ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಗುಂದ: ಉತ್ತಮ ಲಾಭ ತಂದ ಹೈನೋದ್ಯಮ, ತಿಂಗಳಿಗೆ ₹4 ಲಕ್ಷ ವಹಿವಾಟು

ನಿತ್ಯ 450 ಲೀ. ಹಾಲು ಉತ್ಪಾದನೆ: ರೈತ ಮಹಾದೇವಪ್ಪ ಬಟ್ಟೂರ ಸಾಧನೆ
ಚಂದ್ರಶೇಖರ್ ಭಜಂತ್ರಿ
Published 24 ಮೇ 2024, 5:23 IST
Last Updated 24 ಮೇ 2024, 5:23 IST
ಅಕ್ಷರ ಗಾತ್ರ

ಮುಳಗುಂದ: ನಿತ್ಯ 450 ಲೀಟರ್ ಹಾಲು ಉತ್ಪಾದನೆ ಮೂಲಕ ತಿಂಗಳಿಗೆ ₹3 ಲಕ್ಷದಿಂದ ₹4 ಲಕ್ಷ ವಹಿವಾಟು ನಡೆಸುತ್ತಿರುವ ರೈತ ಮಹಾದೇವಪ್ಪ ಬಟ್ಟೂರ ಹೈನೋದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಮೂಲತಃ ರೈತ ಕುಟುಂಬದ ಮಹಾದೇವಪ್ಪ ಬಟ್ಟೂರು, ಬಾಲ್ಯದಲ್ಲಿ ಕಡುಬಡತನ ಅನುಭವಿಸಿದವರು. ತಮ್ಮ ಅನುಭವಗಳನ್ನೇ  ಮೆಟ್ಟಿಲಾಗಿಸಿಕೊಂಡು, ಯಶಸ್ವಿ ಉದ್ಯಮಿ, ಗುತ್ತಿಗೆದಾರನಾಗಿ ಸದ್ಯ ಹೈನೋದ್ಯಮದಲ್ಲಿಯೂ ಸಾಧನೆ ಮಾಡುತ್ತಿದ್ದು, ಹತ್ತಾರೂ ಜನರಿಗೆ ಉದ್ಯೋಗದಾತರೂ ಆಗಿದ್ದಾರೆ.

ಕಳೆದ 8 ವರ್ಷಗಳ ಹಿಂದೆ 10 ದೇಸಿ ಆಕಳ ಖರೀದಿಸಿ ಹೈನುಗಾರಿಕೆ ಆರಂಭಿಸಿದರು. ಈಗ 40 ದೇಸಿ ಆಕಳು ಸೇರಿದಂತೆ ಮೊರಾ ಎಮ್ಮೆ, ಜರ್ಸಿ ಆಕಳು, ಗೀರ್‌ ತಳಿಯ ಆಕಳು, ಕಾಕ್ರೋಜ್ ತಳಿ ಸೇರಿದಂತೆ 80ಕ್ಕೂ ಹೆಚ್ಚು ದನಗಳು ಅವರ ಕೊಟ್ಟಿಗೆಯಲ್ಲಿವೆ. ಸ್ಥಳೀಯ ಇಬ್ಬರು ಕೂಲಿಕಾರರು ಸೇರಿದಂತೆ ಉತ್ತರಪ್ರದೇಶದಿಂದ ಬಂದ ಮೂವರು ಕಾರ್ಮಿಕರಿಗೆ ದನಗಳ ನಿರ್ವಹಣೆ ಕೆಲಸ ವಹಿಸಲಾಗಿದೆ.

‘ಸದ್ಯ 40 ಆಕಳು, 7 ಮೊರಾ ಎಮ್ಮೆಗಳಿಂದ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಅಂದಾಜು 450 ಲೀಟರ್ ಹಾಲು ಬರುತ್ತಿದ್ದು, ಸರ್ಕಾರದ ಪ್ರೋತ್ಸಾಹಧನ ಸೇರಿದಂತೆ ಪ್ರತಿ ತಿಂಗಳು ₹4.10 ಲಕ್ಷ ಸಂಗ್ರಹವಿದ್ದು, ಇದರಲ್ಲಿ ₹1.80 ಲಕ್ಷ ದನಗಳ ಆಹಾರ ಮತ್ತು ₹65 ಸಾವಿರ ಕಾರ್ಮಿಕರ ಕೂಲಿ ಸೇರಿ ಒಟ್ಟು ₹2.45 ಲಕ್ಷ ಖರ್ಚಾಗಿ, ₹1.65 ಲಕ್ಷ ಆದಾಯ ಸಿಗುತ್ತದೆ’ ಎಂದು ರೈತ ಮಹಾದೇವಪ್ಪ ಬಟ್ಟೂರ ತಿಳಿಸಿದರು.

‘ದನಗಳಿಗೆ ಪರಿಪೂರ್ಣ ಆಹಾರ ಕೊಡುವ ವ್ಯವಸ್ಥೆ ಮಾಡಲಾಗಿದೆ. ಒಂದು ದಿನಕ್ಕೆ ಎರಡು ಹೊತ್ತಿನಲ್ಲಿ ಗೋಧಿ ತೌವಡು, ಬೋಸಾ, ಮಿಲ್ಕ್ ಮೋರ್ ಸೇರಿಸಿ ಒಟ್ಟು 7 ಕೆಜಿ ಆಹಾರ ಕೊಡಲಾಗುತ್ತದೆ. ಹಸಿ ಮತ್ತು ಒಣ ಮೇವು ಕತ್ತರಿಸಿ ನೀಡಲಾಗುತ್ತಿದೆ. ದನಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮುಂಜಾಗ್ರತಾ ಕ್ರಮವಾಗಿ ವೈದ್ಯರ ಸಲಹೆ ಪಡೆದು ಔಷಧೋಪಚಾರ ನಿರ್ವಹಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ದನಕರುಗಳ ಕಾಳಜಿ ಅಗತ್ಯ’

‘ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದ್ದು ಕೇವಲ ಕೂಲಿ ಕಾರ್ಮಿಕರನ್ನು ಇಟ್ಟುಕೊಂಡು ಲಾಭಗಳಿಸಲು ಸಾಧ್ಯವಿಲ್ಲ ನಾವು ಕೂಡ ದನಗಳ ಮಧ್ಯೆ ಇದ್ದು ಅವುಗಳ ಪಾಲನೆ ಪೋಷಣೆ ಮಾಡಲೇಬೇಕು. ದನಗಳ ಬಗ್ಗೆ ಜಾಗೃತಿ ವಹಿಸದಿದ್ದರೆ ನಷ್ಟ ತಪ್ಪಿದ್ದಲ್ಲ. ಹೀಗಾಗಿ ನಾನು ನಿತ್ಯ ಬೆಳಿಗ್ಗೆ ಮತ್ತು ಸಂಜೆ ಕೊಟ್ಟಿಗೆಗೆ ಬಂದು ದನಗಳನ್ನು ನೋಡಿ ಅವುಗಳ ಆರೋಗ್ಯ ಮತ್ತು ನಿತ್ಯ ಕೊಡುವ ಆಹಾರದ ಬಗ್ಗೆ ಕಾಳಜಿ ವಹಿಸಿದ್ದರಿಂದ ಈ ಯಶಸ್ಸು ಸಾಧ್ಯವಾಗಿದೆ’ ಎಂದು ರೈತ ಮಹಾದೇವಪ್ಪ ಬಟ್ಟೂರ ಹೇಳಿದರು. ‘ದನಕರುಗಳ ಜೊತೆಗೆ ಕಾಲ ಕಳೆಯುವುದರಿಂದ ನಮ್ಮ ಆರೋಗ್ಯವೂ ವೃದ್ದಿಯಾಗಿದೆ. ಅವುಗಳ ಸಗಣಿಯಿಂದ ಕೃಷಿ ಭೂಮಿಯು ಫಲವತ್ತಾಗಿದೆ’ ಎಂದು ಅನುಭವ ಹಂಚಿಕೊಂಡರು. 2023ರಲ್ಲಿ ಯಶಸ್ವಿ ಹೈನೋದ್ಯಮಿ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT