ಶನಿವಾರ, ಸೆಪ್ಟೆಂಬರ್ 18, 2021
22 °C

ದೀಪಾವಳಿಗೆ ಮುನ್ನವೇ ಬೆಲೆ ಏರಿಕೆ ಬಿಸಿ: ಕೆ.ಜಿ.ಗೆ ₹ 200 ದಾಟಿದ ಬೆಳ್ಳುಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ದೀಪಾವಳಿ ಸಮೀಪಿಸುತ್ತಿದ್ದಂತೆ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬು ಕರಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಬಹುತೇಕ ತರಕಾರಿಗಳ ಬೆಲೆಯಲ್ಲಿ ಶೇ 20ರಷ್ಟು ಏರಿಕೆಯಾಗಿದೆ. ಅದರಲ್ಲೂ ಈರುಳ್ಳಿ ಮತ್ತು ಬೆಳ್ಳುಳ್ಳಿ ದರ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ.

ಬೆಳ್ಳುಳ್ಳಿ ಬೆಲೆ ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 200 ದಾಟಿದೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕು ವ್ಯಾಪ್ತಿಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಜವಾರಿ ಬೆಳ್ಳುಳ್ಳಿ ಬೆಳೆಯುತ್ತಾರೆ. ಆದರೆ, ಈ ವರ್ಷ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದ ಬೆಳೆ ಹಾನಿಯಾಗಿದ್ದು, ಇಳುವರಿ ಪ್ರಮಾಣ ಕುಂಠಿತವಾಗಿದೆ.

ಜವಾರಿ ಬೆಳ್ಳುಳ್ಳಿ ಕೊರತೆ ಇರುವುದರಿಂದ ಸ್ಥಳೀಯ ವ್ಯಾಪಾರಿಗಳು ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌, ಛತ್ತೀಸಘಡದಿಂದ ಹೈಬ್ರೀಡ್‌ ಬೆಳ್ಳುಳ್ಳಿ ಆವಕ ಮಾಡಿಕೊಳ್ಳುತ್ತಿದ್ದಾರೆ. ಜವಾರಿ ಬೆಳ್ಳುಳ್ಳಿಗೆ ಕೆ.ಜಿ.ಗೆ ₹ 200 ದರ ಇದ್ದರೆ, ಹೈಬ್ರೀಡ್‌ ಬೆಳ್ಳುಳ್ಳಿ ಕೆ.ಜಿ.ಗೆ ₹ 150ರಿಂದ ₹ 160 ದರ ಇದೆ. ‘ದೀಪಾವಳಿ ವೇಳೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಎರಡರ ದರವೂ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ವ್ಯಾಪಾರಿಗಳು.

ತಗ್ಗದ ಈರುಳ್ಳಿ ಧಾರಣೆ: ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ಬೆನ್ನಲ್ಲೇ ಸ್ಥಳೀಯ ಮಾರುಕಟ್ಟೆಗೆ ಮಹಾರಾಷ್ಟ್ರ ಮತ್ತು ವಿಜಯಪುರದಿಂದ ಈರುಳ್ಳಿ ಆವಕ ಹೆಚ್ಚಿತ್ತು. ಇದರಿಂದ ಬೆಲೆ ಇಳಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹೊಸ ಈರುಳ್ಳಿಗೆ (ಹಸಿ ಈರುಳ್ಳಿ) ಮಾತ್ರ ಬೆಲೆ ಇಳಿಕೆಯಾಗಿದೆ. ಹಳೇ ಈರುಳ್ಳಿಗೆ (ಒಣಗಿದ ಈರುಳ್ಳಿ) ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಸದ್ಯ ಗದಗ ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದಿಂದ ಆವಕವಾಗುವ ಹಳೇಯ ಈರುಳ್ಳಿ ಕೆ.ಜಿ.ಗೆ ₹ 45ಕ್ಕೆ ಮಾರಾಟವಾಗುತ್ತಿದೆ. ಸ್ಥಳೀಯವಾಗಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಹೊಸ ಈರುಳ್ಳಿ ₹ 30ರಿಂದ ₹ 35ಕ್ಕೆ ಮಾರಾಟವಾಗುತ್ತಿದೆ. ಕಳೆದೊಂದು ವಾರದಲ್ಲಿ ಗದಗ ಎಪಿಎಂಸಿಗೆ ಒಟ್ಟು 4,993 ಕ್ವಿಂಟಲ್‌ ಈರುಳ್ಳಿ ಆವಕವಾಗಿದ್ದು ಗರಿಷ್ಠ ₹ 2,200 ದರದಲ್ಲಿ ಮಾರಾಟವಾಗಿದೆ. ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಇಳಿದರೂ, ಗ್ರಾಹಕರಿಗೆ ಮಾತ್ರ ಅದರ ಲಾಭ ವರ್ಗಾವಣೆ ಆಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು