ಗುರುವಾರ , ಮೇ 19, 2022
22 °C
ಭರವಸೆ ನೀಡಿ 100 ದಿನಗಳು ಕಳೆದರೂ ಆರಂಭವಾಗದ ಖರೀದಿ ಕೇಂದ್ರಗಳು

ಮುಂಡರಗಿ: ಭತ್ತ ಖರೀದಿದಾರರಿಗೆ ಕಾದಿರುವ ರೈತರು

ಕಾಶೀನಾಥ ಬಿಳಿಮಗ್ಗದ Updated:

ಅಕ್ಷರ ಗಾತ್ರ : | |

Prajavani

ಮುಂಡರಗಿ: ತಾಲ್ಲೂಕಿನ ತುಂಗಭದ್ರಾ ನದಿದಂಡೆಯ ಗ್ರಾಮಗಳ ರೈತರು ಮುಂಗಾರು ಹಂಗಾಮಿನಲ್ಲಿ ಅಪಾರ ಪ್ರಮಾಣದಲ್ಲಿ ಭತ್ತ ಬೆಳೆದಿದ್ದು ಬೆಲೆಕುಸಿತ, ಆರಂಭವಾಗದ ಖರೀದಿ ಕೇಂದ್ರಗಳು ಒಂದೆಡೆಯಾದರೆ, ಮಳೆ ಹಾಗೂ ಮೋಡಕವಿದ ವಾತಾವರಣಗಳಿಂದಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ.

ತಾಲ್ಲೂಕಿನ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಗಂಗಾಪೂರ, ಶೀರನಹಳ್ಳಿ, ಶಿಂಗಟಾಲೂರ, ಹಮ್ಮಿಗಿ, ಗುಮ್ಮಗೋಳ, ಬಿದರಳ್ಳಿ ಮೊದಲಾದ ಗ್ರಾಮಗಳಲ್ಲಿ ಒಟ್ಟು 2,700 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಗಳ ಭತ್ತ ಬೆಳೆದಿದ್ದಾರೆ. ಶೇ 75ರಷ್ಟು ಭತ್ತವನ್ನು ಈಗಾಗಲೇ ಕೊಯ್ಲು ಮಾಡಲಾಗಿದ್ದು, ಕಿರುರಸ್ತೆ, ಮುಖ್ಯರಸ್ತೆಗಳ ಮೇಲೆ ರೈತರು ಭತ್ತ ರಾಶಿ ಮಾಡಿದ್ದಾರೆ.

ಈ ಹಿಂದಿನ ವರ್ಷಗಳಲ್ಲಿ ರೈತರು ಭತ್ತ ಕೊಯ್ಲು ಮಾಡುತ್ತಿದ್ದಂತೆಯೇ ದಾವಣಗೆರೆ, ಗಂಗಾವತಿ, ಕೊಪ್ಪಳ ಹಾಗೂ ಮತ್ತಿತರ ಭಾಗಗಳ ಖರೀದಿದಾರರು ರೈತರ ಜಮೀನಿಗೆ ಬಂದು ಭತ್ತ ಖರೀದಿಸುತ್ತಿದ್ದರು. ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಟ್ಟು ರೈತರಿಗೂ ಉತ್ತಮ ಬೆಲೆ ದೊರೆಯುತ್ತಿತ್ತು.

ಈ ವರ್ಷ ರೈತರು ಸಾಕಷ್ಟು ಪ್ರಮಾಣದಲ್ಲಿ ಭತ್ತ ಬೆಳೆದಿದ್ದಾರೆ. ಆದರೆ ಖರೀದಿದಾರರು ಆಸಕ್ತಿ ತೋರುತ್ತಿಲ್ಲ. ರೈತರು ಕಾಯ್ದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಗೊಮ್ಮೆ ಈಗೊಮ್ಮೆ ಬರುವ ಖರೀದಿದಾರರು ತಿಂಗಳ ಹಿಂದೆ 75 ಕೆ.ಜಿ. ತೂಕದ ಒಂದು ಚೀಲ ಭತ್ತ ₹1,400ಕ್ಕೆ ಮಾರಾಟವಾಗಿದೆ. ಈಗ ₹1,200 ಹೇಳುತ್ತಿದ್ದಾರೆ. ರೈತರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

‘ಒಂದು ವಾರದಿಂದ ಆಗಾಗ ಬೀಳುವ ಜಿಟಿಜಿಟಿ ಮಳೆ ಹಾಗೂ ಮೋಡಕವಿದ ವಾತಾವರಣ ಫಸಲಿಗೆ ಮಾರಕವಾಗಿದೆ. ಬಿಸಿಲು ಬೀಳದೇ ಭತ್ತ ಒಣಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಕೊಯ್ಲು ಮುಗಿದ ತಕ್ಷಣ ಭತ್ತ ಮಾರಾಟವಾಗದೆ ಇದ್ದರೆ
ಅದನ್ನು ಕಾಪಾಡುವುದು ರೈತರಿಗೆ ವೆಚ್ಚದಾಯಕ’ ಎನ್ನುತ್ತಾರೆ ರೈತರ ಶರಣಯ್ಯ ಹಿರೇಮಠ.

‘ಪ್ರತಿದಿನ ನಾಲ್ಕೈದು ಕೂಲಿ ಕಾರ್ಮಿಕರ ನೆರವಿನಿಂದ ಭತ್ತದ ರಾಶಿಯನ್ನು ಹೊರಳಿಸಬೇಕಾಗುತ್ತದೆ. ಮಳೆಯಿಂದ ಭತ್ತವನ್ನು ರಕ್ಷಿಸಲು ಪ್ರತಿ ಟಾರ್ಪಲ್‌ಗೆ ದಿನಕ್ಕೆ ₹25 ಬಾಡಿಗೆ ನೀಡಬೇಕಾಗುತ್ತದೆ. ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ  ಬಂದ ರೇಟಿಗೆ ಮಾರಿದರಾಯಿತು ಎನ್ನುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

‘ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದರೆ ಒಂದು ಚೀಲಕ್ಕೆ ರೈತರಿಗೆ ₹1,700 ದೊರೆಯಲಿದೆ. ಆದರೆ, ತಾಲ್ಲೂಕಿನಲ್ಲಿ ಭತ್ತದ ಖರೀದಿ ಕೇಂದ್ರ ತೆರೆಯುವುದಾಗಿ ಸರ್ಕಾರ ಭರವಸೆ ನೀಡಿ ಇಂದಿಗೆ 100 ದಿನಗಳು ಕಳೆದಿವೆ. ಈವರೆಗೂ ಖರೀದಿ ಕೇಂದ್ರ ತೆರೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ರೈತರು ತಮ್ಮ ಭತ್ತವನ್ನೆಲ್ಲ ಮಾರಿದ ಮೇಲೆ ಖರೀದಿ ಕೇಂದ್ರ ತೆರೆದರೆ ರೈತರಿಗೆ ಅನ್ಯಾಯವಾಗುತ್ತದೆ’ ಎನ್ನುತ್ತಾರೆ ಕೊರ್ಲಹಳ್ಳಿ ಗ್ರಾಮದ ಯುವ ರೈತ ವೀರನಗೌಡ ಪಾಟೀಲ. 

***

ಭತ್ತದ ಬೆಳೆ ಮೊದಲಿನಂತೆ ರೈತರ ಕೈಹಿಡಿಯುತ್ತಿಲ್ಲ. ಅನ್ಯ ಉದ್ಯೋಗ ಗೊತ್ತಿಲ್ಲದ ಕಾರಣ ಅನಿವಾರ್ಯವಾಗಿ ರೈತರು ಭತ್ತ ಬೆಳೆಯುತ್ತಿದ್ದಾರೆ

- ಶರಣಯ್ಯ ಹಿರೇಮಠ, ಶಿಂಗಟಾಲೂರ ರೈತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು