ಮಂಗಳವಾರ, ಜನವರಿ 31, 2023
19 °C
ಬೂತ್‌ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಸಚಿವ ‍ಪ್ರಲ್ಹಾದ್‌ ಜೋಶಿ ಚಾಲನೆ

ಬಿಜೆಪಿಯಿಂದಾದ ಪರಿವರ್ತನೆ ಜನರಿಗೆ ತಿಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು ಬಿಜೆಪಿ ಕಾರ್ಯಕರ್ತರ ಕಣ್ಣಿಗೆ ‘ಕಮಲ’ ಮಾತ್ರ ಕಾಣಿಸಬೇಕು. ಎರಡು ಮೂರು ತಿಂಗಳು ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ಬಿಜೆಪಿಯನ್ನು ಮತ್ತೇ ಅಧಿಕಾರಕ್ಕೆ ತರುವ ಪಣತೊಡಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಾರ್ಯಕರ್ತರನ್ನು ಹುರಿದುಂಬಿಸಿದರು. 

ನಗರದಲ್ಲಿ ಸೋಮವಾರ ನಡೆದ ಬೂತ್‌ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬಿಜೆಪಿ ಸರ್ಕಾರದಿಂದ ದೇಶ ಹಾಗೂ ರಾಜ್ಯದಲ್ಲಿ ಏನು ಪರಿವರ್ತನೆ ಆಗಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಭಾರತ ಇಂದು ಆರ್ಥಿಕತೆಯಲ್ಲಿ ಜಗತ್ತಿನ ಐದನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. 2027ರ ವೇಳೆಗೆ ಮೂರನೇ ಸ್ಥಾನಕ್ಕೆ ಬರಲಿದೆ. 2035ರ ವೇಳೆಗೆ ಜಗತ್ತಿನ ನಂಬರ್‌ 1 ರಾಷ್ಟ್ರ ಆಗಲಿದೆ. ಇದರ ಲಾಭ ಬಡವರಿಗೂ ತಲುಪಲಿದೆ. ಇದು ಆಗಬೇಕಾದರೆ ಪರಿಶ್ರಮ ಪಡಬೇಕು. ಅದಕ್ಕಾಗಿಯೇ ಬೂತ್‌ ವಿಜಯ ಅಭಿಯಾನ ಆರಂಭಿಸಲಾಗಿದೆ’ ಎಂದರು.

‘ನಮಗೆ ಬಂದಿರುವ ವರದಿಯಂತೆ ಗದಗ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಆದರೆ, ಪ್ರತಿ ಬೂತ್‌ನಿಂದ ನಮಗೆ ಎಷ್ಟು ಮತ ಬಿದ್ದಿವೆ ಎಂಬುದರ ಮೇಲೆ ಗೆಲುವಿನ ಅಂತರ ನಿರ್ಧಾರವಾಗಲಿದೆ’ ಎಂದು ಹೇಳಿದರು.

‘ಎಚ್‌.ಕೆ.ಪಾಟೀಲರಿಗೆ ಮುಂದಿನ ಚುನಾವಣೆಯಲ್ಲಿ ತಾನು ಮನೆಗೆ ಹೋಗುತ್ತೇನೆಂಬುದು ಗೊತ್ತಾಗಿದೆ. ಹಾಗಾಗಿ ಸುಳ್ಳು ಹೇಳಲು ಶುರುಮಾಡಿದ್ದಾರೆ. ಮೊದಲಿನಿಂದಲೂ ಅವರಿಗೆ ಸುಳ್ಳು ಹೇಳುವ ಚಟ ಇದ್ದು, ಅವರೊಬ್ಬ ಸುಳ್ಳಿನ ಸರದಾರ’ ಎಂದು ಕಾಲೆಳೆದರು.

‘ಎಚ್‌.ಕೆ.ಪಾಟೀಲರಿಗೆ ಅನುಮತಿ ಪತ್ರದಲ್ಲಿ ಡೇಟ್‌ ಕಾಣಿಸುತ್ತಿಲ್ಲವಂತೆ. ಯಾಕಂದ್ರೆ ಇವರ ಪೊಲಿಟಿಕಲ್‌ ಡೇಟ್‌ ಮುಗಿಯುತ್ತಾ ಬಂದಿದೆ. ಅದಕ್ಕಾಗಿ 2023ರ ಚುನಾವಣೆಯಲ್ಲಿ ಗಟ್ಟಿ ಮನಸ್ಸು ಮಾಡಿ ಅವರನ್ನು
ರಿನೀವಲ್‌ ಮಾಡಬೇಡಿ. ಆಗ ಗದುಗಿನಲ್ಲಿ ಪರಿವರ್ತನೆ ಬರುತ್ತದೆ. ಜತೆಗೆ ನಾವು ಕಳಸಾ ಬಂಡೂರಿ ನೀರನ್ನು ಸವದತ್ತಿ ಯಲ್ಲಮ್ಮನಿಂದ ಬದಾಮಿ ಬನಶಂಕರಿವರೆಗೆ
ಮುಟ್ಟಿಸುವ ಕೆಲಸ ಮಾಡುತ್ತೇವೆ’ ಎಂದರು.

‘ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಿದ್ದು ಕಾಂಗ್ರೆಸ್‌ ಮಾತ್ರ ಎಂದು ಸಿದ್ದರಾಮಯ್ಯ ಹೇಳಿಕೆ ಕೊಡುತ್ತಾರೆ. ಆದರೆ, ಆರ್ಟಿಕಲ್‌ 370 ರದ್ದು ಮಾಡಲು ಮುಂದಾದಾಗ ವಿರೋಧಿಸಿದ್ದು, ಸರ್ಜಿಕಲ್‌ ಸ್ಟ್ರೈಕ್‌ ವೇಳೆ ಸೈನಿಕರನ್ನು ನಂಬುವುದನ್ನು ಬಿಟ್ಟು ದಾಖಲೆ ಕೇಳಿದವರು ಇದೇ ಕಾಂಗ್ರೆಸ್‌ ನಾಯಕರು’ ಎಂದು ದೂರಿದರು.

‘ಕಾಶ್ಮೀರದಲ್ಲಿ ಈಗ ಗುರಿಯಾಗಿಸಿಕೊಂಡ ದಾಳಿಗಳು ಮಾತ್ರ ನಡೆಯುತ್ತಿವೆ. ಆದರೆ, ದೇಶದಲ್ಲಿ ಒಟ್ಟಾರೆ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆ ಆಗಿವೆ. ಇವತ್ತು ಬಾಂಬ್‌ ಸಿಡಿಯಲ್ಲ. ಕಿರಿಕಿರಿಮಾಡಿದರೆ ಮನೆಹೊಕ್ಕು ಹೊಡೆಯುವ ಶಕ್ತಿ ಹೊಂದಿದ್ದೇವೆ. ಆರ್ಟಿಕಲ್‌ 370 ತೆಗೆದು ಅಲ್ಲಿನ ಪ್ಯಾರಾ ಮಿಲಿಟರಿ ಪಡೆಗಳಿಗೆ ನೈತಿಕ ಸ್ಥೈರ್ಯ ತುಂಬಿದ ಪರಿಣಾಮ ಉಗ್ರರ ನುಸುಳುವಿಕೆ ನಿಂತಿದೆ’ ಎಂದು ಹೇಳಿದರು.

ಸಚಿವ ಸಿ.ಸಿ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಮುಖಂಡರಾದ ಮಹೇಶ್‌ ಟೆಂಗಿನಕಾಯಿ, ರಾಮಣ್ಣ ಲಮಾಣಿ, ಮುತ್ತಣ್ಣ ಲಿಂಗನಗೌಡ್ರ, ಭಾರತಿ ಮುಗುದಮ್‌, ಅನಿಲ್‌ ಮೆಣಸಿನಕಾಯಿ, ಉಷಾದಾಸರ, ಸಿದ್ದಣ್ಣ, ಸುನಂದಾ ಬಾಕಳೆ ಇದ್ದರು.

‘ರಾಮಣ್ಣ ಲಮಾಣಿ ಎವರ್‌ಗ್ರೀನ್‌ ಹಿರೋ’

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿಯನ್ನು ‘ಎವರ್‌ಗ್ರೀನ್‌ ಹಿರೋ’ ಎಂದು ತಮಾಷೆ ಮಾಡಿದರು.

‘ಲಮಾಣಿ ಒಂಥರಾ ದೇವಾನಂದ್‌ ಇದ್ದಂತೆ’ ಅಂದೆ. ಆಗ ಮಹೇಶ್‌ ಟೆಂಗಿನಕಾಯಿ ಅವರು, ‘ಅಲ್ರೀ ಅದು ಹೋರಿ ಅಂತಂದರು’ ಎಂದಾಗ ಎಲ್ಲರೂ ನಕ್ಕರು.

ಮತ್ತೇ ಮಾತು ಮುಂದುವರಿಸಿದ ಜೋಶಿ, ‘ಹೋರಿ ಅಂದ್ರೆ ತಪ್ಪು ತಿಳಿಬ್ಯಾಡ್ರೀ... ಅವರಲ್ಲಿ ಅಷ್ಟೊಂದು ಹುರುಪಿದೆ ಅಂತ’ ಎಂದಾಗ ಜನ ಮತ್ತೇ ನಕ್ಕರು.

ಈಗಿರುವುದು ಡೂಪ್ಲಿಕೇಟ್‌ ಕಾಂಗ್ರೆಸ್‌...

‘ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ಕಾಂಗ್ರೆಸ್‌ ನಾಯಕರೇ ಬೇರೆ. ಈಗ ಇರುವ ಕಾಂಗ್ರೆಸ್ಸೇ ಬೇರೆ. ಇದು ರಾಹುಲ್‌ಬಾಬಾನ ತುಕಡೆ ತುಕಡೆ ಕಾಂಗ್ರೆಸ್‌. ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಇದ್ದಾಗಿನದ್ದು ಒರಿಜಿನಲ್‌ ಕಾಂಗ್ರೆಸ್‌’ ಎಂದು ಜೋಶಿ ಹೇಳಿದರು.

ದೇಶದ ವಿವಿಧೆಡೆ ಇರುವ ಕ್ರೀಡಾಂಗಣ, ನಿಲ್ದಾಣಗಳಿಗೆ ನೆಹರೂ, ಇಂದಿರಾಗಾಂಧಿ ಸೇರಿದಂತೆ ವಿವಿಧ ಡೂಪ್ಲಿಕೇಟ್‌ ಗಾಂಧಿಗಳ ಹೆಸರನ್ನೇ ಇಡಲಾಗಿದೆ. ಒಂದಕ್ಕಾದರೂ ಸುಭಾಷ್‌ ಚಂದ್ರಬೋಸ್, ತಿಲಕ್‌, ಅಂಬೇಡ್ಕರ್‌, ಸರ್ದಾರ್‌ ಪಟೇಲರ ಹೆಸರು ಇಟ್ಟಿದ್ದಾರೆಯೇ? ಈಗಿನ ಡೂಪ್ಲಿಕೇಟ್‌ ಕಾಂಗ್ರೆಸ್‌ ಚೈನಾ ಮಾಲಿದ್ದಂತೆ. ಚೀನಾದಿಂದ ಅಧಿಕೃತವಾಗಿ ಲಂಚವನ್ನು ತೆಗೆದುಕೊಂಡ ಪಾರ್ಟಿ ಕಾಂಗ್ರೆಸ್’ ಎಂದು ಆರೋಪ ಮಾಡಿದರು.

‘ಮೆಣಸಿನಕಾಯಿ ಕಾಟ ಇನ್ನೂ ಜೋರಾಗಲಿ’

‘ಅನಿಲ್‌, ಮೆಣಸಿನಕಾಯಿ ಕಾಟ ಬರೀ ಸ್ಟೇಡಿಯಂಗಷ್ಟೇ ಸೀಮಿತಗೊಳ್ಳಬಾರದು. ಬೇರೆ ಕಡೆಗೂ ಹತ್ತಬೇಕು’ ಎಂದು ಸಚಿವ ಜೋಶಿ ಹೇಳಿದರು. ಆಗ ಸಭಿಕರು, ‘ಹುಲಕೋಟಿಯತ್ತ’ ಎಂದು ಕಿಚಾಯಿಸಿದರು.

‘ಕ್ಷೇತ್ರದಿಂದ ಯಾರನ್ನಾದರೂ ಅಭ್ಯರ್ಥಿ ಮಾಡುತ್ತೇವೆ. ಅವರು ಗೆಲ್ಲುತ್ತಾರೆ. ನಮ್ಮ ಮನೆಯಾಗ ಗಂಡಸು ಮಗ ಹುಟ್ಟಿದಾಗ ಪೇಢೆ ಹಂಚಬೇಕು. ಬಾಜು ಮನೆಯಲ್ಲಿ ಹುಟ್ಟಿದಾಗ ಹಂಚಿದರೆ ಉಪಯೋಗವಿಲ್ಲ’ ಎಂದರು.

ಆಗ ಸಚಿವ ಸಿ.ಸಿ.ಪಾಟೀಲ ಮಧ್ಯೆ ಪ್ರವೇಶಿಸಿ, ‘ಗದುಗಿನ ಜನ ಅದನ್ನು ತಿಳಿದುಕೊಳ್ಳಬೇಕು’ ಅಂತಂದರು.

ಅದಕ್ಕೆ ಪ್ರತಿಕ್ರಿಯಿಸಿದ ಜೋಶಿ, ‘ಈ ಸಾರಿ ಗದುಗಿನವರು ಗಂಡೇ ಹಡೆಯುತ್ತಾರೆ. ನೀವೇನೂ ಚಿಂತಿ ಮಾಡಬ್ಯಾಡ್ರಿ’ ಎಂದರು.

‘ಕೆಲವರು ಬಾಜೂ ಮನೆಯಲ್ಲಿ ಮಗು ಹುಟ್ಟಲು ಸಹಕಾರ ನೀಡಿದ್ದಾರೆ. ಕಳೆದ ಬಾರಿ ಆ ರೀತಿ ಮಾಡಿರುವುದು ಗೊತ್ತಿದೆ. ಈ ಸಲ ಆ ರೀತಿ ಮಾಡಬೇಡಿ’ ಎಂದು ಹೇಳಿದರು.

ಬಳಿಕ ಮಾತು ಮುಂದುವರಿಸಿದ ಅವರು, ‘ಗಂಡಂದ್ರೆ ಗದಗ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.