ಶನಿವಾರ, ಸೆಪ್ಟೆಂಬರ್ 19, 2020
22 °C
14 ನೆರೆ ಪರಿಹಾರ ಕೇಂದ್ರಗಳು; 16 ಸಾವಿರ ಜನರಿಗೆ ಆಶ್ರಯ

ಭೋರ್ಗೆರೆದ ಮಲಪ್ರಭಾ: ಪ್ರವಾಹಕ್ಕೆ ಜಿಲ್ಲೆ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಜಿಲ್ಲೆಯಾದ್ಯಂತ ಗುರುವಾರ ಮಳೆ ಸ್ವಲ್ಪ ಬಿಡುವು ನೀಡಿತ್ತು. ಆದರೆ, ಮಲಪ್ರಭಾ ಮತ್ತು ಬೆಣ್ಣಿಹಳ್ಳ ಉಕ್ಕಿ ಹರಿದ ಪರಿಣಾಮ ರೋಣ ಮತ್ತು ನರಗುಂದ ತಾಲ್ಲೂಕುಗಳ 9 ಹಳ್ಳಿಗಳು ನೀರಿನಲ್ಲಿ ಸಂಪೂರ್ಣ ಜಲಾವೃತಗೊಂಡವು. ಪ್ರವಾಹಕ್ಕೆ ತತ್ತರಿಸಿರುವ 16 ಸಾವಿರಕ್ಕೂ ಹೆಚ್ಚು ಜನರು 14 ನೆರೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಪ್ರವಾಹ ಪೀಡಿತ ಗ್ರಾಮಗಳಿಂದ ಜಿಲ್ಲಾಡಳಿತವು ಈಗಾಗಲೇ ಶೇ 95ರಷ್ಟು ಜನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿದೆ. ಕೆಲವರು, ಪ್ರವಾಹ ಸಂತ್ರಸ್ತರಿಗಾಗಿ ನಿರ್ಮಿಸಿಕೊಟ್ಟಿರುವ ‘ಆಸರೆ’ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇನ್ನು ಕೆಲವರು ತಮ್ಮ ಬಂಧುಗಳ, ಸ್ನೇಹಿತರ ಮನೆಗಳಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ. ಪ್ರವಾಹ ಸ್ಥಿತಿ ಎದುರಾದರೂ, ಗ್ರಾಮಗಳಲ್ಲೇ ಉಳಿದಿದ್ದ ಕೆಲವರನ್ನು ರಕ್ಷಣಾ ಸಿಬ್ಬಂದಿ ಗುರುವಾರ ಬೋಟ್‌ ಬಳಸಿ ಕರೆತಂದರು.

ರೋಣ ತಾಲ್ಲೂಕಿನ ನದಿ ದಂಡೆಯ ಗ್ರಾಮಗಳಾದ ಕುರುವಿನಕೊಪ್ಪ, ಹೊಳೆ ಹಡಗಲಿ, ಮೆಣಸಗಿ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಈ ಗ್ರಾಮಗಳಲ್ಲಿನ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೋವಿನಜೋಳ, ಈರುಳ್ಳಿ, ಹೆಸರುಕಾಳು, ಸೂರ್ಯಕಾಂತಿ, ಶೇಂಗಾ ಬೆಳೆಗಳು ನೀರಿನಡಿ ಮುಳುಗಿವೆ. ಬಸರಕೋಡ, ಗಾಡಗೋಳಿ, ಹೊಳೆಮಣ್ಣೂರು ಗ್ರಾಮಗಳಲ್ಲಿ ನೀರಿನ ಮಟ್ಟ ಏರುತ್ತಿದೆ. ಇಲ್ಲಿಗೆ ತೆರಳಿದ ರಕ್ಷಣಾ ಸಿಬ್ಬಂದಿ, ತಕ್ಷಣ ಗ್ರಾಮ ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಗ್ರಾಮಸ್ಥರಿಗೆ ಸೂಚಿಸಿದರು.

ಹೆಚ್ಚಿದ ಹೊರ ಹರಿವು: ಮಲಪ್ರಭಾ ನದಿಯ ನೀರಿನ ಹೊರಹರಿವು 1.10 ಲಕ್ಷ ಕ್ಯುಸೆಕ್ಸ್‌ಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇಲ್ಲಿನ ನಿವಾಸಿಗಳನ್ನು ನರಗುಂದ ಪಟ್ಟಣದ ಬಸವೇಶ್ವರ ಕಾಲೇಜಿಗೆ ಸ್ಥಳಾಂತರಗೊಳಿಸಲಾಗಿದೆ. ವಾಸನ, ಹೊಸ ಪ್ಲಾಟ್, ಲಕಮಾಪುರದ ಗ್ರಾಮಗಳ ಸುಮಾರು 12 ಸಾವಿರಕ್ಕೂ ಹೆಚ್ಚಿನ ಜನರನ್ನು ಹಾಗೂ ಜಾನುವಾರುಗಳನ್ನು ನರಗುಂದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಮಲಪ್ರಭಾ ನದಿ ನೀರಿನ ಜತೆಗೆ, ಬೆಣ್ಣಿಹಳ್ಳ ಪ್ರವಾಹವೂ ಗ್ರಾಮಸ್ಥರನ್ನು ಹೈರಾಣ ಮಾಡಿದೆ. ನೂರಾರು ಎಕರೆ ಪ್ರದೇಶದ ಜಮೀನಿಗೆ ಬೆಣ್ಣಿಹಳ್ಳ ಕೆಸರು ನೀರು ನುಗ್ಗಿದೆ. ಹಳ್ಳದ ನೀರಿನಿಂದ ಪ್ರವಾಹ ಸ್ಥಿತಿಗೆ ತಲುಪಿರುವ ಗ್ರಾಮಗಳ ಜನರಿಗೆ ತಾಲ್ಲೂಕಿನ ಬೂದಿಹಾಳ, ಬೆಳ್ಳೇರಿ, ಸುರಕೋಡ, ಕುರ್ಲಗೇರಿ ಹಾಗೂ ಹದಲಿ ಗ್ರಾಮಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ರೋಣ ತಾಲ್ಲೂಕಿನಲ್ಲಿ ಬುಧವಾರ ಕುರುವಿನಕೊಪ್ಪ, ಮೆಣಸಗಿ ಗ್ರಾಮಸ್ಥರಿಗೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿತ್ತು.

ಗುರುವಾರ ಹೊಳೆ ಆಲೂರು, ಅಮರಗೋಳ ಹಾಗೂ ಹೊಳೆ ಮಣ್ಣೂರು ಗ್ರಾಮಸ್ಥರಿಗಾಗಿ ಪರಿಹಾರ ಕೇಂದ್ರ ಆರಂಭಿಸಲಾಗಿದೆ. ಒಟ್ಟು 14 ಪರಿಹಾರ ಕೇಂದ್ರಗಳಲ್ಲಿ 16,198ಕ್ಕೂ ಹೆಚ್ಚಿನ ಜನರಿಗೆ ಆಶ್ರಯ ನೀಡಲಾಗಿದೆ.

ಬೆಣ್ಣಿ ಹಳ್ಳಕ್ಕೆ ಪ್ರವಾಹ; ಸಂಚಾರಕ್ಕೆ ಸ್ಥಗಿತ: ಯಾವಗಲ್ ಗ್ರಾಮದಲ್ಲಿ ಬೆಣ್ಣಿಹಳ್ಳ ಅಡ್ಡಲಾಗಿರುವ ಕಟ್ಟಿರುವ ಸೇತುವೆ ಪ್ರವಾಹದಿಂದ ಮುಳುಗಿದೆ. ಇದರಿಂದ ರೋಣ ನರಗುಂದ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನವಲಗುಂದ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿವೆ. ಜನರು ಪರದಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು