ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಗಳ ಮುಸ್ಲಿಂ ದ್ವೇಷ ಬಹಿರಂಗ

ಅಂಜುಮನ್‌ ಎ ಇಸ್ಲಾಂ ಸಂಸ್ಥೆ ಕಿಡಿ: ಆದೇಶ ಹಿಂಪಡೆಯದಿದ್ದರೆ ಹೋರಾಟ
Last Updated 28 ಮಾರ್ಚ್ 2023, 5:38 IST
ಅಕ್ಷರ ಗಾತ್ರ

ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವರ್ಗ 2ಬಿ ಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ರದ್ದುಗೊಳಿಸಿದ್ದು, ಕೂಡಲೇ ಇದನ್ನು ಕೈಬಿಡಬೇಕು. ಇಲ್ಲದಿದ್ದರೆ, ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಗದಗ-ಬೆಟಗೇರಿ ಅಂಜುಮನ್‌ ಎ ಇಸ್ಲಾಂ ಸಂಸ್ಥೆಯ ಕಾರ್ಯದರ್ಶಿ ಇಮ್ತಿಯಾಜ್‌ ಆರ್.ಮಾನ್ವಿ ಎಚ್ಚರಿಸಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘1995ರಲ್ಲಿ ಅಂದಿನ ರಾಜ್ಯ ಸರ್ಕಾರ ಕೆ.ರೆಹಮಾನಖಾನ್‌ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಿತ್ತು. ಆ ಸಮಿತಿಯು ರಾಜ್ಯದ ಮುಸ್ಲಿಂ ಸಮುದಾಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ತುಂಬಾ ಹಿಂದುಳಿದಿದೆ ಎಂದು ವರದಿ ನೀಡಿತ್ತು. ಅದರಂತೆ ಅಂದಿನ ವೀರಪ್ಪ ಮೊಯಿಲಿ ಸರ್ಕಾರ ಮುಸ್ಲಿಮರನ್ನು ಮುಖ್ಯವಾಹಿನಿಗೆ ತರಲು ಪ್ರವರ್ಗ 2ಬಿ ಅಡಿಯಲ್ಲಿ ಶೇ 4ರಷ್ಟು ಮೀಸಲಾತಿ ಜಾರಿಗೆ ತಂದರು’ ಎಂದು ತಿಳಿಸಿದರು.

ಆದರೆ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ರಾಜ್ಯದಲ್ಲಿ 2ಬಿ ಮೀಸಲಾತಿಯನ್ನು ರದ್ದು ಮಾಡಿದ್ದಾರೆ. ಇದು ಒಂದು ಸಮುದಾಯಕ್ಕೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ವಂಚಿಸುವ ಕುತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸ್ಥೆಯ ಖಜಾಂಚಿ ಬಾಷಾಸಾಬ್‌ ಮಲ್ಲಸಮುದ್ರ ಮಾತನಾಡಿ, ‘ಪ್ರಧಾನಮಂತ್ರಿ ಮೋದಿ ಅವರು ಸಬ್ ಕಾ ಸಾಥ್‌ ಸಬ್ ಕಾ ವಿಕಾಸ್ ಎಂದು ಹೇಳುತ್ತಿದ್ದಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡಲಾಗುತ್ತಿದ್ದ ಪ್ರವರ್ಗ 2ಬಿ ಶೇ 4ರಷ್ಟು ಪ್ರತ್ಯೇಕ ಮೀಸಲಾತಿಯನ್ನು ರದ್ದುಗೊಳಿಸಿ ಪ್ರಧಾನಮಂತ್ರಿಗಳ ಘೋಷಣೆಗೆ ತದ್ದವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಮುಸ್ಲಿಂ ಸಮುದಾಯವು ಸರಳವಾಗಿ ಶಿಕ್ಷಣವನ್ನು ಪಡೆಯಬಾರದು ಮತ್ತು ಮೀಸಲಾತಿಯ ಮೂಲಕ ಸರ್ಕಾರಿ ಸೇವೆಗೆ ಸೇರಬಾರದೆನ್ನುವ ಏಕೈಕ ದುರದ್ದೇಶದಿಂದ ಈ ನಿರ್ಣಯವನ್ನು ಮುಖ್ಯಮಂತ್ರಿಗಳು ಕೈಗೊಂಡಿದ್ದು, ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಸ್ಲಿಮರಿಗೆ ಸಂವಿಧಾನಬದ್ಧವಾಗಿ ನೀಡಲಾಗುತ್ತಿದ್ದ ಶೇ 4 ಮೀಸಲಾತಿಯನ್ನು ಏಕಾಏಕಿ ರದ್ದು ಮಾಡಿ ಮುಖ್ಯಮಂತ್ರಿಗಳು ತಮ್ಮ ಮುಸ್ಲಿಂ ದ್ವೇಷವನ್ನು ಬಹಿರಂಗಪಡಿಸಿದ್ದಾರೆ. ಮೀಸಲಾತಿ ರದ್ದುಗೊಳಿಸಿರುವುದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ’ ನೀಡಿದರು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹಮದ್‌ ಯೂಸುಫ್‌ ನಮಾಜಿ, ಮೌಲಾನಾ ಇನಾಯತುಲ್ಲಾ ಪೀರಜಾದೆ, ಜಾಮಿಯಾ ಮಸೀದಿ ಕಮಿಟಿ ಕಾರ್ಯದರ್ಶಿ ಮಕ್ಬೂಲ್‌ಸಾಬ ಶಿರಹಟ್ಟಿ, ಅಂಜುಮನ ಸಂಸ್ಥೆಯ ಉಪಾಧ್ಯಕ್ಷ ಬಾಬಾಜಾನ ಬಳಗಾನೂರ, ಅನ್ವರ್‌ ಶಿರಹಟ್ಟಿ, ರಫೀಕ್ ಜಮಾಲಖಾನವರ ಇದ್ದರು.

*

ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಮುಖ್ಯಮಂತ್ರಿಗಳು ಸರ್ವಾಧಿಕಾರ ಧೋರಣೆ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ.
–ಇಮ್ತಿಯಾಜ್‌ ಮಾನ್ವಿ, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT