ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ಸುಳಿಯಲ್ಲಿ ಅಂಗನವಾಡಿ ಕೇಂದ್ರಗಳು

1,166 ಅಂಗವಾಡಿ ಕೇಂದ್ರಗಳು, ಕೆಲವು ಕಡೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ
Last Updated 15 ಮಾರ್ಚ್ 2021, 3:30 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ 1,166 ಅಂಗನವಾಡಿಗಳಿದ್ದು ಇದರಲ್ಲಿ ಬಹುತೇಕ ಕೇಂದ್ರಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಜಿಲ್ಲೆಯಲ್ಲಿನ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳ ಕೊರತೆಯೇ ಹೆಚ್ಚಿದೆ. ಉಳಿದಂತೆ ವಿದ್ಯುತ್‌, ಆಟದ ಮೈದಾನ, ಶೌಚಾಲಯ, ಆಟಿಕೆಗಳ ಕೊರತೆಯಿಂದ ಅಂಗನವಾಡಿಗಳು ಬಳಲುತ್ತಿವೆ.

ಜಿಲ್ಲೆಯಲ್ಲಿ 872 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇದೆ. 8 ಕೇಂದ್ರಗಳು ಪಂಚಾಯ್ತಿಯಲ್ಲಿ, 55 ಕೇಂದ್ರಗಳು ಸಮುದಾಯ ಸ್ಥಳ, ಎರಡು ಕೇಂದ್ರಗಳು ಯುವಕ ಮಂಡಳ, 37 ಅಂಗನವಾಡಿಗಳು ಶಾಲೆಗಳಲ್ಲಿ, 187 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

‘ಪ್ರಸ್ತುತ ಜಿಲ್ಲೆಯಲ್ಲಿರುವ 1,166 ಅಂಗನವಾಡಿಗಳ ಪೈಕಿ 813 ಕೇಂದ್ರಗಳಿಗೆ ಶೌಚಾಲಯ ವ್ಯವಸ್ಥೆ ಇದೆ. 716 ಕೇಂದ್ರಕ್ಕೆ ವಿದ್ಯುತ್‌ ಸೌಲಭ್ಯ ಕಲ್ಪಿಸಲಾಗಿದೆ. ಜಲ ಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ ಎಲ್ಲ ಕೇಂದ್ರಗಳಿಗೂ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಮಕ್ಕಳು ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಎ. ತಿಳಿಸಿದ್ದಾರೆ.

‘130 ಅಂಗನವಾಡಿಗಳ ದುರಸ್ತಿಗೆ ಕ್ರಮವಹಿಸಲಾಗಿದ್ದು, ಪ್ರತಿ ಕಟ್ಟಡಕ್ಕೆ ₹50 ಸಾವಿರ ಬಿಡುಗಡೆ ಆಗಿದೆ. ಹೊಸ ಕಟ್ಟಡಗಳ ನಿರ್ಮಾಣಕ್ಕೆ ಆರ್‌ಐಡಿಎಫ್‌ನಿಂದ ಪ್ರತಿ ಕಟ್ಟಡಕ್ಕೆ ₹17 ಲಕ್ಷ, ಎನ್‌ಆರ್‌ಜಿಎಯಿಂದಾದರೆ ₹10 ಲಕ್ಷ ಅನುದಾನ ಸಿಗುತ್ತದೆ. ಹೊಂಬಳದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಸಚಿವ ಸಿ.ಸಿ. ಪಾಟೀಲ ಅವರು ಶಾಸಕರ ನಿಧಿಯಿಂದ ಅನುದಾನ ನೀಡಿದ್ದಾರೆ’ ಎಂದು ಅವರು ಹೇಳಿದರು.

ಸೌಲಭ್ಯ ವಂಚಿತ ಅಂಗನವಾಡಿಗಳು
ಮುಳಗಂದ:
ಪಟ್ಟಣ ಸೇರಿದಂತೆ ಚಿಂಚಲಿ, ಕಲ್ಲೂರ, ನೀಲಗುಂದ, ಅಂತೂರ ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರಗಳು ಬಹುತೇಕ ಸೌಲಭ್ಯ ವಂಚಿತವಾಗಿವೆ.

ಗದಗ ತಾಲ್ಲೂಕಿನ ಗ್ರಾಮೀಣ ಹಾಗೂ ಮುಳಗುಂದ ಪಟ್ಟಣಸೇರಿದಂತೆ 220 ಅಂಗನವಾಡಿ ಕೇಂದ್ರಗಳಿದ್ದು ಈ ಪೈಕಿ 22 ಕೇಂದ್ರಗಳಿಗೆ ಕಟ್ಟಡವೇ ಇಲ್ಲ. ತಾತ್ಕಾಲಿಕವಾಗಿ ಸಮುದಾಯ ಭವನ, ಯುವಕ ಮಂಡಲದ ಕಟ್ಟಡ, ಬಾಡಿಗೆ ಆಧಾರದಲ್ಲಿ ಖಾಸಗಿ ಮನೆಗಳಲ್ಲಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಬಹುತೇಕ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಪೂರೈಕೆ ಇಲ್ಲದಾಗಿದೆ.

ಇನ್ನು ಸ್ವಂತ ಕೊಠಡಿ ಹೊಂದಿದ್ದರೂ ಅಗತ್ಯ ಸೌಲಭ್ಯಗಳು ಹಾಳಾಗಿದ್ದು ದುರಸ್ತಿ ನಡೆದಿಲ್ಲ. ಕೆಲವು ಕೇಂದ್ರಗಳಲ್ಲಿ ಕಾಟಾಚಾರಕ್ಕೆ ಶೌಚಾಲಯ ನಿರ್ಮಿಸಿದ್ದಾರೆ. ನೀರು ಪೂರೈಕೆ ಇಲ್ಲದ ಕಾರಣ ಒಮ್ಮೆಯೂ ಬಳಕೆಯಾಗಿಲ್ಲ. ಸೌಲಭ್ಯದ ಕೊರತೆಯಲ್ಲೇ ಮಕ್ಕಳು ಕಲಿಯುವಂತಾಗಿದೆ.

ಚಿಂಚಲಿಯ ಅಂಗನವಾಡಿ ಕೇಂದ್ರ ದುರಸ್ತಿಗೆ ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಇಲಾಖೆ ಕ್ರಮಕೈಗೊಂಡಿಲ್ಲ.

ಸ್ವಂತ ಕಟ್ಟಡ ಇಲ್ಲ
ಲಕ್ಷ್ಮೇಶ್ವರ:
ಪಟ್ಟಣದ 24 ಅಂಗನವಾಡಿ ಕೇಂದ್ರಗಳ ಪೈಕಿ ಕೇವಲ ಎಂಟು ಕೇಂದ್ರಗಳಿಗೆ ಸ್ವಂತ ಕಟ್ಟಡ ಇದ್ದು ಉಳಿದವು ಬಾಡಿಗೆ, ದೇವಸ್ಥಾನ, ಶಾಲೆಗಳಲ್ಲಿ ನಡೆಯುತ್ತಿವೆ. ಕೆಲವೊಂದು ಸಣ್ಣಪುಟ್ಟ ದೋಷಗಳನ್ನು ಹೊರತು ಪಡಿಸಿದರೆ ಬಹುತೇಕ ಎಲ್ಲ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಸಾಮಗ್ರಿಗಳ ವಿತರಣೆ ಚೆನ್ನಾಗಿದೆ. ಆದರೆ ಸಮಸ್ಯೆ ಇರುವುದು ಸ್ವಂತ ಕಟ್ಟಡದ್ದು.

ಇಡೀ ತಾಲ್ಲೂಕಿನಲ್ಲಿ 121 ಅಂಗನವಾಡಿ ಕೇಂದ್ರಗಳು ಇದ್ದು ಇವುಗಳಲ್ಲಿ 94 ಸ್ವಂತ, 13 ಬಾಡಿಗೆ ಮತ್ತು 14 ಕೇಂದ್ರಗಳು ಇತರೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಶೇಷವಾಗಿ ಕೆಲ ಹಳ್ಳಿಗಳಲ್ಲಿನ ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿವೆ. ಅಕ್ಕಿಗುಂದ ತಾಂಡಾದಲ್ಲಿನ ಕೇಂದ್ರ ಇದಕ್ಕೆ ಸಾಕ್ಷಿಯಾಗಿದೆ.

ಗೋವನಾಳ, ಲಕ್ಷ್ಮೇಶ್ವರ, ಬಟ್ಟೂರು, ಹರದಗಟ್ಟಿ, ಒಳಗೊಂಡಂತೆ ಇನ್ನು ಕೆಲ ಕಡೆಗಳಲ್ಲಿ ಸುಸಜ್ಜಿತ ಕಟ್ಟಡಗಳು ಇವೆ. ಕೆಲ ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ ಮೊಟ್ಟೆ ಸೇರಿದಂತೆ ಮತ್ತಿತರಪೌಷ್ಟಿಕ ಆಹಾರ ಪದಾರ್ಥಗಳು ಸಿಗುತ್ತಿಲ್ಲ ಎಂಬ ದೂರುಗಳು ಇವೆ.

ನರಗುಂದದಲ್ಲಿ ಕಟ್ಟಡದ್ದೇ ಕೊರತೆ
ನರಗುಂದ ತಾಲ್ಲೂಕಿನಲ್ಲಿ 130 ಅಂಗನವಾಡಿಗಳಿವೆ. ಆದರೆ ಹೆಚ್ಚು ಅಂಗನವಾಡಿಗಳಿಗೆ ಪಟ್ಟಣದಲ್ಲಿ ಕಟ್ಟಡಗಳೇ ಇಲ್ಲ. ನರಗುಂದ ಪಟ್ಟಣದಲ್ಲಿ 43 ಅಂಗನವಾಡಿಗಳಲ್ಲಿ 8 ಅಂಗನವಾಡಿಗಳಿಗೆ ಮಾತ್ರ ಕಟ್ಟಡಗಳಿವೆ‌. ಎರಡೇ ಕೇಂದ್ರಗಳಿಗೆ ನಿವೇಶನಗಳಿವೆ. ಉಳಿದ ಎಲ್ಲಕ್ಕೂ ನಿವೇಶನ ದೊರೆಯುತ್ತಿಲ್ಲ. ಇದರಿಂದ ಪಟ್ಟಣದ 35 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಗ್ರಾಮೀಣ ಪ್ರದೇಶದ ಅಂಗನವಾಡಿಗಳಲ್ಲಿ ಮೂಲಸೌಲಭ್ಯಗಳಿಲ್ಲ. ಕೆಲವೆಡೆ ಶೌಚಾಲಯ ಸಮಸ್ಯೆ ಇದ್ದರೆ, ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ.

5 ಅಂಗನವಾಡಿಗಳಗೆ ಸಹಾಯಕಿಯರು, ಒಂದು ಅಂಗನವಾಡಿಗೆ ಕಾರ್ಯಕರ್ತರ ಕೊರತೆ ಇದೆ. ಇವುಗಳ ಪರಿಹಾರಕ್ಕೆ ಗ್ರಾಮ ಪಂಚಾಯಿತಿ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಮುಂದಾಗಬೇಕಿದೆ.

‘ನರಗುಂದ ಪಟ್ಟಣದಲ್ಲಿ ಶೇ 90ರಷ್ಟು ಅಂಗನವಾಡಿಗಳಿಗೆ ಕಟ್ಟಡಗಳಿಲ್ಲ. ನೂತನ ಕಟ್ಟಡ ಕಟ್ಟಲು ನಿವೇಶನಗಳ ಅಗತ್ಯವಿದೆ. ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಇಲಾಖೆ ಅಧಿಕಾರಿ ರೂಪಾ ಗಂಧದ ತಿಳಿಸಿದರು.

ಅಸಮರ್ಪಕ ಪೂರಕ ಆಹಾರ ವಿತರಣೆ ಆರೋಪ
ಶಿರಹಟ್ಟಿ:
3ರಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ‘ಪೋಷಣ ಅಭಿಯಾನ’ ಅನುಷ್ಠಾನಗೊಳಿಸಲಾಗಿದೆ. ಸಮಗ್ರ ಶಿಶು ಅಭಿವೃದ್ಧಿ ಕಾರ್ಯಕ್ರಮದಡಿ ಅಂಗನವಾಡಿ ಕೇಂದ್ರಗಳಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ಚಿತ್ರಾನ್ನ, ರವೆ ಲಾಡು, ಅಕ್ಕಿ ಕಿಚಡಿ, ಮೊಳಕೆ ಬರಿಸಿದ ಹೆಸರುಕಾಳು, ಊಟ, ಕ್ಷೀರ ಭಾಗ್ಯ ಯೋಜನೆಯಲ್ಲಿ ವಾರದ ಐದು ದಿನ 150 ಮಿ.ಲೀ. ಹಾಲು ಹಾಗೂ 2 ದಿನ ಮೊಟ್ಟೆ ನೀಡಬೇಕು. ಆದರೆ ಮಕ್ಕಳಿಗೆ ಈ ಎಲ್ಲ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿಲ್ಲವೆಂಬುದು ಸಾರ್ವಜನಿಕರ ಆರೋಪ.

ಗರ್ಭಿಣಿಯರಿಗೆ ತಿಂಗಳಿಗೆ 25 ಮೊಟ್ಟೆಗಳನ್ನು ವಿತರಿಸಬೇಕು ಆದರೆ 18–20 ಮೊಟ್ಟೆಗಳನ್ನು ಮಾತ್ರ ನೀಡಲಾಗುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಮೊಟ್ಟೆಗಳನ್ನೇ ವಿತರಿಸಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆಗಳು ನಡೆದಿವೆ.

ಮೂಲ ಸೌಲಭ್ಯ ವಂಚಿತ ಅಂಗನವಾಡಿ ಕೇಂದ್ರಗಳು
ಡಂಬಳ:
ಮಕ್ಕಳ ಶಿಕ್ಷಣದ ಕಲಿಕೆಯ ಪ್ರಾರಂಭದ ಮೆಟ್ಟಿಲು ಗ್ರಾಮೀಣ ಪ್ರದೇಶದ ಬಹುತೇಕ ಅಂಗನವಾಡಿ ಕೇಂದ್ರಗಳು ಶುದ್ಧ ಕುಡಿಯುವ ನೀರು, ಕಾಂಪೌಂಡ್‌ ಸೇರಿದಂತೆ ಮೂಲಸೌಲಭ್ಯದಿಂದ ವಂಚಿತವಾಗಿವೆ.

ಡಂಬಳ ಕೇಂದ್ರ ಸ್ಥಾನ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 91 ಅಂಗನವಾಡಿ ಕೇಂದ್ರಗಳಿವೆ. ಹಳೆಯ ಕಟ್ಟಡದಲ್ಲಿ ಶೌಚಾಲಯ ಹಾಗೂ ದಾಸ್ತಾನು ಸಂಗ್ರಹ ಕೊಠಡಿ ಕೊರತೆ ಇದೆ. ಇಲಾಖೆಯ ನಿಯಮದಂತೆ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಬಹುತೇಕ ಅಂಗನವಾಡಿ ಕೇಂದ್ರದಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಲಭ್ಯ ದೊರೆಯಬೇಕು ಎಂಬುದು ಪಾಲಕರ ಒತ್ತಾಯ.

ನರೇಗಲ್: ಸ್ವಂತ ಕಟ್ಟಡದ ಕೊರತೆ
ನರೇಗಲ್:
ಹೋಬಳಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡದ್ದೇ ಸಮಸ್ಯೆ.

ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 17 ಕೇಂದ್ರಗಳಲ್ಲಿ 7ಕ್ಕೆ ಸ್ವಂತ ಕಟ್ಟಡ ಇಲ್ಲ. ಇದರಲ್ಲಿ 5 ಕೇಂದ್ರಗಳನ್ನು ಬಾಡಿಗೆ, 2 ಕೇಂದ್ರಗಳನ್ನು ಸಮುದಾಯ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ₹3 ಸಾವಿರದವರೆಗೂ ಬಾಡಿಗೆ ಕೊಟ್ಟರೂ ಪರವಾಗಿಲ್ಲ, ಉತ್ತಮ ಗುಣಮಟ್ಟದ ಖಾಸಗಿ ಕಟ್ಟಡದಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಅಂಗನವಾಡಿ ನಡೆಸಲು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಸ್ಥಳೀಯವಾಗಿ ಅಂಗನವಾಡಿ ನಡೆಸಲು ಅನುಮತಿ ಇರುವ ಓಣಿಗಳಲ್ಲಿ ಗುಣಮಟ್ಟದ ಕಟ್ಟಡಗಳು ಇಲ್ಲ. ಓಣಿಯಿಂದ ಓಣಿಗೆ ಅಂಗನವಾಡಿ ಕೇಂದ್ರವನ್ನು ಬದಲಾಯಿಸಿದರೆ ಪಾಲಕರು ಮಕ್ಕಳನ್ನು ಕಳುಹಿಸುತ್ತಿಲ್ಲ. ಆದ್ದರಿಂದ ಅಂಗನವಾಡಿ ಕೇಂದ್ರಕ್ಕೆ ಕಟ್ಟಡ ನಿರ್ಮಿಸಿ ಕೊಡುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ.

‘ಆರಂಭದಲ್ಲಿ 3 ಕೇಂದ್ರಗಳನ್ನು ನಿರ್ಮಿಸಿಕೊಡುವುದಾಗಿ ನರೇಗಲ್ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಭರವಸೆ ನೀಡಿದ್ದರು. ಆದರೆ ಈಗ ಮತ್ತೆ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ನರೇಗಲ್ ಸರ್ಕಲ್ ಮೇಲ್ವಿಚಾರಕಿ ದೀಪಾ ಭಜಂತ್ರಿ ಮಾಹಿತಿ ನೀಡಿದರು.

ಅಧಿಕಾರಿಗಳು ಏನಂತಾರೆ?
ಜಿಲ್ಲೆಯಲ್ಲಿ ಹೈಟೆಕ್‌ ಅಂಗನವಾಡಿಗಳು ಅಂತ ಇಲ್ಲ. ಜಿಲ್ಲೆಯಲ್ಲಿರುವ 1,166 ಪೈಕಿ ಈಗಾಗಲೇ ಹಲವು ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಉಳಿದವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು.
-ಉಸ್ಮಾನ್ ಎ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ

***

ಅಗತ್ಯವಿರುವಲ್ಲಿ ಅಂಗನವಾಡಿಗಳ ದುರಸ್ತಿ ಸೇರಿದಂತೆ ಮೂಲಸೌಲಭ್ಯ ಒದಗಿಸುವಂತೆ ಪ್ರಸ್ತಾವ ಕಳುಹಿಸಲಾಗಿದೆ. ಪ್ರಸ್ತುತ ಜಲ ಜೀವನ್‌ ಯೋಜನೆ ಅಡಿ ಗ್ರಾಮೀಣ ಭಾಗದ ಪ್ರತಿ ಅಂಗನವಾಡಿ ಕೇಂದ್ರಕ್ಕೂ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ.
-ಲಲಿತಾ ಅಳವಂಡಿ, ಗದಗ ತಾಲ್ಲೂಕು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ

***

ಹಳ್ಳಿಗಳಲ್ಲಿ ಕಟ್ಟಡ ಇಲ್ಲದ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಮಂಜೂರು ಮಾಡಲು ಗ್ರಾಮ ಪಂಚಾಯ್ತಿ ಒಪ್ಪಿಕೊಂಡಿದೆ. ಆದರೆ ಲಕ್ಷ್ಮೇಶ್ವರದಲ್ಲಿ ಮಾತ್ರ ಸ್ಥಳ ಸಿಗುವುದು ಕಷ್ಟವಾಗುತ್ತಿದೆ.
-ಮೃತ್ಯುಂಜಯಪ್ಪ ಗುಡ್ಡದನ್ವೇರಿ, ಸಿಡಿಪಿಒ, ಲಕ್ಷ್ಮೇಶ್ವರ

***

ಶಿರಹಟ್ಟಿ ತಾಲ್ಲೂಕಿನಲ್ಲಿ 110 ಅಂಗನವಾಡಿಗಳಿದ್ದು, ಇದರಲ್ಲಿ ಗ್ರಾಮೀಣ ಪ್ರದೇಶದ ಬಹುತೇಕ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಶಿರಹಟ್ಟಿ ಪಟ್ಟಣದಲ್ಲಿ 17 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 7 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕುರಿತು ಪಟ್ಟಣ ಪಂಚಾಯ್ತಿಯವರಿಗೆ ನಿವೇಶನ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ.
-ಮೃತ್ಯುಂಜಯ ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ

***

ಡಂಬಳ ಹೋಬಳಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಜಲ ಜೀವನ ಮಿಷನ್ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಸುವ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು.
-ಹುಲಿಗೆಮ್ಮ ಜೋಗೇರ, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ

***

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ನಾಗರಾಜ ಎಸ್‌.ಹಣಗಿ, ಚಂದ್ರಶೇಖರ ಭಜಂತ್ರಿ, ಬಸವರಾಜ ಹಲಕುರ್ಕಿ, ಚಂದ್ರು ಎಂ. ರಾಥೋಡ್‌, ಲಕ್ಷ್ಮಣ ಎಚ್‌. ಡಂಬಳ, ಖಲೀಲಅಹ್ಮದ ಶೇಖ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT