ಗುರುವಾರ , ಮೇ 26, 2022
28 °C
₹39.92 ಕೋಟಿ ವೆಚ್ಚದಲ್ಲಿ ಕಳಪೆ ಕಾಮಗಾರಿಯ ಆರೋಪ; ಶಾಶ್ವತ ‍ಪರಿಹಾರಕ್ಕೆ ಆಗ್ರಹ

ಅವೈಜ್ಞಾನಿಕ ಫ್ಲೋಟಿಂಗ್‌ ಬಾರ್ಜ್‌: ಶಾಶ್ವತ ‍ಪರಿಹಾರಕ್ಕೆ ಆಗ್ರಹ

ಖಲೀಲಅಹ್ಮದ ಶೇಖ Updated:

ಅಕ್ಷರ ಗಾತ್ರ : | |

Prajavani

ಶಿರಹಟ್ಟಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ತಾಲ್ಲೂಕಿನ 38 ಗ್ರಾಮಗಳಿಗೆ ಪೂರೈಕೆ ಮಾಡುವ ನೀರನ್ನು ತುಂಗಭದ್ರಾ ನದಿಯಲ್ಲಿ ನಿರ್ಮಿಸಿರುವ ಫ್ಲೋಟಿಂಗ್‌ ಬಾರ್ಜ್‌ ಮೂಲಕ ಸರಬರಾಜು ಮಾಡುವ ಯೋಜನೆ ಅವೈಜ್ಞಾನಿಕವಾಗಿದ್ದು, ಪ್ರತಿ ವರ್ಷ ಬರುವ ಪ್ರವಾಹದಲ್ಲಿ ಬಾರ್ಜ್‌ಗಳು ಕೊಚ್ಚಿ ಹೋಗುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ತಾಲ್ಲೂಕಿನ ತುಂಗಭದ್ರಾ ನದಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ನೈರ್ಮಲ್ಯ ಇಲಾಖೆ ವತಿಯಿಂದ ವಿಶ್ವ ಬ್ಯಾಂಕ್‌ ನೆರವಿನ ಜಲ ನಿರ್ಮಲ ಯೋಜನೆ ಅಡಿಯಲ್ಲಿ ₹39.92 ಕೋಟಿ ವೆಚ್ಚದಲ್ಲಿ ಶಿರಹಟ್ಟಿ ತಾಲ್ಲೂಕಿನ ಆದರಹಳ್ಳಿ ಹಾಗೂ ಇತರೆ 37 ಗ್ರಾಮಗಳಿಗೆ ಬಹುಗ್ರಾಮ ನದಿ ನೀರು ಸರಬರಾಜು ಮಾಡುವ ಯೋಜನೆ 2018 ಅಗಸ್ಟ್‌ನಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.

ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಇಲ್ಲಿಂದ ಎಲ್ಲಾ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. 38 ಗ್ರಾಮಗಳಿಗೆ 13 ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹಣೆ ಮಾಡಿ ಪೂರೈಕೆ ಮಾಡಲಾಗುತ್ತದೆ. ಪುಟ್ಟಗಾವ್‌ ಬಡ್ನಿ ಹಾಗೂ ಶೆಟ್ಟಿಕೇರಿಯಲ್ಲಿ ಒಂದೊಂದು ಸಂಪುಗಳನ್ನು ಅಳವಡಿಸಲಾಗಿದೆ.

ಪ್ರತಿ ವರ್ಷ ತುಂಗಭದ್ರಾ ನದಿಯಲ್ಲಿ ಉಂಟಾಗುವ ಪ್ರವಾಹಕ್ಕೆ ಕೊಚ್ಚಿ ಹೋಗುವ ಫ್ಲೋಟಿಂಗ್‌ ಬಾರ್ಜ್, ವರ್ಷದಲ್ಲಿ 4ರಿಂದ 5 ತಿಂಗಳು ಕಾರ್ಯನಿರ್ವಹಿಸುವುದಿಲ್ಲ‌. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಗ್ರಾಮೀಣ ಭಾಗದ ಜನರ ಆಗ್ರಹ.

‘ತಾಲ್ಲೂಕಿನಲ್ಲಿ ಈ ವರ್ಷ ಸುರಿದ ಭಾರಿ ಮಳೆಗೆ ಫ್ಲೋಟಿಂಗ್‌ ಬಾರ್ಜ್‌ ಸಂಪೂರ್ಣ ಹಾಳಾಗಿದ್ದು, ಇದನ್ನು ದುರಸ್ತಿಗೊಳಿಸಲು ₹20 ಲಕ್ಷ ಅನುದಾನ ಒದಗಿಸಬೇಕು ಎಂದು ಇಲಾಖೆ ಪ್ರಸ್ತಾವ ಸಲ್ಲಿಸಿದೆ. ಅಧಿಕಾರಿಗಳು ಅವೈಜ್ಞಾನಿಕವಾಗಿ ನಿರ್ಮಿಸಿರುವ ಫ್ಲೋಟಿಂಗ್‌ ಬಾರ್ಜ್‌ ಯೋಜನೆಯಿಂದ ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ ಪ್ರತಿ ವರ್ಷ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದು ದುರಂತವೇ ಸರಿ’ ಎಂದು ನಾರಾಯಣಪೂರ ಗ್ರಾಮದ ರಮೇಶ, ಕನಕವಾಡ ಗ್ರಾಮದ ಹಾಶೀಮಪೀರ ಹೇಳಿದ್ದಾರೆ.

ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಕೆ

‘ಹೊಳೆಇಟಗಿಯಲ್ಲಿ ಹರಿಯುವ ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸಿರುವ ಫ್ಲೋಟಿಂಗ್ ಬಾರ್ಜ್‌ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಮತ್ತು ಶಾಶ್ವತವಾಗಿ ಜಾಕ್‌ವೆಲ್‌ ನಿರ್ಮಾಣ ಮಾಡಲು ₹1.50 ಕೋಟಿ ಅನುದಾನ ಒದಗಿಸಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿ.ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು