಸಿದೆ. ಕೃಷಿ ಹೊಂಡಗಳು, ಕೆರೆ– ಕಟ್ಟೆಗಳು ಭರ್ತಿಯಾಗಿದ್ದು ಕೃಷಿಕರಲ್ಲಿ ಉತ್ಸಾಹ ತುಂಬಿದೆ.

ಕಳೆದ ಮೂರು ವರ್ಷಗಳಿಂದ ಮುಂಗಾರು ಮಳೆ ಸಕಾಲಕ್ಕೆ ಬಾರದ ಕಾರಣ ರೈತರು ತೊಂದರೆ ಅನುಭವಿಸಿದ್ದರು. ಆದರೆ, ಈ ಬಾರಿ ರೋಹಿಣಿ ಮಳೆ ಸ್ವಲ್ಪ ತಡವಾಗಿ ಸುರಿದರೂ ಬಿತ್ತನೆಗೆ ಅನುಕೂಲ ಕಲ್ಪಿಸಿದೆ. ಮೃಗಶಿರಾ ಆರಂಭದಿಂದಲೇ ಸುರಿಯುತ್ತಿದ್ದು ರೈತರಿಗೆ ನೆಮ್ಮದಿ ಕೊಟ್ಟಿದೆ. ಮಳೆಯಿಂದಾಗಿ ತಾಲ್ಲೂಕಿನ ಕೃಷಿ ಹೊಂಡಗಳು ತುಂಬಿವೆ. ಮುಂದಿನ ದಿನಗಳಲ್ಲಿ ಮಳೆ ಬರುವುದು ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೃಷಿ ಹೊಂಡಗಳು ಸಹಾಯಕ್ಕೆ ಬರಲಿವೆ ಎಂಬುದು ರೈತರ ಸಂತಸಕ್ಕೆ ಕಾರಣವಾಗಿದೆ.

ಮೈದುಂಬಿದ ಹಳ್ಳಕೊಳ್ಳಗಳು: ರಭಸದ ಮಳೆಗೆ ತಾಲ್ಲೂಕಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಅದರಲ್ಲೂ ತಾಲ್ಲೂಕಿನ ಸುರಕೋಡ, ಕುರ್ಲಗೇರಿ, ಹದಲಿ, ಗಂಗಾಪುರ ಬಳಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದೆ. ನರಗುಂದ– ರೋಣ ಮಧ್ಯೆ ಯಾವಗಲ್ ಬಳಿ ಬೆಣ್ಣೆ ಹಳ್ಳ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ರೈತರು ಜಾಗರೂಕರಾಗಿ ಹೊಲದತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಬಿಸಿಲಿನಿಂದ ಕಂಗೆಟ್ಟ ಜಾನುವಾರು, ಪ್ರಾಣಿ, ಪಕ್ಷಿಗಳು ಹಳ್ಳದಲ್ಲಿ ಮಿಂದು ನೀರು ಕುಡಿಯುವ ದೃಶ್ಯಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ.

ಮಲಪ್ರಭೆ ಆರ್ಭಟ: ತಾಲ್ಲೂಕಿನ ಅರೆ ನೀರಾವರಿಗೆ ಆಸರೆಯಾದ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಮಲಪ್ರಭೆ ನದಿ ಮೇಲ್ಭಾಗ ಬೆಳಗಾವಿ ಜಿಲ್ಲೆಯ ಖಾನಾಪುರದ ಬಳಿ ಹೆಚ್ಚಿನ ಮಳೆ ಆಗುತ್ತಿರುವ ಪರಿಣಾಮ ತಾಲ್ಲೂಕಿನ ಕೊಣ್ಣೂರ ಬಳಿಯ ಮಲಪ್ರಭೆ ತುಂಬಿ ಹರಿಯುತ್ತಿದೆ.

ಹಿಂದೆ ಇದೇ ನದಿ ಉಕ್ಕಿ ಹರಿದು ಬೆಳೆಯನ್ನು ಆಪೋಶನ ಪಡೆದಿತ್ತು. ಮಲಪ್ರಭೆ ಈಗ ಮತ್ತೇ ತುಂಬಿ ಹರಿಯುತ್ತಿದೆ. ಈಗಾಗಲೇ ತಾಲ್ಲೂಕು ಆಡಳಿತ ಸುತ್ತಲಿನ ಗ್ರಾಮಗಳ ರೈತರಿಗೆ ಎಚ್ಚರಿಕೆ ನೀಡಿದೆ. ಆದರೆ, ಮಲಪ್ರಭೆ ಸಮರ್ಪಕವಾಗಿ ಹರಿದರೆ ನೀರಾವರಿ ಬೆಳೆಗಳಿಗೆ ವರದಾನವಾಗಲಿದೆ ಎನ್ನುತ್ತಾರೆ ರೈತರು.

‘ತಾಲ್ಲೂಕಿನ ಕೆಲವು ಭಾಗದ ಜಮೀನುಗಳು ಜಲಾವೃತಗೊಂಡಿವೆ. ಮಳೆ ಬಿಡುವು ಕೊಟ್ಟ ತಕ್ಷಣ ಮುಂಗಾರು ವಾಣಿಜ್ಯ ಬೆಳೆಗಳಾದ ಹೆಸರು, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಮೆಣಸಿನಕಾಯಿ ಬೀಜ ಬಿತ್ತನೆಗೆ ರೈತರು ಸಿದ್ದರಾಗಿದ್ದು, ಭೂತಾಯಿ ಉಡಿ ತುಂಬತೇವಿ. ಅವಳು ಫಲ ಕೊಡುತ್ತಾಳೆ’ ಎಂದು ರೈತರು ವಿಶ್ವಾಸ ವ್ಯಕ್ಚಪಡಿಸಿದ್ದಾರೆ.

‘ರೈತರು ತಮ್ಮ ಜಮೀನಿನ ಫಲವತ್ತಾದ ಮಣ್ಣು ಮಳೆಗಾಲದಲ್ಲಿ ಕೊಚ್ಚಿ ಹೋಗಬಾರದೆಂದು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಬದುಗಳನ್ನು ನಿರ್ಮಿಸಿದ್ದರು. ಆದರೆ, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಬದುಗಳಿಗೆ ಹಾನಿಯಾಗಿದೆ. ಜಮೀನುಗಳಲ್ಲಿರುವ ಫಲವತ್ತಾದ ಮಣ್ಣು ಮಳೆ ನೀರಿಗೆ ಕೊಚ್ಚಿ ಹೋಗುತ್ತಿದೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಬದುಗಳಿಗೆ ಹಾನಿ'

‘ಮೃಗಶಿರಾ ಮಳೆ ಹರ್ಷ ತಂದಿದೆ. ಆದರೆ ಜಮೀನುಗಳ ರಕ್ಷಣೆಗೆ ನಿರ್ಮಿಸಿದ ಬದುಗಳು ನಿರಂತರ ಮಳೆಯ ಕಾರಣದಿಂದ ಕಿತ್ತುಕೊಂಡು ಹೋಗಿವೆ. ಇದರಿಂದಾಗಿ ಫಲವತ್ತಾದ ಮಣ್ಣು ಮಳೆ ನೀರಿನ ಜೊತೆ ಹೋಗಿ ಜಮೀನುಗಳು ಶಕ್ತಿ ಕಳೆದುಕೊಳ್ಳುತ್ತಿವೆ. ಮಳೆಯ ರಭಸ ನಮಗೆ ತೊಂದರೆ ಉಂಟು ಮಾಡಿದೆ’ ಎಂದು ಕುರ್ಲಗೇರಿಯ ರೈತ ಯಲ್ಲಪ್ಪ ಚಲುವಣ್ಣವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT