ಗಜೇಂದ್ರಗಡ/ಹೊಳೆಆಲೂರು: ಮಂಗೋಲಿಯಾ ಮತ್ತು ಚೀನಾದೇಶದ ಕ್ರೌಂಚ ಪಕ್ಷಿಗಳು (Demoiselle crane) ಈ ಬಾರಿಯ ಚಳಿಗಾಲದ ಋತುವಿನಲ್ಲಿ ಪ್ರಥಮ ಬಾರಿಗೆ ಗದಗ ಜಿಲ್ಲೆಯ ಗಜೇಂದ್ರಗಡ ಮತ್ತು ರೋಣ ವಲಯದ ಕೆರೆಗಳಿಗೆ ವಲಸೆ ಬಂದಿದ್ದು ಪಕ್ಷಿಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.
ಈ ಕ್ರೌಂಚ ಪಕ್ಷಿಗಳು ಚಳಿಗಾಲವನ್ನು ಭಾರತದಲ್ಲಿ ಕಳೆದು ಇಲ್ಲಿ ಬೇಸಿಗೆ ಆರಂಭವಾದ ನಂತರ ಪುನಃ ತಮ್ಮ ಮೂಲಸ್ಥಾನಕ್ಕೆ ಮರಳುತ್ತವೆ. ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕ್ರೌಂಚ ಪಕ್ಷಿಗಳಿಗೆ ಸಾಂಸ್ಕೃತಿಕ ಮಹತ್ವವನ್ನೇ ನೀಡಲಾಗಿದೆ.
ಈ ರಾಜ್ಯಗಳಲ್ಲಿ ಕೊಂಜ ಅಥವಾ ಕುರ್ಜಾ ಎನ್ನುತ್ತಾರೆ. ನಮ್ಮ ಭಾಗದಲ್ಲಿ ಸ್ಥಳೀಯವಾಗಿ ಕ್ರೌಂಚ ಪಕ್ಷಿಗಳನ್ನು ಕೊರಕೊಂಚ, ಕಡ್ಲಿಗೊಂಚಲ, ಗೊಂಗಾ ಎಂದು ಕರೆಯುವರು. ಇವು ಗ್ರುಡೇ ಕುಟುಂಬಕ್ಕೆ ಸೇರಿದ ಪಕ್ಷಿಗಳಾಗಿದ್ದು ವೈಜ್ಞಾನಿಕವಾಗಿ ‘ಗ್ರಸ್ ವರ್ಗೊ’ ಎನ್ನುವರು. ಈ ಪಕ್ಷಿಗಳು ಅತಿ ಎತ್ತರ ಮತ್ತು ದೂರದ ಸ್ಥಾನವನ್ನು ಹಿಮಾಲಯ ಪರ್ವತದ ಮೂಲಕ ಡಿಸೆಂಬರ್ ಮೊದಲ ವಾರದಲ್ಲಿ ಭಾರತದ ಉಷ್ಣವಲಯ ರಾಜ್ಯಗಳ ಜೌಗುಪ್ರದೇಶಗಳಿಗೆ ವಲಸೆ ಬರುತ್ತವೆ.
ತಂಡದ ಶ್ರಮ: ಗದಗ ಜಿಲ್ಲೆಯ ಜೌಗು ಪ್ರದೇಶಗಳಲ್ಲಿನ ವಲಸೆ ಹಕ್ಕಿಗಳ ದಾಖಲೀಕರಣದ ಸಂದರ್ಭದಲ್ಲಿ ಈ ಕ್ರೌಂಚ ಪಕ್ಷಿಗಳನ್ನು ಗಜೇಂದ್ರಗಡ ವಲಯದ ಜೀಗೆರಿ ಕೆರೆ ಮತ್ತು ರೋಣ ವಲಯದ ಜಿಗಳೂರಿನ ಹೊಸಕೆರೆಯಲ್ಲಿ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್ ನಾಯಕ, ರೋಣ ಉಪವಲಯ ಅರಣ್ಯಾಧಿಕಾರಿ ಅನ್ವರ್ ಕೊಲ್ಹಾರ, ಪರಿಸರ ಪ್ರೇಮಿ ಸಂಗಮೇಶ ಎಸ್.ಕಡಗದ, ಗುಂಡುರಾವ್ ಕುಲಕರ್ಣಿ, ಶರಣು.ಕೆ.ಗೌಡರು ಪತ್ತೆಹಚ್ಚಿದ್ದಾರೆ.
ಕಾಮನ್ ಕ್ರೇನ್ ಡೆಮೊಸೆಲ್ ಕ್ರೇನ್ ಸಮೋಹದ ಜೊತೆ ಅಕಸ್ಮಾತಾಗಿ ಬಂದಿರುತ್ತದೆ. ಇದು ಪುನಃ ಈ ಗುಂಪಿನೊಂದಿಗೆ ಚಳಿಗಾಲ ಮುಗಿದ ನಂತರವೇ ಮೂಲಸ್ಥಾನಕ್ಕೆ ಮರಳುತ್ತದೆ. ಕಾಮನ್ ಕ್ರೇನ್ ಕರ್ನಾಟಕದಲ್ಲಿ ದಾಖಲಾಗಿರುವುದು ತೀರಾ ವಿರಳ.
ಬೀದರ್ ಮತ್ತು ರಾಯಚೂರನಲ್ಲಿ ದಾಖಲಾಗಿರುವದನ್ನು ಬಿಟ್ಟರೆ ಗದಗ ಜಿಲ್ಲೆಯಲ್ಲಿ ಇತ್ತೀಚೆಗೆ ದಾಖಲಾಗಿರುತ್ತದೆ. ಯಾವುದೇ ವಿದೇಶಿ ವಲಸೆ ಹಕ್ಕಿಗಳಿಗೆ ಇಲ್ಲಿರುವ ಜೌಗು ಪ್ರದೇಶಗಳು ತಮ್ಮ ವಲಸೆ ವಾಸಕ್ಕೆ ಸುರಕ್ಷಿತವೆಂದು ಖಚಿತವಾದರೆ ಪ್ರತಿವರ್ಷ ವಲಸೆ ಹಕ್ಕಿಗಳು ಇಂತಹ ಜೌಗುಪ್ರದೇಶಗಳಿಗೆ ವಲಸೆಬರುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.
*
ಅಕಾಲಿಕ ಮಳೆ, ವಾತವರಣ ದಲ್ಲಿನ ವ್ಯತ್ಯಾಸ ಹಕ್ಕಿಗಳ ವಲಸೆ ಮಾರ್ಗ ಪಥದಲ್ಲಿ ಬದಲಾವಣೆಯಾಗಿ ಜೌಗು ಪ್ರದೇಶಕ್ಕೆ ಬಂದಿವೆ. ಈ ಹಿಂದೆ ಕುಷ್ಟಗಿಯ ನಿಡಶೇಸಿ ಕೆರೆ, ಆಲಮಟ್ಟಿ ಹಿನ್ನೀರಿನ ಕಂಡು ಬಂದಿದ್ದವು.
-ಮಂಜುನಾಥ ಎಸ್ ನಾಯಕ, ಜೀವ ವೈವಿಧ್ಯ ಸಂಶೋಧಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.