ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕೈಜೋಡಿಸಿ

ಗ್ರಾಮೀಣಾಭಿವೃದ್ಧಿ ವಿವಿ ಎರಡನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಗೆಹಲೋತ್
Last Updated 31 ಮಾರ್ಚ್ 2022, 4:31 IST
ಅಕ್ಷರ ಗಾತ್ರ

ಗದಗ: ‘ಕೃಷಿ ದೇಶದ ಆತ್ಮ ಮತ್ತು ಬೆನ್ನೆಲುಬಾಗಿದ್ದು, ಭಾರತೀಯ ಆರ್ಥಿಕತೆಯ ಮೂಲ ಸ್ತಂಭವಾಗಿದೆ. ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲು ಗ್ರಾಮಗಳು ಮತ್ತು ಕೃಷಿ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕು’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

ನಗರದ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಭಾರತದ ಪಂಚಾಯತ್‌ರಾಜ್ ವ್ಯವಸ್ಥೆ ಅತಿ ಪ್ರಾಚೀನವಾಗಿದ್ದು, ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯವು ಗ್ರಾಮೀಣ ಸಮಾಜವನ್ನು ಅಭಿವೃದ್ಧಿಪಡಿಸಲು ಮತ್ತು ಗ್ರಾಮೀಣ ಜನರ ಜೀವನದ ಗುಣಮಟ್ಟ ಸುಧಾರಿಸಲು ಶ್ರಮಿಸುತ್ತಿದೆ. ಜತೆಗೆ ಆರ್ಥಿಕ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ದೂರದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ದೇಶದ ತಾಪಮಾನ ಹೆಚ್ಚಾಗುತ್ತಿರುವುದು ಅಪಾಯದ ಸಂಕೇತವಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ಹೆಚ್ಚುವ ಸಾಧ್ಯತೆ ಇದೆ. ಆದ್ದರಿಂದ, ಈಗಿನಿಂದಲೇ ಜಲಸಂರಕ್ಷಣೆಗೆ ಆದ್ಯತೆ ನೀಡುವುದರ ಜತೆಗೆ ನೀರನ್ನು ಮಿತವಾಗಿ ಬಳಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಯುವ ಸಮುದಾಯವು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸಿ ಏಕ ಭಾರತ ಶ್ರೇಷ್ಠ ಭಾರತ ನಿರ್ಮಿಸುವ ಗುರಿ ಹೊಂದಬೇಕಿದೆ. ಭಾರತಕ್ಕೆ ವಿಶ್ವಗುರುವಿನ ಗೌರವವನ್ನು ಮತ್ತೆ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ದೃಢಹೆಜ್ಜೆ ಇಡಬೇಕಿದೆ. ಶಿಕ್ಷಣ, ಕೌಶಲ ಮತ್ತು ನೈತಿಕ ಮೌಲ್ಯಗಳ ಮೂಲಕ ಹೊಸ ಭಾರತ, ಶ್ರೇಷ್ಠ ಭಾರತ, ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಕೇರಳ ರಾಜ್ಯದ ಆರನೇ ಹಣಕಾಸು ಆಯೋಗದ ಅಧ್ಯಕ್ಷ ಎಸ್.ಎಂ.ವಿಜಯಾನಂದ ಮಾತನಾಡಿ, ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿದ್ಯಾರ್ಥಿಗಳು ತರಗತಿಯೊಳಗೆ ಕುಳಿತು ಕಲಿಯುವುದಕ್ಕಿಂತ ಹೊರಗೆ ಕಲಿತು, ಅಭಿವೃದ್ಧಿಗೆ ಮುನ್ನುಡಿ ಬರೆಯುವುದು ಮುಖ್ಯ’ ಎಂದು ಹೇಳಿದರು.

ಗದಗ ಜಿಲ್ಲೆಯಲ್ಲಿ ಉತ್ತಮ ನಾಯಕರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಹಣ ಲಭ್ಯವಿದ್ದು ಜಿಲ್ಲೆಯ ಕೆಲವು ಗ್ರಾಮ ಪಂಚಾಯ್ತಿಗಳಾದರೂ ಸ್ವಯಂ ಪ್ರೇರಿತವಾಗಿ ಗಾಂಧಿಯನ್‌ ಗ್ರಾಮ ಪಂಚಾಯತ್‌ ಡೆವಲಪ್‌ಮೆಂಟ್‌ ಪ್ಲಾನ್‌ (ಜಿಪಿಡಿಪಿ) ಅನುಸಾರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಹೇಳಿದರು.

ಖಾದಿ ಉತ್ಪನ್ನವಲ್ಲ. ಅದು ಆರ್ಥಿಕ ಬೆಳವಣಿಗೆಗೆ ಪೂರಕವಾದ ಅಂಶ. ಅದರಲ್ಲೂ ಸ್ಥಳೀಯ ಆರ್ಥಿಕಾಭಿವೃದ್ಧಿಗೆ ಖಾದಿ ಉದ್ಯಮ ಪೂರಕವಾಗಲಿದೆ. ಸ್ಥಳೀಯ ಉದ್ಯೋಗವಕಾಶಗಳನ್ನೂ ಸೃಷ್ಟಿಸುತ್ತದೆ ಎಂದು ಹೇಳಿದರು.

ಈಗಿನ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಆದರೆ ಅಭಿವೃದ್ಧಿಯ ವಿಸ್ತರಣೆ ಅಂದರೆ ಜನರ ಬಳಿಗೆ ಹೋಗುವುದು. ಅವರ ಬಳಿ ಕುಳಿತು ಮಾತನಾಡುವುದು. ಅವರ ವೃತ್ತಿ, ಕೌಶಲಗಳಿಗೆ ಗೌರವ ಕೊಡುವುದರ ಜತೆಗೆ ಜ್ಞಾನ, ವಿಚಾರಗಳ ವಿನಿಮಯ ಮಾಡಿಕೊಳ್ಳುವುದಾಗಿದೆ. ಆಗ ಮಾತ್ರ ಅಭಿವೃದ್ಧಿಗೆ ವೇಗ ಸಿಗುತ್ತದೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಷ್ಣುಕಾಂತ ಎಸ್.ಚಟಪಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಸಂಕಷ್ಟದಲ್ಲಿ ಬದುಕುತ್ತಿರುವವರಿಗೆ ಧ್ವನಿ ಆಗಬೇಕು. ವಿಶ್ವವಿದ್ಯಾಲಯ ನೀಡಿದ ಜ್ಞಾನವನ್ನು ಬಳಸಿ ವಿದ್ಯಾರ್ಥಿಗಳು ಗ್ರಾಮರಾಜ್ಯ ನಿರ್ಮಾಣ ಮಾಡಬೇಕು. ಈ ಮೂಲಕ ವಿಶ್ವವಿದ್ಯಾಲಯಕ್ಕೆ ಹಾಗೂ ರಾಷ್ಟ್ರಕ್ಕೆ ಒಳ್ಳೆಯ ಹೆಸರು ತರಬೇಕು’ ಎಂದು ಹೇಳಿದರು.

ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ, ವಿತ್ತಾಧಿಕಾರಿ ಪ್ರಶಾಂತ ಜೆ.ಸಿ. ಸೇರಿದಂತೆ ವಿಶ್ವವಿದ್ಯಾಲಯದ ಪರಿಷತ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್., ಎಸ್‌ಪಿ ಶಿವಪ್ರಕಾಶ್‌ ದೇವರಾಜು, ಮಾಜಿ ಶಾಸಕ ಡಿ.ಆರ್.ಪಾಟೀಲ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ರಾಜ್ಯಪಾಲ ತಾವರಚಂದ್ ಗೆಹ್ಲೋಟ್‌ ಅವರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು.

ಗೌರವ ಡಾಕ್ಟರೇಟ್ ಪ್ರದಾನ

ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ಇಬ್ಬರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಶಿಕ್ಷಣ ಮತ್ತು ಸಂಶೋಧನೆ, ಗ್ರಾಮೀಣ ಜನರ ಉನ್ನತಿ ಮತ್ತು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಕ್ಷೇತ್ರದಲ್ಲಿನ ಕೊಡುಗೆಗಾಗಿ ಶಿಕ್ಷಣ ತಜ್ಞ ಡಾ. ಎಸ್.ಎಸ್.ಮೀನಾಕ್ಷಿಸುಂದರಂ ಹಾಗೂ ಸಾಮಾಜಿಕ, ಆರ್ಥಿಕವಾಗಿ ತುಳಿತಕ್ಕೊಳಗಾದ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಉನ್ನತಿಗಾಗಿ ಮತ್ತು 4000ಕ್ಕೂ ಹೆಚ್ಚು ಮಹಿಳೆಯರನ್ನು ದೇವದಾಸಿಯರ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಅವರಿಗೆ ಕಾನೂನುಬದ್ಧ ಹಕ್ಕುಗಳನ್ನು ನೀಡಿ ಸಬಲೀಕರಣಗೊಳಿಸಲು ಸಾಮಾಜಿಕ ಚಳವಳಿಯ ನೇತೃತ್ವ ವಹಿಸಿದ ಸೀತವ್ವ ದುಂಡಪ್ಪ ಜೋಡಟ್ಟಿ ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಧರ್ಮ, ಸಂಸ್ಕೃತಿ, ಸಾಮಾಜಿಕ ಆಸಕ್ತಿ, ಜ್ಞಾನ-ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವಿಸುವುದು ನಮ್ಮ ಕರ್ತವ್ಯ. ಡಾಕ್ಟರೇಟ್‌ ಸ್ವೀಕರಿಸಿದ ಸಾಧಕರೇ ಯುವಕರಿಗೆ ಪ್ರೇರಣೆ

ಥಾವರಚಂದ್‌ ಗೆಹಲೋತ್‌, ರಾಜ್ಯಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT