ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಮೋದಿ ಅಲೆಯಲ್ಲಿ ಸೊರಗಿದ ‘ಕೈ’ ಗ್ಯಾರಂಟಿ; ಗೆದ್ದ ಬೊಮ್ಮಾಯಿ

ಕಾಂಗ್ರೆಸ್‌ಗೆ ಗೆಲುವು ತಂದು ಕೊಡದ ಮಹಾಲಕ್ಷ್ಮಿ ಯೋಜನೆ;
Published 5 ಜೂನ್ 2024, 6:02 IST
Last Updated 5 ಜೂನ್ 2024, 6:02 IST
ಅಕ್ಷರ ಗಾತ್ರ

ಗದಗ: ಜಿದ್ದಾಜಿದ್ದಿ ಕಣವಾಗಿ ಮಾರ್ಪಟ್ಟಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೆಲುವಿನ ನಗು ಬೀರಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿಗಿಂತಲೂ ಮೋದಿ ಗ್ಯಾರಂಟಿ ಈ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಿರುವುದು ಫಲಿತಾಂಶ ಬಿಂಬಿಸಿದೆ.

ಟಿಕೆಟ್‌ ಘೋಷಣೆಯಾದ ದಿನದಿಂದಲೂ ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಅವರು ಎರಡೂ ಜಿಲ್ಲೆಗಳಲ್ಲಿನ ಪ್ರತಿ ಹಳ್ಳಿಯನ್ನೂ ತಲುಪಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಕೂಡ ಚುರುಕಿನ ಸಂಚಾರ ನಡೆಸಿ, ಜನರನ್ನು ಸಂಪರ್ಕಿಸಿದ್ದರು. ಇಬ್ಬರ ತುರುಸಿನ ಸ್ಪರ್ಧೆಯಲ್ಲಿ ಬೊಮ್ಮಾಯಿ ಕೊರಳಿಗೆ ವಿಜಯದ ಮಾಲೆ ಬಿದ್ದಿದೆ. ಮೊದಲಬಾರಿಗೆ ಸಂಸತ್‌ ಪ್ರವೇಶಿಸುವ ಕನಸು ಕಂಡಿದ್ದ ಆನಂದಸ್ವಾಮಿ ಗಡ್ಡದೇವರಮಠ ಅವರ ನಿರೀಕ್ಷೆ ಹುಸಿಯಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳಿಗಿಂತಲೂ ‘ಗ್ಯಾರಂಟಿ’ಗಳೇ ಸದ್ದು ಮಾಡಿದ್ದವು. ಬಿಜೆಪಿಯವರು ಮೋದಿಯೇ ಗ್ಯಾರಂಟಿ ಎಂದರು. ಕಾಂಗ್ರೆಸ್‌ನವರು ಮಹಾಲಕ್ಷ್ಮಿ ಯೋಜನೆಯನ್ನೇ ಚುನಾವಣಾ ಟ್ರಂಪ್‌ ಕಾರ್ಡ್‌ ಆಗಿ ಬಳಸಿ, ಮತ ಸಳೆಯಲು ಮುಂದಾದರು. ಎರಡೂ ಪಕ್ಷಗಳ ಗ್ಯಾರಂಟಿಯಲ್ಲಿ ಅಂತಿಮವಾಗಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.

ಎಂಟರಲ್ಲಿ ಆರು ಕಡೆಗೆ ಬಿಜೆಪಿಗೆ ಮುನ್ನಡೆ: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪಡೆದ ಮತಗಳನ್ನು ನೋಡಿದಾಗ ಆರು ಕಡೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದು ಗೋಚರಿಸುತ್ತದೆ. ಹಿರೇಕೆರೂರು ಮತ್ತು ಗದಗ ಭಾಗದಲ್ಲಿ ಬಿಜೆಪಿಗೆ ಅತಿ ಹೆಚ್ಚು ಮುನ್ನಡೆ ಸಿಕ್ಕಿದೆ.

ಮಾಜಿ ಸಚಿವ ಬಿ.ಸಿ.ಪಾಟೀಲ ಮತ್ತು ಬಸವರಾಜ ಬೊಮ್ಮಾಯಿ ಅವರು ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಿ.ಸಿ.ಪಾಟೀಲ ಅವರು ಬೊಮ್ಮಾಯಿ ಸಿಎಂ ಆಗಿದ್ದಾಗ ಕೃಷಿ ಸಚಿವರಾಗಿದ್ದರು. ಇಬ್ಬರ ನಡುವಿನ ಬಾಂದವ್ಯ ಹಾಗೂ ಒಟ್ಟಾಗಿ ಪ್ರಚಾರ ನಡೆಸಿದ ಕಾರಣ ಈ ಕ್ಷೇತ್ರದಲ್ಲಿ ಬೊಮ್ಮಾಯಿ ಅವರಿಗೆ 18,720 ಮುನ್ನಡೆ ಸಿಕ್ಕಿದೆ.

ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆಗಿರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್‌ನ ಪ್ರಭಾವಿ ಸಚಿವರಾಗಿರುವ ಎಚ್‌.ಕೆ.ಪಾಟೀಲ ಅವರ ತವರು ಕ್ಷೇತ್ರದಲ್ಲೇ ಪಕ್ಷಕ್ಕೆ ಹಿನ್ನಡೆ ಆಗಿರುವುದು ತೀವ್ರ ಮುಖಭಂಗ ಎದುರಿಸುವಂತಾಗಿದೆ.

ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸುವ ಸಲುವಾಗಿ ಇಡೀ ಕ್ಷೇತ್ರದಾದ್ಯಂತ ಸಚಿವ ಎಚ್‌.ಕೆ.ಪಾಟೀಲ ಹಾಗೂ ಡಿ.ಆರ್.ಪಾಟೀಲ ಓಡಾಡಿದ್ದರು. ಜಾತಿವಾರು ಸಭೆ ನಡೆಸಿ, ಮತಬೇಟೆ ನಡೆಸಿದರು. ಆದರೆ, ಬಿಜೆಪಿಯವರ ಸಂಘಟಿತ ಪ್ರಯತ್ನದ ಕಾರಣ ಇಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಇತ್ತ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಬಿಜೆಪಿಗೆ ಹಿನ್ನಡೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಒಡಕಿನ ಲಾಭ ಪಡೆದು ಗೆದ್ದ ಡಾ. ಚಂದ್ರು ಲಮಾಣಿ ಅವರು ಬೊಮ್ಮಾಯಿಗೆ ಹೆಚ್ಚಿನ ಮತ ತಂದುಕೊಡುವಲ್ಲಿ ಹಿಂದೆ ಬಿದ್ದಿದ್ದಾರೆ. ಉಳಿದಂತೆ ರಾಣೆಬೆನ್ನೂರು, ಹಾವೇರಿ, ಹಾನಗಲ್‌ ಕ್ಷೇತ್ರದಲ್ಲೂ ಬೊಮ್ಮಾಯಿಗೆ ಹೆಚ್ಚಿನ ಲೀಡ್‌ ಸಿಕ್ಕಿದ್ದರಿಂದಾಗಿ, ಅವರ ಗೆಲುವು ಸಲೀಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT