ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಲಿ ಹಾಕಿದ ಮನೆಗಳ ಮೇಲೆ ಪೊಲೀಸ್‌ ಕಣ್ಗಾವಲು

ಗದಗ ಜಿಲ್ಲಾ ಪೊಲೀಸರಿಂದ ವಿನೂತನ ಯೋಜನೆ– ಸಚಿವ ಎಚ್‌.ಕೆ.ಪಾಟೀಲ ಮೆಚ್ಚುಗೆ
Published 14 ಮಾರ್ಚ್ 2024, 14:47 IST
Last Updated 14 ಮಾರ್ಚ್ 2024, 14:47 IST
ಅಕ್ಷರ ಗಾತ್ರ

ಗದಗ: ‘ಧೈರ್ಯಕ್ಕೆ, ಸುಸಂಸ್ಕೃತಿಗೆ ಗದಗ ಜಿಲ್ಲಾ ಪೊಲೀಸರು ಹೆಸರುವಾಸಿ ಆಗಬೇಕು. ತಂತ್ರಜ್ಞಾನ ಬಳಸಿ, ಅಪರಾಧ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ನಗರದ ಶಹರ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ‘ಕೀಲಿ ಹಾಕಿದ ಮನೆಗಳ ಕಣ್ಗಾವಲು ವ್ಯವಸ್ಥೆ’ ಹಾಗೂ ಪೊಲೀಸ್ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ಗದಗ ಶಹರ ಪೊಲೀಸ್‌ ಠಾಣೆ ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದು, ಅದೇ ರೀತಿ, ಮನೆಗಳ್ಳತನ ತಡೆಯುವುದಕ್ಕೆ ಸಂಬಂಧಿಸಿದಂತೆ ಬೀಗ ಹಾಕಿದ ಮನೆಗಳ ಮೇಲೆ ನಿಗಾ ಇಡುವ ಕಣ್ಗಾವಲು ಯೋಜನೆ ಜಾರಿಗೂ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಜನರು ಜಾತ್ರೆ, ಪ್ರವಾಸ, ಕೆಲಸದ ಕಾರಣಕ್ಕೆ ಮನೆಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ಹೋಗುವುದು ಸಹಜ. ಆದರೆ, ಮನೆಗೆ ಬೀಗ ಹಾಕಿ ಹೊರಟರೆ ಅವರ ಮನಸ್ಸು ಮಾತ್ರ ಮನೆಯತ್ತಲೇ ಗಿರಕಿ ಹೊಡೆಯುತ್ತದೆ. ಜನರ ಮನಸ್ಸಿನಲ್ಲಿ ನಡೆಯುವ ಇಂತಹ ತೊಳಲಾಟವನ್ನು ಜಿಲ್ಲಾ ಪೊಲೀಸ್‌ ಇಲಾಖೆ ‘ಕಣ್ಗಾವಲು’ ಯೋಜನೆ ಮೂಲಕ ತಡೆಯಲು ಮುಂದಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಮನೆಗೆ ಬೀಗ ಹಾಕಿ ಬೇರೆಕಡೆಗೆ ಹೋಗುವವರು ‘HELP’ ಎಂದು ಟೈಪ್‌ ಮಾಡಿ 9480021100 ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಿದರೆ ಪೊಲೀಸರು ನಿಮ್ಮ ಮನೆಯ ಮೇಲೆ ನಿಗಾ ಇಡುವ ಮೂಲಕ ನಿಮ್ಮೊಳಗಿನ ತುಮುಲಗಳನ್ನು ಕಡಿಮೆ ಮಾಡಲಿದ್ದಾರೆ ಎಂದು ತಿಳಿಸಿದರು.

ಹಿಂದೆಲ್ಲಾ ಜನರು ಪೊಲೀಸರನ್ನು ಕಂಡರೆ ಹೆದರುತ್ತಿದ್ದರು. ಠಾಣೆಗಳಿಗೆ ಕಾಲಿಡಲು ಭಯಪಡುತ್ತಿದ್ದರು. ಆದರೆ, ಪೊಲೀಸರು ಈಗ ಜನಸ್ನೇಹಿ ವಾತಾವರಣ ಸೃಷ್ಟಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಜನರಿಗೆ ಸೇವೆಗಳನ್ನು ಕೊಡಲು ಮುಂದಾಗಿದ್ದಾರೆ. ಈ ಜನಸ್ನೇಹಿ ಯೋಜನೆಗೆ ಬೇಕಿರುವ ಬೆಂಬಲ, ತಂತ್ರಜ್ಞಾನ, ಸಲಕರಣೆಗಳನ್ನು ಸರ್ಕಾರದಿಂದ ಒದಗಿಸಲಾಗುವುದು. ಪೊಲೀಸರು ನಿಷ್ಠೆಯಿಂದ ಕೆಲಸ ಮಾಡಿದರೆ ಊರಿಗೆ, ಸರ್ಕಾರಕ್ಕೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಹೆಸರು ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಥರ್ಡ್‌ ಐ ಜಾರಿ ನಂತರ ಪ್ರಕರಣಗಳ ಸಂಖ್ಯೆ ಸಾಕಷ್ಟು ಕಡಿಮೆ ಆಗಿದೆ. ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿವೆ. ಗುನ್ನೆಗಳ ಸಂಖ್ಯೆ ಇಳಿದಿವೆ. ಪೊಲೀಸರು ಮನಸ್ಸು ಮಾಡಿದರೆ ಆದರ್ಶ ಸಮಾಜ ನಿರ್ಮಾಣ ಮಾಡಬಲ್ಲರು ಎಂಬುದಕ್ಕೆ ಇವು ಸಾಕ್ಷಿ. ಪೊಲೀಸ್‌ ಇಲಾಖೆ ಇಡುವ ಪ್ರತಿಯೊಂದು ಜನಸೇವೆಯ ಹೆಜ್ಜೆಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿ, ಕಣ್ಗಾವಲು ವ್ಯವಸ್ಥೆಯಿಂದ ಬೀಗಹಾಕಿದ ಮನೆಗಳ ನಿಗಾವಹಿಸಲು ಉಪಯುಕ್ತವಾಗಿದೆ. ಸಹಾಯವಾಣಿ 9480021100 ಸಂಖ್ಯೆಗೆ help ಎಂದು ವಾಟ್ಸ್‌ಆ್ಯಪ್‌ ಮಾಡಿ ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಪೊಲೀಸ್ ಜಾಗೃತಿ ವಾಹನದ ಮೂಲಕ ಮನೆ ಕಳ್ಳತನ, ಸರ ಕಳ್ಳತನ, ವಾಹನ ಕಳವು, ಮಾದಕ ವಸ್ತುಗಳ ದುರ್ಬಳಕೆ, ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಸೈಬರ್ ಅಪರಾಧಗಳು ನಡೆದಲ್ಲಿ ಸಹಾಯವಾಣಿ ಸಂಖ್ಯೆ 1930, ತುರ್ತು ಸಂದರ್ಭದಲ್ಲಿ ತುರ್ತು ಸಹಾಯವಾಣಿ 112ಕ್ಕೆ ಸಾರ್ವಜನಿಕರು ಕರೆ ಮಾಡಿ ಸಹಾಯ ಪಡೆಯುವಂತೆ ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಸೇರಿದಂತೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು, ಡಾ.ನಾಗನೂರ, ಪ್ರಭು ಬುರಬುರೆ, ಎಸ್.ಎನ್.ಬಳ್ಳಾರಿ, ಅಶೋಕ ಮಂದಾಲಿ, ಭಾಷಾ ಮಲ್ಲಸಮುದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT