ಮಂಗಳವಾರ, ನವೆಂಬರ್ 24, 2020
21 °C

ಯೋಜನೆಗಳ ಲಾಭ ಯಾರಿಗೆ ಸಿಕ್ಕಿದೆ?: ಎಚ್‌.ಕೆ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

HK Patil

ಗದಗ: ‘ಕೇಂದ್ರ ಸರ್ಕಾರ ಪ್ರಕಟಿಸಿರುವ ಲಕ್ಷಾಂತರ ಕೋಟಿ ಯೋಜನೆಗಳು ಪುಸ್ತಕ ರೂಪದಲ್ಲಿವೆಯೇ ಹೊರತು; ಅದರಿಂದ ನನಗೆ ಲಾಭ ಆಗಿದೆ, ಒಂದು ಕ್ಷೇತ್ರ ಅಭಿವೃದ್ಧಿ ಹೊಂದಿದೆ ಎಂದು ಹೇಳುವ ಒಬ್ಬ ವ್ಯಕ್ತಿ ಕೂಡ ಸಿಗುವುದಿಲ್ಲ’ ಎಂದು ಶಾಸಕ ಎಚ್‌.ಕೆ.ಪಾಟೀಲ ಇಲ್ಲಿ ಲೇವಡಿ ಮಾಡಿದರು.

ಗದಗಿನ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪಿಎಂ ಕೇರ್‌ ನಿಧಿ ಹಾಗೂ ಘೋಷಣೆ ಮಾಡಿರುವ ಲಕ್ಷಾಂತರ ಕೋಟಿ ಯೋಜನೆಗಳು ಅನುಷ್ಠಾನ ಆಗಿರುವ ಬಗ್ಗೆ ಜನರಿಗೆ ತಿಳಿಸದೇ ಇರುವುದರ ಹಿಂದಿನ ಉದ್ದೇಶ ಸ್ಪ‍ಷ್ಟವಾಗಿ ಅರ್ಥ ಆಗುತ್ತದೆ. ಇದು ನಿಜಕ್ಕೂ ದುರ್ದೈವಕರ’ ಎಂದು ಹೇಳಿದರು.

‘ಘೋಷಣೆ ಮಾಡಿರುವ ಯೋಜನೆಗಳು ಯಾವ ವರ್ಗಕ್ಕೆ ಮುಟ್ಟಿದೆ ಎಂಬುದನ್ನು ಜಾಹೀರಾತು, ವೆಬ್‌ಸೈಟ್‌ ಅಥವಾ ಪುಸ್ತಕಗಳ ರೂಪದಲ್ಲಿ ಜನರಿಗೆ ತಿಳಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ರಾಷ್ಟ್ರೀಯ ಆಪತ್ತಿನ ಸಂದರ್ಭದಲ್ಲಿ ರಾಜ್ಯದಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಬೆಳೆ ಹಾನಿಯಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ನಯಾಪೈಸೆ ಹಣ ನೀಡಿಲ್ಲ. ರಾಜ್ಯದಲ್ಲಿನ ಸರ್ಕಾರ ಅತ್ಯಂತ ಅಶಕ್ತವಾಗಿದೆ. ರಾಜ್ಯದ ಪ್ರತಿನಿಧಿಗಳು ಕೇಂದ್ರದ ಜತೆಗೆ ಮಾತನಾಡಿ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ’ ಎಂದು ಅವರು ದೂರಿದರು.

‘ರಾಜ್ಯ ಮತ್ತು ರಾಷ್ಟ್ರದಲ್ಲಿ ಅಭಿವೃದ್ಧಿಯ ವೇಗ ತುಂಬ ನಿಧಾನವಾಗಿದೆ. ಈ ವಿಚಾರವಾಗಿ, ಅವರದ್ದೇ ಪಕ್ಷದ ನಾಯಕ ನಿತಿನ್‌ ಗಡ್ಕರಿ ಹೇಳಿರುವ ಮಾತು ಬಿಜೆಪಿ ನಾಯಕರನ್ನು ಆತ್ಮಾವಲೋಕನಕ್ಕೆ ತೊಡಗಿಸುವಂತಿದೆ’ ಎಂದು ಹೇಳಿದರು.

‘ಪ್ರಸ್ತುತ ಸಂದರ್ಭದಲ್ಲಿ ರಾಜ್ಯ ಅತ್ಯಂತ ಕ್ಲಿಷ್ಟಕರವಾದ ಸನ್ನಿವೇಶಗಳನ್ನು ಎದುರಿಸುತ್ತಿದೆ. ಕೋವಿಡ್‌–19 ಕಾರಣದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿ ನಿರ್ವಹಣೆಯಿಂದಾಗಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು