ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ಪ್ರೀತಿಯಿಂದ ಒಳ್ಳೆಯ ವೈದ್ಯನಾದೆ’

ಗದಗ ಜಿಲ್ಲೆಯ ಜನರ ಹೃದಯದಲ್ಲಿ ಸ್ಥಾನ ಪಡೆದ ಡಾ. ಸೋಲೊಮನ್‌
Last Updated 30 ಜೂನ್ 2019, 19:30 IST
ಅಕ್ಷರ ಗಾತ್ರ

ಗದಗ: ಎರಡು ದಶಕಗಳ ಹಿಂದಿನ ಘಟನೆ. ನಮ್ಮ ಆಸ್ಪತ್ರೆಯಲ್ಲಿ ಗ್ರಾಮೀಣ ಪ್ರದೇಶದಿಂದ ಬಂದಿದ್ದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ನವಜಾತ ಶಿಶುವಿನ ಗಂಟಲಲ್ಲಿ ಸಮಸ್ಯೆ ಇತ್ತು. ಹನಿ ನೀರು ಸಹ ಮಗುವಿನ ಗಂಟಲು ಮೂಲಕ ಇಳಿಯುತ್ತಿರಲಿಲ್ಲ. ತಕ್ಷಣ ಶಸ್ತ್ರಚಿಕಿತ್ಸೆ ನಡೆಸದಿದ್ದರೆ ಮಗುವಿನ ಜೀವಕ್ಕೇ ಅಪಾಯ ಇತ್ತು. ಶಸ್ತ್ರಚಿಕಿತ್ಸೆಗೆ ₹35 ಸಾವಿರವನ್ನು ಅವರು ಆಸ್ಪತ್ರೆಯಲ್ಲಿ ಕಟ್ಟಬೇಕಿತ್ತು. ಬಡವರಾಗಿದ್ದ ಅವರ ಬಳಿ ಅಷ್ಟು ಮೊತ್ತ ಇರಲಿಲ್ಲ. ಹೀಗಾಗಿ ಇದರಲ್ಲಿ ಅರ್ಧ ₹17 ಸಾವಿರ ಪಾವತಿಸಿದರೆ ಸಾಕು ಎಂದು ಹೇಳಿದೆವು.

ಆದರೆ, ₹17 ಸಾವಿರ ಇರಲಿ, ಅವರ ಬಳಿ ₹500 ಕೂಡ ಇರಲಿಲ್ಲ. ಆ ಮಹಿಳೆಯ ಗಂಡ ತೀವ್ರ ಕುಡುಕನಾಗಿದ್ದ. ಅವನನ್ನು ಕರೆದು ಹೇಳಿದೆವು ‘ಮಗುವಿನ ಶಸ್ತ್ರಚಿಕಿತ್ಸೆಗೆ ಒಂದು ನಯಾಪೈಸೆಯನ್ನೂ ಕೊಡುವುದು ಬೇಡ. ಸಂಪೂರ್ಣ ಉಚಿತವಾಗಿ ಮಾಡುತ್ತೇವೆ. ಆದರೆ, ಒಂದು ಷರತ್ತು. ಇಂದಿನಿಂದ ನೀನು ಕುಡಿತವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇದಕ್ಕೆ ಒಪ್ಪುವುದಾದರೆ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಆತ ಒಪ್ಪಿದ. ಶಸ್ತ್ರಚಿಕಿತ್ಸೆಯಿಂದ ಮಗು ಬದುಕುಳಿಯಿತು. ಆ ನಂತರ ಎಂದೂ ಆತ ಕುಡಿದಿಲ್ಲ.

ಗದುಗಿನ ‘ಜರ್ಮನ್‌ ಆಸ್ಪತ್ರೆ’ ಎಂದೇ ಖ್ಯಾತವಾದ ಸಿಎಸ್‌ಐ ಬಾಸೆಲ್‌ ಮಿಶನ್‌ ಆಸ್ಪತ್ರೆಯಲ್ಲಿ ನಾಲ್ಕು ದಶಕಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಡಾ.ಸೋಲೊಮನ್ ಅವರು ತಮ್ಮ ವೈದ್ಯ ವೃತ್ತಿಯಲ್ಲಿ ಎದುರಾದ ಘಟನೆಯೊಂದನ್ನು ಸ್ಮರಿಸಿಕೊಂಡಿದ್ದು ಹೀಗೆ. ಇಂತಹ ಅಸಂಖ್ಯ ಘಟನೆಗಳು ಅವರ ನೆನಪಿನ ಬುತ್ತಿಯಲ್ಲಿವೆ.

ಡಾ. ಸೋಲೊಮನ್‌ ಅವರು ‘ವೈದ್ಯೋ ನಾರಾಯಣ ಹರಿ' ಎಂಬ ಮಾತಿಗೆ ಮೌಲ್ಯ ತುಂಬಿದವರು. ಗದಗ ಮಾತ್ರವಲ್ಲ, ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಜನರು ಇಂದಿಗೂ ಅವರ ವೈದ್ಯಕೀಯ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. 1980ರಲ್ಲಿ ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿನಿಂದ (ಸಿಎಂಸಿ) ಎಂಬಿಬಿಎಸ್‌ ಮುಗಿಸಿಕೊಂಡು, ಕಾಲೇಜಿನ ಒಪ್ಪಂದದಂತೆ, ಎರಡು ವರ್ಷ ಮಿಶನರಿ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸಲು ಗದುಗಿನ ಸಿಎಸ್‌ಐ ಆಸ್ಪತ್ರೆಗೆ ಬಂದವರು ಅವರು. 2 ವರ್ಷ ಸೇವೆ ಸಲ್ಲಿಸಿ, ವಾಪಸ್‌ ಹೋಗಲು ಬಂದಿದ್ದ ಅವರು, ಮುಂದೆ 39 ವರ್ಷಗಳ ಕಾಲ ಗದುಗಿನಲ್ಲೇ ನೆಲೆ ನಿಂತು, ಈ ಭಾಗದ ಜನರ ಹೃದಯದಲ್ಲಿ ಸ್ಥಾನ ಪಡೆದ್ದು ವಿಶೇಷ.

‘ಎಂಭತ್ತರ ದಶಕದಲ್ಲಿ ಗದುಗಿಗೆ ಬಂದಾಗ ನನಗೆ 23 ವರ್ಷ. ಈಗ 63. ಈ ಜಿಲ್ಲೆಯ ಜನರ ಪ್ರೀತಿ ನನಗೆ ಎಲ್ಲವನ್ನೂ ನೀಡಿದೆ’ ಎಂದು ತಮಿಳುನಾಡಿನ ಕನ್ಯಾಕುಮಾರಿ ಸಮೀಪದ ಗ್ರಾಮದವರಾದ ಡಾ. ಸೋಲೊಮನ್‌ ಕೃತಜ್ಞತೆಯಿಂದ ಸ್ಮರಿಸಿದರು.

ಈಗ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿವೆ. ರೋಗಪತ್ತೆ ತಂತ್ರಜ್ಞಾನ ಸುಧಾರಿಸಿದೆ. ಜೀವರಕ್ಷಕ ಉಪಕರಣಗಳ ಬಳಕೆ ಹೆಚ್ಚಿದೆ. ಆದರೆ, ದಶಕಗಳ ಹಿಂದೆ ಈ ಸೌಲಭ್ಯ ಇರಲಿಲ್ಲ. ಇಲ್ಲಿನ ಸಿಎಸ್‌ಐ ಆಸ್ಪತ್ರೆಯಲ್ಲಿ ವೃತ್ತಿ ಆರಂಭಿಸುವಾಗ ಅನಸ್ತೇಷಿಯಾ ಸೌಲಭ್ಯ ಹೊರತುಪಡಿಸಿದರೆ ಬೇರೆ ಯಾವುದೇ ಸೌಲಭ್ಯ ಇರಲಿಲ್ಲ. ಕೃತಕ ಉಸಿರಾಟದ ವ್ಯವಸ್ಥೆಯೂ ಇಲ್ಲವಾದ್ದರಿಂದ ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳು ಕಣ್ಣೆದುರಿನ ವೈದ್ಯರನ್ನೇ ದೇವರಾಗಿ ಕಾಣುತ್ತಿದ್ದರು. ವೈದ್ಯರೂ ಅಷ್ಟೇ ಸೇವಾ ಮನೋಭಾವನೆಯಿಂದ ರೋಗಿಗಳನ್ನು ಉಪಚರಿಸುತ್ತಿದ್ದರು ಎಂದು ಅವರು ಹೇಳಿದರು.

ರಕ್ತದಾನ ಮಾಡಿ ಜೀವ ಉಳಿಸಿ: ಈಗ ಗದುಗಿನಲ್ಲಿ ಬ್ಲಡ್‌ ಬ್ಯಾಂಕ್‌ ಆರಂಭಗೊಂಡಿದೆ. ಆದರೆ, ಹಿಂದೆ ಇರಲಿಲ್ಲ. ರಕ್ತಸ್ರಾವ, ಶಸ್ತ್ರಚಿಕಿತ್ಸೆ, ಹೆರಿಗೆ ಮುಂತಾದ ತುರ್ತು ಸಂದರ್ಭಗಳಲ್ಲಿ ವೈದ್ಯರೇ ರಕ್ತದಾನ ಮಾಡಿ, ರೋಗಿಯ ಜೀವ ಉಳಿಸುತ್ತಿದ್ದರು.‘ವೈದ್ಯಕೀಯ ವಿದ್ಯಾರ್ಥಿ ಆಗಿದ್ದಾಗಲೇ ರಕ್ತದಾನ ಮಾಡುತ್ತಿದ್ದೆ. ವೈದ್ಯನಾದ ನಂತರ 200ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿರಬಹುದು. ರಕ್ತದಾನಕ್ಕೆ ಜೀವದಾನದಷ್ಟೇ ಮಹತ್ವ ಇದೆ’ ಎಂದು ಡಾ. ಸೋಲೊಮನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT