ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಹಟ್ಟಿ | ಬರಗಾಲದಿಂದ ರೈತ ಕಂಗಾಲು: ಮಧ್ಯಂತರ ಪರಿಹಾರಕ್ಕಾಗಿ ಬೇಡಿಕೆ

ನಿಂಗಪ್ಪ ಹಮ್ಮಿಗಿ
Published 24 ನವೆಂಬರ್ 2023, 7:02 IST
Last Updated 24 ನವೆಂಬರ್ 2023, 7:02 IST
ಅಕ್ಷರ ಗಾತ್ರ

ಶಿರಹಟ್ಟಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ತಾಲ್ಲೂಕಿನಲ್ಲಿ ಬರಗಾಲ ಆವರಿಸಿದೆ. ಹಿಂಗಾರು ಮಳೆಗಾಗಿ ಬಕಪಕ್ಷಿಯಂತೆ ಕಾಯ್ದು ಕುಳಿತ ರೈತರಿಗೆ ಮಳೆಯಾಗದೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಆರ್ಥಿಕ ಸಂಕಷ್ಟ ಎದುರಾಗಿದೆ.

ಮಂಗಾರು ಪೂರ್ವದಲ್ಲಿ ಭೂಮಿ ಹದಗೊಳಿಸಿ, ಸಾಲ ಮಾಡಿ ಬೀಜ ಬಿತ್ತನೆ ಮಾಡಿದ್ದ ರೈತರ ಬೆಳೆಗಳು ಮಳೆ ಕೊರತೆಯಿಂದ ಸಂಪೂರ್ಣ ಹಾಳಾಗಿವೆ. ಹಿಂಗಾರು ಮಳೆ ಸಹ ವಾಡಿಕೆಗಿಂತ ಕಡಿಮೆಯಾಗಿದ್ದರಿಂದ ರೈತರು ಬರಗಾಲದ ಬವಣೆಯಲ್ಲಿ ಬೇಯುವಂತಾಗಿದೆ.

ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆ: ಮುಂಗಾರು ಆರಂಭಗೊಂಡ ಮೇ ತಿಂಗಳಲ್ಲಿ ವಾಡಿಕೆ ಮಳೆ 71 ಮಿ.ಮೀ ಇದ್ದರೆ ಬಿದ್ದ ಮಳೆ ಕೇವಲ 32.9 ಮಿ.ಮೀ. ಮಾತ್ರ. ಜೂನ್‌ನಲ್ಲಿ 98ಕ್ಕೆ 56.9 ಮಿ.ಮೀ., ಆಗಸ್ಟ್‌ನಲ್ಲಿ 91ಕ್ಕೆ 12 ಮಿ.ಮೀ. ಆಗಿದ್ದರೆ ಸೆಪ್ಟೆಂಬರ್‌ನಲ್ಲಿ 127 ಮಿ.ಮೀ. ಮಳೆ ಆಗಬೇಕಿದ್ದ ಕಡೆ; ಕೇವಲ 47.4 ಮಿ.ಮೀ. ಮಳೆಯಾಗಿದೆ. ಇದೇ ರೀತಿ ಹಿಂಗಾರು ಸಹ ಅಕ್ಟೋಬರ್‌ನಲ್ಲಿ 126 ಮಿ.ಮೀ. ವಾಡಿಕೆ ಮಳೆಗೆ 6.8 ಮಿ.ಮೀ., ನವೆಂಬರ್ 92ಕ್ಕೆ 16 ಮಿ.ಮೀ. ಮಳೆ ಬಿದ್ದಿದೆ. ಇದುವರೆಗೆ ಒಟ್ಟು 737 ವಾಡಿಕೆ ಮಳೆಗೆ 336 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ 60ಕ್ಕೂ ಹೆಚ್ಚು ಮಳೆ ಕಡಿಮೆಯಾಗಿದೆ.

ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರಿನಲ್ಲಿ ನೀರಾವರಿ 560 ಹೆಕ್ಟೇರ್, ಖುಷ್ಕಿ 27,360 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿತ್ತು, ಅದರಲ್ಲಿ ನೀರಾವರಿ 2,600, ಖುಷ್ಕಿ 2,500 ಹೆಕ್ಟೇರ್ ಪ್ರದೇಶದಲ್ಲಿ ಬೀಜ ಬಿತ್ತನೆ ಮಾಡಿ ಶೇ 85 ಸಾಧನೆ ಮಾಡಲಾಗಿತ್ತು. ಅದೇ ರೀತಿ ಹಿಂಗಾರಿನಲ್ಲಿ 11,180 ಬಿತ್ತನೆ ಗುರಿ ಅದರಲ್ಲಿ 8,900 ಬಿತ್ತನೆ ಆಗಿದ್ದು, ಶೇ 81 ಗುರಿ ಸಾಧನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದೆ. ತಾಲ್ಲೂಕಿನ ಕೆಲವು ಬರ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ ನೀಡಿ ವರದಿ ತೆಗೆದುಕೊಂಡಿದೆ. ಅಲ್ಲದೇ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿದ ವರದಿಯನ್ನು ಸಹ ಕೇಂದ್ರಕ್ಕೆ ಸಲ್ಲಿಸಲಾಗಿದೆ. ವರದಿ ಅನುಮೋದನೆಗೊಂಡು ಪರಿಹಾರಕ್ಕಾಗಿ ತಾಲ್ಲೂಕಿನ ರೈತರು ಕಾಯ್ದು ಕುಳಿತಿದ್ದಾರೆ.

ತಾಲ್ಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆ ಸಂಪೂರ್ಣ ಹಾನಿಯಾಗಿದ್ದು, ಪರಿಹಾರಕ್ಕಾಗಿ ರೈತರು ಕಾಯುತ್ತಿದ್ದಾರೆ. ಕೃಷಿ ಹಾಗೂ ಕಂದಾಯ ಇಲಾಖೆಗಳು ಹಾಗೂ ಬೆಳವಿಮೆ ತಂಡ ತಾಲ್ಲೂಕಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡಿವೆ. ಪ್ರತಿವರ್ಷ ಕೇವಲ ವಿಮಾ ಕಂತು ಪಾವತಿ ಮಾಡಿ ಕಂಪನಿಗೆ ಲಾಭ ನೀಡುತ್ತಿರುವ ರೈತರಿಗೆ ಪ್ರಸಕ್ತ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆಗಳು ಬಹುತೇಕ ಹಾಳಾಗಿದ್ದು ಈ ಬಾರಿಯಾದರೂ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕೆಂಬುದು ತಾಲ್ಲೂಕಿನ ರೈತರ ಒಕ್ಕೊರಲಿನ ಒತ್ತಾಸೆಯಾಗಿದೆ.

ಮಳೆ ಇಲ್ಲದೆ ಶೇಂಗಾ ಬೆಳೆ ಒಣಗುತ್ತಿರುವುದು
ಮಳೆ ಇಲ್ಲದೆ ಶೇಂಗಾ ಬೆಳೆ ಒಣಗುತ್ತಿರುವುದು
ತಾಲ್ಲೂಕಿನಲ್ಲಿ 28385 ಹೆಕ್ಟೇರ್ ಪ್ರದೇಶ ಬರಗಾಲ ಪೀಡಿತ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ₹45 ಲಕ್ಷ ಪರಿಹಾರವನ್ನು ತಾಲ್ಲೂಕಿನ ಹೆಸರು ಬೆಳೆದ ರೈತರಿಗೆ ನೀಡಲಾಗುತ್ತಿದೆ
ರೇವಣೆಪ್ಪ ಮನಗೂಳಿ ಕೃಷಿ ಇಲಾಖೆ ಅಧಿಕಾರಿ
ಈ ವರ್ಷದ ಪರಿಸ್ಥಿತಿ ಬಾಳ ಕೆಟೈತ್ರಿ. ಮಳಿ ಇಲ್ಲ ಬೆಳಿ ಇಲ್ಲ. ದನಕರಕ ಹೊಟ್ಟು ಇಲ್ದಂಗ ಆಗೈತ್ರಿ. ವರ್ಷಾ ಬೆಳಿವಿಮಿ ಕಟ್ಟಿದ್ರೂ ಉಪಯೋಗ ಆಗಿಲ್ಲ. ಈ ವರ್ಷ ಆದ್ರೂ ಪರಿಹಾರ ನೀಡ್ರಿ. ಇಲ್ಲಾ ಅಂದ್ರ ಗುಳಿ ಹೋಗೋದು ಅನಿವಾರ್ಯ ನೋಡ್ರಿ
ಹಾಲಮ್ಮ ಸಂಶಿ ರೈತ ಮಹಿಳೆ
ಸಮಸ್ಯೆಗಳ ಸುಳಿಯಲ್ಲಿ ರೈತ
ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಗೋವಿನ ಜೋಳ ಹತ್ತಿ ಹೆಸರು ಬೆಳೆಗಳು ಸಂಪೂರ್ಣ ಹಾಳಾಗಿವೆ. ಮುಖ್ಯ ಬೆಳೆಯಾದ ಶೇಂಗಾ ಬೆಳೆಯ ಫಸಲು ಕೈಗೆ ಸಿಗದೆ ಕಳೆದ ವಾರ ಆದ ಮಳೆಗೆ ಹೊಟ್ಟು ಸಹ ಕೆಟ್ಟು ದನಕರುಗಳಿಗೆ ಮೇವು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಗಾರದ ಬೆಲೆ ತೂಗುವ ಹೊಟ್ಟನ್ನು ಖರೀದಿ ಮಾಡವ ಶಕ್ತಿಯೂ ಸಹ ರೈತರಲ್ಲಿಲ್ಲ. ಆದ್ದರಿಂದ ಕೂಸಿನಂತೆ ಜೋಪಾನ ಮಾಡಿದ ಜಾನುವಾರುಗಳನ್ನು ಸಹ ಮಾರುತ್ತಿದ್ದಾರೆ. ಅಲ್ಲದೇ ಹೊಟ್ಟೆಪಾಡಿಗಾಗಿ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತಾಲ್ಲೂಕಿನ ರೈತರಿಗೆ ಶೀಘ್ರ ಪರಿಹಾರ ನೀಡಬೇಕೆಂಬುದು ರೈತ ಸಂಘಟನೆಗಳ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT