ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಬರ ಪರಿಹಾರಕ್ಕೆ ಆಗ್ರಹಿಸಿ ಬಾರಕೋಲು ಪ್ರತಿಭಟನೆ

Published 27 ಮೇ 2024, 13:25 IST
Last Updated 27 ಮೇ 2024, 13:25 IST
ಅಕ್ಷರ ಗಾತ್ರ

ಮುಂಡರಗಿ (ಗದಗ ಜಿಲ್ಲೆ): ತಾರತಮ್ಯವಿಲ್ಲದೆ ತಾಲ್ಲೂಕಿನ ಎಲ್ಲ ರೈತರಿಗೆ ಸಮರ್ಪಕವಾಗಿ ಬರ ಹಾಗೂ ಬೆಳೆನಷ್ಟ ಪರಿಹಾರವನ್ನು ವಿತರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ರೈತರು ಸೋಮವಾರ ಪಟ್ಟಣದಲ್ಲಿ ಬೃಹತ್ ಬಾರುಕೋಲು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ರೈತರು ಪಟ್ಟಣದ ಕೋಟೆ ಆಂಜನೇಯನ ದೇವಸ್ಥಾನದ ಬಳಿ ಜಮಾಯಿಸಿದರು. ಟ್ಯಾಕ್ಟರ್, ಎತ್ತು, ಬಂಡಿ ಮೊದಲಾದವುಗಳೊಂದಿಗೆ ಬಾರಕೋಲು ಪ್ರತಿಭಟನೆ ಆರಂಭಿಸಿದರು.

ಕೋಟೆ ಆಂಜನೇಯ ದೇವಸ್ಥಾನದಿಂದ ಹೊರಟ ಪ್ರತಿಭಟನಕಾರರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ಕೊಪ್ಪಳ ವೃತ್ತ ಸೇರಿದರು. ಅಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ನಂತರ ತಹಶೀಲ್ದಾರ್ ಕಚೇರಿಗೆ ತೆರಳಿದರು.

ಕಳೆದ ವರ್ಷ ಸಕಾಲದಲ್ಲಿ ಮಳೆಯಾಗದ ಕಾರಣ ತಾಲ್ಲೂಕಿನಾದ್ಯಂತ ಒಟ್ಟು 29 ಸಾವಿರ ರೈತರು ಬೆಳೆನಷ್ಟ ಅನುಭವಿಸಿದ್ದಾರೆ. ಆದರೆ ಈವರೆಗೂ ಸರ್ಕಾರ 17 ಸಾವಿರ ರೈತರಿಗೆ ಮಾತ್ರ ಪರಿಹಾರ ಮಂಜೂರು ಮಾಡಿದೆ. ಇನ್ನುಳಿದ 12 ಸಾವಿರ ರೈತರಿಗೆ ತಕ್ಷಣ ಪರಿಹಾರ ವಿತರಿಸಬೇಕು ಎಂದು ರೈತರು ಆಗ್ರಹಿಸಿದರು.

ಬೆಳೆನಷ್ಟ ಅನುಭವಿಸಿದ ರೈತರಿಗೆ ಬರ ಹಾಗೂ ಬೆಳೆನಷ್ಟ ವಿತರಿಸುವಲ್ಲಿ ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ. ಕೆಲವು ರೈತರಿಗೆ ಹೆಚ್ಚು ಪರಿಹಾರ ಹಾಗೂ ಕೆಲವು ರೈತರಿಗೆ ಕಡಿಮೆ ಪರಿಹಾರ ವಿತರಿಸಿದ್ದಾರೆ. ಯಾವ ಮಾನದಂಡಗಳ ಆಧಾರದಲ್ಲಿ ಪರಿಹಾರ ವಿತರಿಸಲಾಗಿದೆ ಎನ್ನುವುದು ರೈತರಿಗೆ ತಿಳಿಯದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಂಗಟಾಲೂರ ಏತ ನೀರಾವರಿ ಯೋಜನೆಯ ಅಡಿಯಲ್ಲಿ ಹನಿ ನೀರಾವರಿ ಬದಲಾಗಿ ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಒದಗಿಸಬೇಕು. ಸಕಾಲದಲ್ಲಿ ಎಲ್ಲ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಹಾಗೂ ಮತ್ತಿತರ ಕೃಷಿ ಪರಿಕರಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಪ್ರತಿ ಹಳ್ಳಿಯಲ್ಲಿಯೂ ತಲಾ 100 ಎಕರೆ ವ್ಯಾಪ್ತಿಯ ಕೆರೆಗಳನ್ನು ನಿರ್ಮಿಸಬೇಕು. ರೈತರಿಗೆ ಸಾಲ ನೀಡುವ ಸಮಯದಲ್ಲಿ ಸಿಬಿಲ್ ಅಂಕಗಳನ್ನು ಪರಿಗಣಿಸಬಾರದು. ರೈತರಿಗೆ ಸಮರ್ಪಕವಾಗಿ ತ್ರಿಫೇಸ್‌ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಬ್ಯಾಂಕ್‌ಗಳಿಂದ ಬೆಳೆಸಾಲ ಪಡೆದ ರೈತರಿಗೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿ ಹಣ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಮಳೆ ಇಲ್ಲದೇ ರೈತರೆಲ್ಲ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆಸಾಲ ವಸೂಲಾತಿಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಬೆಳೆವಿಮೆ ತಾರತಮ್ಯವನ್ನು ಸರಿಪಡಿಸಿ, ಬೆಳೆವಿಮೆ ತುಂಬಿದ ಎಲ್ಲ ರೈತರಿಗೂ ಬೆಳೆವಿಮೆ ವಿತರಿಸಬೇಕು. ಪಟ್ಟಣದಲ್ಲಿರುವ ಎಪಿಎಂಸಿಯಲ್ಲಿ ರೈತ ಭವನ ಹಾಗೂ ರೈತರಿಗೆ ವಸತಿ ಗೃಹಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ತಹಶೀಲ್ದಾರ್ ಧನಂಜಯ್ ಮಾಲಗತ್ತಿ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಅಹವಾಲು ಸ್ವೀಕರಿಸಿದರು.

‌ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌., ‘ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಬೆಳೆನಷ್ಟ ಹಾಗೂ ಬರ ಪರಿಹಾರ ವಿತರಣೆಯ ಕಾರ್ಯವನ್ನು ಕೈಗೊಂಡಿದ್ದಾರೆ. ಕಂದಾಯ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ರೈತರ ಎಲ್ಲ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.

ಪೊಲೀಸರು ಬಂದೋಬಸ್ತ್‌ ಕೈಕೊಂಡಿದ್ದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಇಟಗಿ, ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಕಂಬಳಿ, ರೈತ ಮುಖಂಡರಾದ ಚಂದ್ರಕಾಂತ ಇಟಗಿ, ಜಾಯನಗೌಡ್ರ, ರಾಘವೇಂದ್ರ ಕುರಿ, ದೇವಪ್ಪ ಡೊಣ್ಣಿ, ಸುರೇಶ ಹಡಪದ, ಯಂಕಪ್ಪ ಬಾರಕೇರ, ಹಾಲಪ್ಪ ಅರಹುಣಸಿ, ಶರಣಪ್ಪ ಶಿವಸಿಂಪಿಗೇರ, ಅಶ್ವಿನಿ ಬೀಡನಾಳ, ಈಶ್ವರಗೌಡ್ರ ನಾಡಗೌಡ್ರ, ಚನಬಸಪ್ಪ ಕಲ್ಲಳ್ಳಿ, ರವಿಗೌಡ ಪಾಟೀಲ, ಲಕ್ಷ್ಮವ್ವ ಹಟ್ಟಿ, ಹುಸೇನಸಾಬ್ ಸುಂಕದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT