ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್: ಉಚಿತ ಶಿಕ್ಷಣದಲ್ಲಿ ಅರಳಿದ ಪ್ರತಿಭೆ

ಪಿಯು ವಿಜ್ಞಾನದಲ್ಲಿ ಗಮನಾರ್ಹ ಸಾಧನೆ ಮಾಡಿದ ರೈತನ ಮಗಳು
ಚಂದ್ರು ಎಂ. ರಾಥೋಡ್‌
Published 16 ಏಪ್ರಿಲ್ 2024, 6:01 IST
Last Updated 16 ಏಪ್ರಿಲ್ 2024, 6:01 IST
ಅಕ್ಷರ ಗಾತ್ರ

ನರೇಗಲ್:‌ ಹೊಲದಲ್ಲಿ ಬೆವರು ಸುರಿಸಿ ಕೆಲಸ ಮಾಡಿ ಬದುಕಿನ ಬಂಡಿ ಸಾಗಿಸುವ ಅನಕ್ಷರಸ್ಥ ರೈತನ ಮಗಳು ಈ ಬಾರಿಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಓದಿಗೂ ಬಡತನಕ್ಕೂ ಸಂಬಂಧವಿಲ್ಲ ಎಂಬುದನ್ನು ನಿರೂಪಿಸಿದ್ದಾಳೆ.

ಗದಗ ಜಿಲ್ಲೆಯ ಡೋಣಿ ಗ್ರಾಮದ ರೈತ ಈರಣ್ಣ ಅಂಗಡಿಯವರ ಮಗಳು ಪುಷ್ಪಾ ಅಂಗಡಿ ನರೇಗಲ್‌ ಪಟ್ಟಣದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.

ಉಪನ್ಯಾಸಕರ ನಿರಂತರ ಪರಿಶ್ರಮದ ಫಲವಾಗಿ ವಿದ್ಯಾರ್ಥಿನಿ ಕನ್ನಡದಲ್ಲಿ 98, ಇಂಗ್ಲಿಷ್‌ನಲ್ಲಿ 94, ಭೌತಶಾಸ್ತ್ರದಲ್ಲಿ 97, ರಸಾಯನ ಶಾಸ್ತ್ರದಲ್ಲಿ 97, ಗಣಿತದಲ್ಲಿ 99, ಜೀವಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. 600ಕ್ಕೆ 585 ಅಂಕಗಳನ್ನು ಗಳಿಸಿ ಶೇ 97.50 ಫಲಿತಾಂಶ ದಾಖಲಿಸುವ ಮೂಲಕ ಗದಗ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 14ನೇ ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಧಾರ್ಮಿಕ, ಆಧ್ಯಾತ್ಮಿಕ ಕಾರ್ಯದ ಜತೆಗೆ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಲಿಂಗೈಕ್ಯ ಅಭಿನವ ಅನ್ನದಾನ ಸ್ವಾಮಿಗಳ ಹೆಸರಿನಲ್ಲಿ ಕಾಲೇಜಿನ ವತಿಯಿಂದ 2023-24ನೇ ಸಾಲಿನಲ್ಲಿ ಆರಂಭಿಸಲಾದ ‘ಅಭಿನವಶ್ರೀ ಶಿಷ್ಯ ವೇತನ’ ಪಡೆದ ಮೊದಲ ವಿದ್ಯಾರ್ಥಿನಿ ಪುಷ್ಪಾ ಅಂಗಡಿ.

ಬಡ ವಿದ್ಯಾರ್ಥಿಗಳ ಬಾಳಿಗೆ ಅಕ್ಷರದ ಬೆಳಕು ನೀಡುವುದು ನಮ್ಮ ಗುರುಗಳ ಆಸೆ. ಅವರ ಹೆಸರಿನಲ್ಲಿ ಆರಂಭಿಸಿದ ಶಿಷ್ಯವೇತನ ಸದ್ಬಳಕೆ ಆಗಿರುವುದು ಖುಷಿ ನೀಡಿದೆ.
ಮುಪ್ಪಿನ ಬಸವಲಿಂಗ ಸ್ವಾಮೀಜಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರು

ಈ ಶಿಷ್ಯ ವೇತನದ ಅಡಿಯಲ್ಲಿ ಆಯ್ಕೆಯಾಗುವ ಪ್ರತಿಭಾವಂತ ಬಡ ಮಕ್ಕಳಿಗೆ ಎರಡು ವರ್ಷ ಊಟ–ವಸತಿ ಸಹಿತ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತದೆ. ಡೋಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1–10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ಪುಷ್ಪಾ, ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಳು.

ಈಕೆ ತಂದೆ ಈರಣ್ಣ ಎರಡು ಎಕರೆ ಭೂಮಿಯಲ್ಲಿ ದುಡಿಯುತ್ತಿದ್ದರೆ, ತಾಯಿ ಸುಜಾತ ಕಲ್ಲು, ಸಿಮೆಂಟ್, ಉಸುಕು ನೀಡುವ‌ ಕಟ್ಟಡ ನಿರ್ಮಾಣದ ಕೆಲಸಕ್ಕೆ ಹೋಗುತ್ತಾರೆ. ಕಡುಬಡತನದ ಹಿನ್ನೆಲೆಯಲ್ಲಿ ಡೋಣಿ ಗ್ರಾಮದ ಶಿಕ್ಷಕರು ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಶ್ರೀಗಳಿಗೆ ಭೇಟಿಯಾಗಿ ಉಚಿತ ಶಿಕ್ಷಣ ನೀಡುವಂತೆ ಕೋರಿದ್ದರು. ನಂತರ ಪಿಯು ಪ್ರವೇಶ ಪಡೆದ ವಿದ್ಯಾರ್ಥಿನಿ ವಿಶ್ವಾಸಕ್ಕೆ ಧಕ್ಕೆ ಬರದಂತೆ ಚೆನ್ನಾಗಿ ಓದಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸದ್ಯ ಕಾಲೇಜಿನಲ್ಲಿಯೇ ನಡೆದಿರುವ ಉಚಿತ ನೀಟ್‌ ತರಬೇತಿಯನ್ನು ಪಡೆಯುತ್ತಿದ್ದಾರೆ. ಪುಷ್ಪಾ ಪ್ರತಿಭಾವಂತ ವಿದ್ಯಾರ್ಥಿನಿ ಎನ್ನುತ್ತಾರೆ ಪ್ರಾಚಾರ್ಯ ವೈ.ಸಿ.ಪಾಟೀಲ.

ಕಾಲೇಜಿನವರು ಒದಗಿಸಿದ ಉಚಿತ ಶಿಕ್ಷಣ ಹಾಗೂ ಗುರುಗಳ ಮಾರ್ಗದರ್ಶನ ಉತ್ತಮ ಅಂಕಗಳಿಸಲು ಸಾಧ್ಯವಾಯಿತು. ಮುಂದೆ ವೈದ್ಯೆಯಾಗಿ ಸಮಾಜ ಸೇವೆ ಮಾಡುವ ಕನಸು ಇದೆ.
ಪುಷ್ಪಾ ಅಂಗಡಿ, ವಿದ್ಯಾರ್ಥಿನಿ
ಪುಷ್ಪಾ ಅಂಗಡಿ
ಪುಷ್ಪಾ ಅಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT