ಗುರುವಾರ , ಮೇ 19, 2022
20 °C

ಲಿಂಗೈಕ್ಯ ಶ್ರೀಗಳ ಪಾದದ ದೂಳಿಗೂ ಸಮವಿಲ್ಲ: ದಿಂಗಾಲೇಶ್ವರ ಶ್ರೀ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಗೆ ಭಾಜನರಾದ ದಕ್ಷಿಣ ಭಾರತದ ಏಕೈಕ ಸ್ವಾಮೀಜಿ ಲಿಂ.ಸಿದ್ಧಲಿಂಗ ಶ್ರೀಗಳು. ಅವರು ಕನ್ನಡದ ಜಗದ್ಗುರು, ಭಾವೈಕ್ಯತೆಯ ಹರಿಕಾರರೆಂದೇ ಜನಜನಿತರಾಗಿದ್ದಾರೆ. ಇಂತಹ ಸಂತರ ಬಗ್ಗೆ ಮಾತನಾಡುವ ದಿಂಗಾಲೇಶ್ವರರು ಲಿಂಗೈಕ್ಯ ಶ್ರೀಗಳ ಪಾದದ ದೂಳಿಗೂ ಸಮವಿಲ್ಲ’ ಎಂದು ಮಠದ ಭಕ್ತರಾದ ದಾನಯ್ಯ ಗಣಾಚಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ತೋಂಟದಾರ್ಯ ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಮಂಗಳವಾರ ನಡೆದ ಭಕ್ತರ ಸಭೆಯಲ್ಲಿ ಮಾತನಾಡಿದರು.

‘44 ವರ್ಷಗಳ ಕಾಲ ಲಿಂಗೈಕ್ಯ ತೋಂಟದ ಶ್ರೀಗಳು ಮಠ ಹಾಗೂ ತಮ್ಮ ಹೃದಯದ ಬಾಗಿಲನ್ನೂ ಸರ್ವಜನಾಂಗಗಳಿಗೆ ಮುಕ್ತವಾಗಿ ತೆರೆದಿಟ್ಟಿದ್ದು ಇಡೀ ನಾಡಿಗೆ ಗೊತ್ತಿದೆ. ಅವರಲ್ಲಿರುವ ಮಾತೃ ವಾತ್ಸಲ್ಯ, ಅಂತಃಕರಣ, ಸಾಮಾಜಿಕ ಹೋರಾಟ, ಸಾಮಾಜಿಕ ಪರಿವರ್ತನೆಯ ಕಾರ್ಯಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು ನಾಡಿನಲ್ಲಿ ಭಾವೈಕ್ಯತೆ ಸಂಸ್ಕೃತಿಯನ್ನು ಪಸರಿಸಿದ್ದರು. ಅಂತಹ ಮಹಾತ್ಮರ ಕುರಿತು ಮಾತನಾಡುವ ನೈತಿಕತೆ ದಿಂಗಾಲೇಶ್ವರರಿಗೆ ಇಲ್ಲ’ ಎಂದು ಹೇಳಿದರು.

ಕೊಟ್ರೇಶ ಮೆಣಸಿನಕಾಯಿ ಮಾತನಾಡಿ, ‘ಲಿಂಗೈಕ್ಯ ತೋಂಟದಾರ್ಯ ಶ್ರೀಗಳ ಸಾಮಾಜಿಕ ಕಾರ್ಯವೈಖರಿಯನ್ನು ಗುರುತಿಸಿ ಕೇಂದ್ರ ಸರ್ಕಾರ 2001ರಲ್ಲೇ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಹಾಗೂ ದೇಶದ ಏಕತಾ ಪ್ರಶಸ್ತಿ ನೀಡಿದೆ. ರಾಜ್ಯ ಸರ್ಕಾರ ಭಾವೈಕ್ಯತೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಮಾನತೆಗಾಗಿ ರಾಷ್ಟ್ರೀಯ ಬಸವ ಪುರಸ್ಕಾರ ನೀಡಿ ಗೌರವಿಸಿದ್ದು ದಿಂಗಾಲೇಶ್ವರರಿಗೆ ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿಗಳು ಶ್ರೀಗಳ ಜಯಂತಿಯನ್ನು ಭಾವೈಕ್ಯತಾ ದಿನವೆಂದು ಆಚರಿಸಲು ಕ್ರಮ ತೆಗೆದುಕೊಳ್ಳುತ್ತಿರುವಾಗ ದಿಂಗಾಲೇಶ್ವರರಿಗೆ ಅಸಹನೆ, ಅಸಮಾಧಾನ ಉಂಟಾಗಿದೆ. ಅವರು ನಾಡಿನ ಸಹಸ್ತ್ರಾರು ಭಕ್ತರಿಗೆ ತಾಯಿಯಾಗಿ-ತಂದೆಯಾಗಿ ಬದುಕು ರೂಪಿಸಿಕೊಟ್ಟಿದ್ದಾರೆ. ಅಂತವರ ಬಗ್ಗೆ ಪದೇ ಪದೇ ದಿಂಗಾಲೇಶ್ವರರು ಮಾತನಾಡುವುದನ್ನು ನೋಡಿದರೆ ಇವರ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. ಇವರು ಸಮಾಜದಲ್ಲಿ ಅಶಾಂತಿ ಮೂಡಿಸಲು ಸ್ವಯಂಘೋಷಿತ ಸ್ವಾಮೀಜಿಗಳಾಗಿದ್ದಾರೋ ಏನೋ ಅನುಮಾನ ಮೂಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಂಬಳ ಗ್ರಾಮದ ಬಿಸನಳ್ಳಿ ಮಾತನಾಡಿ, ದಿಂಗಾಲೇಶ್ವರರು ಒಂದು ಮಠದ ಸ್ವಾಮೀಜಿಯಾಗಿ ಅವರು ಎಂತಹ ಮನಸ್ಥಿತಿ ಹೊಂದಿದ್ದಾರೆ ಎನ್ನುವುದು ಹಿಂದುಳಿದ, ದಲಿತ ಹಾಗೂ ಮುಸ್ಲಿಂ ಸಮುದಾಯಗಳಿಗೆ ಗೊತ್ತಿರುವ ವಿಷಯ. ಮಠದಲ್ಲಿದ್ದು ಸಾಮಾಜಿಕ ಪರಿವರ್ತನೆಗೆ, ಶಾಂತಿ-ಸೌಹಾರ್ದಕ್ಕೆ ಯಾವ ಯಾವ ಕಾರ್ಯಗಳನ್ನು ಮಾಡಬೇಕೋ ಆ ಕಾರ್ಯಗಳನ್ನು ಮಾಡದೇ ಇರುವ ನಿಮ್ಮ ಮೇಲೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದ್ದರಿಂದ, ನಿಮ್ಮ ವ್ಯಕ್ತಿತ್ವವನ್ನು ತಿದ್ದಿಕೊಳ್ಳಿ’ ಎಂದು ಸಲಹೆ ನೀಡಿದರು.

ಶೇಖಣ್ಣ ಕವಳಿಕಾಯಿ ಮಾತನಾಡಿ, ತೋಂಟದ ಶ್ರೀಗಳು ಕೈಕೊಂಡ ಭಾವೈಕ್ಯತಾ ಕಾರ್ಯವೈಖರಿ ನಾಡಿನ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ದಲಿತ ಸಮುದಾಯಗಳಿಗೆ ಗೊತ್ತಿದೆ. ಆದರೆ ದಿಂಗಾಲೇಶ್ವರ ಶ್ರೀಗಳಿಗೆ ಗೊತ್ತಿಲ್ಲ. ಏಕೆಂದರೆ ದಿಂಗಾಲೇಶ್ವರರಿಗೆ ಭಾವೈಕ್ಯತೆ ಬೇಕಾಗಿಲ್ಲ. ಬದಲಿಗೆ ಕೋಮು ದ್ವೇಷ, ಅಸೂಯೆ, ಹಣ ಬೇಕಾಗಿದೆ. ಇವರು ಈಗಾಗಲೇ ಬಡ್ಡಿ ವ್ಯವಹಾರ ಮಾಡುತ್ತಾರೆ. ಅಪರಾಧಿಕ ಹಿನ್ನೆಲೆಯುಳ್ಳವರಾಗಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಇವರನ್ನು ಬಂಧಿಸಿ ಪೀಠದಿಂದ ಕೆಳಗಿಳಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಅಶೋಕ ಬರಗುಂಡಿ ಮಾತನಾಡಿ, ದಿಂಗಾಲೇಶ್ವರರೊಬ್ಬ ಸ್ವಯಂಘೋಷಿತ ಸ್ವಾಮೀಜಿಯಾಗಿದ್ದಾರೆ. ಶಿರಹಟ್ಟಿ ಮಠಕ್ಕೆ ಪೀಠಾಧಿಪತಿಗಳಾಗಿದ್ದು ದುರದೃಷ್ಟಕರ. ಇವರ ಹೇಳಿಕೆ ಹೀಗೆ ಮುಂದುವರಿದರೆ ಇವರ ವಿರುದ್ಧ ರಾಜ್ಯದಾದ್ಯಂತ ಬಸವದಳ- ಬಸವಕೇಂದ್ರಗಳ ಮೂಲಕ ಶಿರಹಟ್ಟಿ ಮಠದ ಭಕ್ತರೊಂದಿಗೆ ಹೋರಾಟ ಮಾಡಿ ಶಿರಹಟ್ಟಿ ಪೀಠವನ್ನು ತ್ಯಜಿಸುವಂತೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಂದ್ರು ಚವ್ಹಾಣ ಮಾತನಾಡಿ, ‘ದಿಂಗಾಲೇಶ್ವರರು ಬಾಲೆಹೊಸೂರು ಮಠದ ಪೀಠಾಧಿಪತಿಗಳಾಗಿದ್ದಾಗ ಯಾವ ಯಾವ ಕೆಲಸಗಳನ್ನು ಮಾಡಿದ್ದೀರಿ? ನಿಮ್ಮ ಮೇಲೆ ಪ್ರಕರಣಗಳು ಎಷ್ಟಿವೆ? ನೀವು ಶಿರಹಟ್ಟಿ ಮಠದ ಪೀಠವನ್ನು ರಾತ್ರೋ-ರಾತ್ರಿ ಭಕ್ತರಿಗೆ ಗೊತ್ತಿಲ್ಲದೇ ಅಲಂಕರಿಸಿದಿರಿ’ ಎಂದು ಪ್ರಶ್ನಿಸಿದ ಅವರು, ‘ನಿಮ್ಮ ಮನಸ್ಸಿನಲ್ಲಿರುವ ಅಸಹನೆ ಗುಣಗಳ ಬಗ್ಗೆ ಎಲ್ಲರಿಗೂ ಗೊತ್ತಿದ್ದು, ಅದು ಈಗ ಬೆಳಕಿಗೆ ಬಂದಿದೆ’ ಎಂದು ವ್ಯಂಗ್ಯವಾಡಿದರು.

‘ತೋಂಟದ ಶ್ರೀಗಳ ಬಗ್ಗೆ ಯಾವ ಕಾರಣಕ್ಕೂ ಪದೇ ಪದೇ ಅಸಹಿಷ್ಣುತೆ ಭಾವನೆಯಿಂದ ಮಾತನಾಡಬೇಡಿ. ಏಕೆಂದರೆ ತೋಂಟದ ಶ್ರೀಗಳು ಈ ನಾಡಿನ ಮಹಾನ್ ಸಂತರು. ಲಿಂ. ತೋಂಟದ ಶ್ರೀಗಳು ಎಂದೂ ಯಾವುದೇ ಜಾತಿನಿಂದನೆ ಮಾಡಿಲ್ಲ. ಬ್ರಾಹ್ಮಣರನ್ನು ನಿಂದಿಸಿದ್ದಾರೆ ಎಂದು ದಿಂಗಾಲೇಶ್ವರರು ಹೇಳುತ್ತಿರುವುದು ಮೂರ್ಖತನದ ಪರಮಾವಧಿ. ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವ್ಯತ್ಯಾಸವನ್ನು ಅರಿಯದ ಅಜ್ಞಾನಿ ದಿಂಗಾಲೇಶ್ವರರು’ ಎಂದರು.

ಸಭೆಯಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ರಾಜು ಕುರಡಗಿ, ವಿ.ಕೆ.ಕರೇಗೌಡ್ರ, ಪ್ರಕಾಶ ಅಸುಂಡಿ, ಎಂ.ಬಿ ಲಿಂಗದಾಳ, ಸದು ಮದರಿಮಠ, ಎಂ.ಸಿ ಐಲಿ, ಶೇಖಣ್ಣ ಕಳಸಾಪೂರ, ಎಸ್.ಎಸ್ ಪಟ್ಟಣಶೆಟ್ಟಿ, ಎಂ.ಎಸ್ ಅಂಗಡಿ, ಚನ್ನಯ್ಯ ಹಿರೇಮಠ, ಜಿ.ವಿ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

ಇವನ್ನೂ ಓದಿ... 

ಲಂಚ ತೆಗೆದುಕೊಂಡವರು ರಶೀದಿ ಕೊಡುತ್ತಾರೆಯೇ?: ದಿಂಗಾಲೇಶ್ವರ ಶ್ರೀ ತಿರುಗೇಟು

ಭಾವೈಕ್ಯತಾ ದಿನಕ್ಕೆ ವಿರೋಧ: ದಿಂಗಾಲೇಶ್ವರರನ್ನು ತರಾಟೆ ತೆಗೆದುಕೊಂಡ ಸಿ.ಸಿ.ಪಾಟೀಲ

ಅನುದಾನ ಪಡೆಯಲು ಮಠಗಳೂ ಶೇ 30 ರಷ್ಟು ಕಮಿಷನ್ ನೀಡಬೇಕಿದೆ: ದಿಂಗಾಲೇಶ್ವರ ಸ್ವಾಮೀಜಿ

 ‘ಭಾವೈಕ್ಯ ದಿನ’ ಘೋಷಣೆಗೆ ದಿಂಗಾಲೇಶ್ವರ ಸ್ವಾಮೀಜಿ ತಕರಾರು 

ಕಮಿಷನ್ ಆರೋಪ: ಹೆಸರು ಬಹಿರಂಗಪಡಿಸಲು ದಿಂಗಾಲೇಶ್ವರ ಶ್ರೀಗಳಿಗೆ ಸಚಿವ ಕೋಟ ಆಗ್ರಹ 

ನಯಾಪೈಸೆ ಕೊಟ್ಟಿಲ್ಲ: ದಿಂಗಾಲೇಶ್ವರ ಶ್ರೀಗೆ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು