ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಭರದಿಂದ ಭತ್ತ ಒಕ್ಕುತ್ತಿರುವ ರೈತರು

Published 9 ಮೇ 2024, 6:41 IST
Last Updated 9 ಮೇ 2024, 6:41 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯ ಮೇಲಿರುವ ಗ್ರಾಮಗಳಲ್ಲಿ ಭತ್ತದ ಒಕ್ಕಲು ಭರದಿಂದ ಸಾಗಿದ್ದು, ಭತ್ತ ಬೆಳೆದ ಬಹುತೇಕ ರೈತರು ಮುಂಗಾರು ಆರಂಭಕ್ಕೂ ಮುನ್ನ ಒಕ್ಕಲನ್ನು ಪೂರ್ಣಗೊಳಿಸುವ ಸಿದ್ಧತೆಯಲ್ಲಿದ್ದಾರೆ.

ಲೋಕಸಭಾ ಚುನಾವಣೆ ಘೋಷಣೆಯಾಗುತ್ತದ್ದಂತೆಯೆ ಭತ್ತದ ಒಕ್ಕಲು ಆರಂಭವಾಗಿದ್ದು, ತಾಲ್ಲೂಕಿನ ಇನ್ನೂ ಕೆಲವು ಭಾಗಗಲ್ಲಿ ರೈತರು ಭತ್ತದ ಕೊಯ್ಲು ಮಾಡುವುದಕ್ಕೆ ಸಜ್ಜಾಗಿದ್ದಾರೆ. ತಾಲ್ಲೂಕಿನ ನದಿ ದಂಡೆಯ ಮೇಲಿರುವ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಗಂಗಾಪೂರ, ಶೀರನಹಳ್ಳಿ, ಶಿಂಗಟಾಲೂರು, ಹಮ್ಮಿಗಿ, ಗುಮ್ಮಗೋಳ, ಬಿದರಳ್ಳಿ, ಮುಂಡವಾಡ ಮೊದಲಾದ ಭಾಗಗಳಲ್ಲಿ ರೈತರು ಒಟ್ಟು 2,800ಹೆಕ್ಟೆರ್ ಪ್ರದೇಶದಲ್ಲಿ ಭತ್ತವನ್ನು ಬೆಳೆದಿದ್ದಾರೆ. ಬಹುತೇಕ ರೈತರು ಈಗಾಗಲೆ ಭತ್ತವನ್ನು ಕೊಯ್ಲು ಮಾಡಿದ್ದು, ಶೇ.20ರಷ್ಟು ರೈತರು ಇನ್ನೂ ಕೊಯ್ಲು ಮಾಡಬೇಕಿದೆ.

ಬಹುತೇಕ ರೈತರು ಭತ್ತದ ಮಾರಾಟಕ್ಕೆ ಮುಂದಾಗಿದ್ದು, ಖರೀದಿದಾರರು ಹಾಗೂ ಏಜೆಂಟರು ರೈತರ ಜಮೀನುಗಳಿಗೆ ಆಗಮಿಸಿ ಸ್ಥಳದಲ್ಲಿಯೆ ಭತ್ತವನ್ನು ಖರೀದಿಸುತ್ತಿದ್ದಾರೆ. ಸದ್ಯಕ್ಕೆ ₹1,800ರಿಂದ ₹2,200  ಒಂದು ಚೀಲ ಭತ್ತ (75 ಕೆಜಿ ಭರ್ತಿ) ಮಾರಾಟವಾಗುತ್ತಿದೆ. ದಾವಣಗೆರೆ, ಕೊಪ್ಪಳ, ಗಂಗಾವತಿ, ಮಲೇಬೆನ್ನೂರು ಮೊದಲಾದ ಭಾಗಗಳಿಂದ ಖರೀದಿದಾರರು ಹಾಗೂ ಏಜಂಟರು ಭತ್ತ ಖರೀಧಿಗೆ ಆಗಮಿಸುತ್ತಿದ್ದಾರೆ. ಸ್ಥಳದಲ್ಲಿಯೇ ಭತ್ತ ಮಾರಾಟವಾಗುವುದರಿಂದ ರೈತರಿಗೆ ಭತ್ತ ಸಾಗಾಣಿಕೆಯ ವೆಚ್ಚ, ಹಮಾಲಿ ವೆಚ್ಚ ಮೊದಲಾದವುಗಳ ಭಾರ ಕಡಿಮೆಯಾಗುತ್ತದೆ ಎನ್ನುವುದು ಲೆಕ್ಕಾಚಾರ.

‘ಭತ್ತ ಮಾರಾಟ ಮಾಡಿದ ತಕ್ಷಣ ಹಣ ಬೇಕಾದಲ್ಲಿ ರೈತರು ಖರೀದಿದಾರರಿಗೆ ಅಥವಾ ಏಜಂಟರಿಗೆ ₹100ಕ್ಕೆ  ಶೇ 2ರಷ್ಟು ಕಮೀಷನ್ ಕೊಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಒಂದು ತಿಂಗಳ ನಂತರ ಹಣ ಬೇಕಾದರೆ ಯಾವುದೇ ಶುಲ್ಕವಿಲ್ಲದೆ ರೈತರ ಹಣವನ್ನು ಪಾವತಿಸಲಾಗುತ್ತದೆ’ ಎಂದು ತಾಲ್ಲೂಕಿನ ರೈತರು ತಿಳಿಸಿದರು.

‘ರೈತರು ಒಂದು ಎಕರೆ ಭತ್ತ ನಾಟಿ ಮಾಡಲು ಬೀಜ, ಗೊಬ್ಬರ, ಕ್ರಿಮಿನಾಶಕ, ಕೂಲಿಯಾಳುಗಳ ವೇತನ ಮೊದಲಾದವುಗಳೆಲ್ಲ ಸೇರಿ ಸುಮಾರು ₹25 ಸಾವಿರದಿಂದ ₹35 ಸಾವಿರ ಖರ್ಚು ಮಾಡಬೇಕಾಗುತ್ತದೆ. ಒಂದು ಎಕರೆ ಜಮೀನಿನಲ್ಲಿ ಸುಮಾರು 30-40 ಚೀಲ ಭತ್ತ ಬೆಳೆಯಬಹುದಾಗಿದ್ದು, ಖರ್ಚು-ವೆಚ್ಚಗಳನ್ನು ಕಳೆದು ರೈತರು ಎಕರೆಗೆ ₹20 ಸಾವಿರದಿಂದ ₹25 ಸಾವಿರ ಆದಾಯ ಪಡೆದುಕೊಳ್ಳಬಹುದು‘ ಎಂದು ರೈತರು ಹೇಳುತ್ತಾರೆ.

ಬೇಸಿಗೆಯಲ್ಲಿ ನದಿಯಲ್ಲಿ ನೀರು ಬತ್ತುವುದರಿಂದ ರೈತರು ಸೀಮಿತ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಬೇಕಾಗುತ್ತದೆ. ಈ ವರ್ಷ ನದಿಯಲ್ಲಿ ನೀರಿಲ್ಲದ್ದರಿಂದ ಬಹುತೇಕ ರೈತರು ಬೆಳೆ ನಷ್ಟ ಅನುಭವಿಸುವಂತಾಗಿದ್ದು, ಕೆಲವು ರೈತರು ನಿರೀಕ್ಷಿಸಿದಷ್ಟು ಫಸಲು ಬಾರದಂತಾಗಿದೆ. ಮುಂಗಾರು ಹಂಗಾಮಿನಲ್ಲಿ ಮಳೆಯಾಗುವುದರಿಂದ ಮತ್ತು ನದಿಯಲ್ಲಿ ಸಾಕಷ್ಟು ನೀರು ದೊರೆಯುವುದರಿಂದ ಸಾಕಷ್ಟು ಇಳುವರಿ ದೊರೆಯುತ್ತದೆ.

ತುಂಗಭದ್ರಾ ನದಿಯಲ್ಲಿ ನೀರು ಹರಿಯದ್ದರಿಂದ ಭತ್ತದ ಇಳುವರಿ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಅನ್ಯ ಬೆಳೆಗಳಿಗೆ ಹೋಲಿಸಿದರೆ ಭತ್ತದ ಬೆಳೆಯಿಂದ ರೈತರು ಸ್ವಲ್ಪ ಆದಾಯ ಪಡೆದುಕೊಂಡಿದ್ದಾರೆ
ಮಾರುತಿ ಕೊಳಲ ಚಂದ್ರಶೇಖರ ಮಜ್ಜಿಗಿ ಭತ್ತ ಬೆಳೆದ ರೈತರು ಕೊರ್ಲಹಳ್ಳಿ
ಭತ್ತದ ಹುಲ್ಲಿನಿಂದಲೂ ಲಾಭ
ಭತ್ತದ ಕೊಯ್ಲಿನ ನಂತರ ಜಮೀನಿನಲ್ಲಿ ಉಳಿಯುವ ಭತ್ತದ ಹುಲ್ಲನ್ನು ರೈತರು ಮಾರಾಟ ಮಾಡುತ್ತಾರೆ. ಒಂದು ಟ್ಯ್ರಾಕ್ಟರ್ ಭತ್ತದ ಹುಲ್ಲು ₹1500ರಿಂದ ₹2 ಸಾವಿರವರೆಗೂ ಮಾರಾಟವಾಗುತ್ತದೆ. ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿರುವುದರಿಂದ ಜಾನುವಾರುಗಳಿಗೆ ಹೊಟ್ಟು ಮೇವು ದೊರೆಯದಂತಾಗಿದೆ. ಹೀಗಾಗಿ ಜಾನುವಾರುಗಳುಳ್ಳ ರೈತರು ಭತ್ತದ ಹುಲ್ಲು ಖರೀದಿಗೆ ಮುಂದಾಗಿದ್ದಾರೆ. ಈ ಕಾರಣದಿಂದಾಗಿ ಭತ್ತದ ಹುಲ್ಲು ಕಳೆದ ವರ್ಷಕ್ಕಿಂತ ಈ ವರ್ಷ ಜೋರಾಗಿ ಮಾರಾಟವಾಗುತ್ತಲಿದೆ. ಜಿಲ್ಲೆಯ ವಿವಿಧ ಭಾಗಗಳ ರೈತರು ಜಮೀನುಗಳಿಗೆ ಆಗಮಿಸಿ ಭತ್ತದ ಹುಲ್ಲನ್ನು ಖರೀದಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT