ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರಗುಂದ: ಕಾಯಕಲ್ಪಕ್ಕೆ ಕಾದಿರುವ ಕಲುಷಿತ ಕೆರೆಗಳು

Published : 30 ಸೆಪ್ಟೆಂಬರ್ 2024, 5:44 IST
Last Updated : 30 ಸೆಪ್ಟೆಂಬರ್ 2024, 5:44 IST
ಫಾಲೋ ಮಾಡಿ
Comments

ನರಗುಂದ: ಬಂಡಾಯದ ನಾಡು ನರಗುಂದದಲ್ಲಿ ಕೆಲವು ವರ್ಷಗಳ ಹಿಂದೆ ಜನ, ಜಾನುವಾರುಗಳ ಕುಡಿಯುವ ನೀರಿಗೆ ಆಧಾರವಾಗಿದ್ದ ಪಟ್ಟಣದ ಐದು ಕೆರೆಗಳು ಈಗ ಇದ್ದೂ ಇಲ್ಲದಂತಾಗಿವೆ. ಐತಿಹಾಸಿಕ ಕೆರೆಗಳೆಂದು ಭೇಟಿ ಕೊಟ್ಟರೆ ಅಲ್ಲಿ ಸಿಗುವುದು ಕೊಳಚೆ ನೀರು ಹಾಗೂ ಜಾಲಿ ಕಂಟಿಗಳ ದರ್ಶನ. ಸರ್ಕಾರದ ನಿರ್ಲಕ್ಷ್ಯ, ನಾಗರಿಕ ಪ್ರಜ್ಞೆ ಕೊರತೆ, ಕೆರೆ ಅಭಿವೃದ್ಧಿ ಪ್ರಾಧಿಕಾರ ಕಣ್ಣೆತ್ತಿ ನೋಡದಿರುವುದು, ಪುರಸಭೆ ಗಮನಹರಿಸದಿರುವುದೇ ಈ ದುಃಸ್ಥಿತಿಗೆ ಕಾರಣ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಪಂಚಬಣಗಳಿಂದಾದ ನರಗುಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸಲುವಾಗಿ ಎಲ್ಲ ದಿಕ್ಕುಗಳಲ್ಲೂ ಕೆರೆ ನಿರ್ಮಾಣ ಮಾಡಲಾಗಿದೆ. ನರಗುಂದದ ಅರಸು ಭಾಸ್ಕರರಾವ್ ಭಾವೆ ನಿರ್ಮಿಸಿದ ಐತಿಹಾಸಿಕ ಪಡುವನಗೊಂಡ ಕೆರೆ, ಸೋಮಾಪುರ ಕೆರೆ, ಹಾಲಭಾವಿ ಕೆರೆ, ತೋಟದ ಕೆರೆ, ತುರಂಗಭಾವಿ ಕೆರೆ, ಬಸವಣ್ಣನ ಕೆರೆ ಹಾಗೂ ಎರಡು ದಶಕಗಳ ಹಿಂದಷ್ಟೇ ನಿರ್ಮಿಸಿದ ಕೆಂಪಗೆರೆ ಸಹಿತ ಇಂದು ಬಳಕೆಯಾಗದೇ ಇರುವುದಕ್ಕೆ ಅವು ದನಕರುಗಳ ಆವಾಸವಾಗುತ್ತಿವೆ. ಇದರಿಂದ ಜಲಮೂಲಗಳು ಮಾಯವಾಗುವ ದುಃಸ್ಥಿತಿಗೆ ತಲುಪಿವೆ.

ಪಡುವನಗೊಂಡ ಕೆರೆ: ಶತಮಾನಕ್ಕೂ ಹಳೆಯದಾದ, ಜನಪದರ ಹಾಡಿನಲ್ಲಿ ಪ್ರಮುಖವಾಗಿ ಕೇಳಿಬರುತ್ತದೆ ಪಡುವನಗೊಂಡ ಕೆರೆ. ಇದನ್ನು ನರಗುಂದ ಬಾಬಾಸಾಹೇಬ (ಭಾವೆ) ಕಟ್ಟಿಸಿದ್ದರು. ಇದು ನರಗುಂದಕ್ಕೆ ಕುಡಿಯುವ ನೀರು ಒದಗಿಸುವ ಕೆರೆಯಾಗಿತ್ತು. ಜನರು ಇಲ್ಲಿಂದಲೇ ನೀರು ಹೊತ್ತೊಯ್ಯುತ್ತಿದ್ದರು. ಸುಮಾರು 13 ಎಕರೆ ವಿಸ್ತೀರ್ಣವುಳ್ಳ ಕೆರೆ ಪಟ್ಟಣದ ಮಧ್ಯ ಭಾಗ ದಂಡಾಪುರ ಓಣಿಗೆ ಹೊಂದಿಕೊಂಡಿದೆ.

‘ಇಂದು ಪಡುವನಗೊಂಡ ಕೆರೆ ನೋಡಿದರೆ ಅಯ್ಯೋ ಎನಿಸುತ್ತದೆ. ಸುತ್ತಲೂ ಜಾಲಿ ಕಂಟಿ ಆವರಿಸಿದೆ. ಬಳಕೆ ಮಾಡದೇ ಸರಿಯಾಗಿ ರಕ್ಷಣೆ ಮಾಡದ ಪರಿಣಾಮ ಸಂಪೂರ್ಣ ಕಲುಷಿತಗೊಂಡು ಜಾನುವಾರುಗಳ ಸಹಿತ ನೀರು ಕುಡಿಯಲಿಕ್ಕೆ ಯೋಗ್ಯವಿಲ್ಲದಂತಾಗಿದೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಐದಾರು ವರ್ಷಗಳ ಹಿಂದೆ ಈ ಕೆರೆಯ ಹೂಳು ಎತ್ತುವ ಕಾರ್ಯ ನಡೆದಿತ್ತು. ಆದರೆ, ಸ್ವಲ್ಲ ದಿನಗಳಲ್ಲೇ ಸ್ಥಗಿತಗೊಂಡಿತು. ಇದಕ್ಕೆ ಪ್ರವೇಶ ಮಾಡುವ ದಾರಿ ಈಗ ಜಾನುವಾರುಗಳ ಕಟ್ಟಲಿಕ್ಕೆ ಉಪಯೋಗವಾಗುತ್ತಿದೆ.

ಹಾಲಭಾವಿ ಕೆರೆ: ಹೆಸರೇ ಹೇಳುವಂತೆ ಈ ಕೆರೆಯ ನೀರು ಹಾಲಿನಂತೆ ಇರುತ್ತಿತ್ತಂತೆ. ಸವದತ್ತಿ ರಸ್ತೆಗೆ ಹೊಂದಿಕೊಂಡಿರುವ ಕೆರೆಯ ಪ್ರದೇಶ ಈಗ ಸಂಪೂರ್ಣ ಕಂಟಿಗಳಿಂದ, ಚರಂಡಿ ನೀರಿನಿಂದ ಆವೃತವಾಗಿ ಕೆರೆ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಮಾಪುರ ಕೆರೆ: ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಕೆರೆ ಅರ್ಧ ನರಗುಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿತ್ತು. ಒಂದು ವರ್ಷದ ಹಿಂದಿನವರೆಗೂ ಈ ಕೆರೆಯ ನೀರನ್ನು ಕುಡಿಯಲಿಕ್ಕೆ ಹಾಗೂ ಜಾನುವಾರುಗಳಿಗೆ ಬಳಸಲಾಗುತ್ತಿತ್ತು. ಆದರೆ, ಈಚೆಗೆ ಅದು ಸಂಪೂರ್ಣ ಹದಗೆಟ್ಟಿದೆ. ಕಂಟಿ ಆವರಿಸಿದೆ. ಕೆರೆಯ ಸುತ್ತಲೂ ಶೌಚ, ಮೂತ್ರ ಮಾಡುವುದು ನಡೆಯುತ್ತಿದೆ. ಇದರಿಂದ ಈ ಕೆರೆ ಕೂಡ ಸಂಪೂರ್ಣ ಹಾಳಾಗುವ ಸ್ಥಿತಿ ತಲುಪಿದೆ.

ಬಸವಣ್ಣನ ಕೆರೆಯ ನೀರನ್ನೂ ಕುಡಿಯಲಿಕ್ಕೆ ಬಳಸಲಾಗುತ್ತಿತ್ತು. ಅದರ ದಂಡೆ ಸುತ್ತಲೂ ಜನರು ವಾಸ ಮಾಡುತ್ತಿರುವ ಕಾರಣ ತ್ಯಾಜ್ಯ ವಸ್ತುಗಳು ಕೆರೆ ಸೇರಿ ಕಲುಷಿತವಾಗುತ್ತಿದೆ. ಐತಿಹಾಸಿಕ ತುರಗಭಾವಿ ಕೆರೆಯೂ ಜನಬಳಕೆಗೆ ಇತ್ತು. ಈಗ ಅದು ಕೂಡ ಕಲುಷಿತಗೊಂಡಿದೆ. ತೋಟದಕೆರೆ ಸಂಪೂರ್ಣ ಚರಂಡಿಯಂತಾಗಿದ್ದು, ಇಡೀ ಪಟ್ಟಣದ ಚರಂಡಿ ನೀರು ಈ ಕೆರೆ ಸೇರುತ್ತಿದೆ.

ಕೆಂಪಗೆರೆ: ಈ ಮೇಲಿನ ಕೆರೆಗಳು ಕಲುಷಿತಗೊಂಡು ಅದರ ಸುತ್ತಲೂ ಮನೆ, ಗುಡಿಸಲು ಶೆಡ್ ನಿರ್ಮಾಣಗೊಂಡ ಪರಿಣಾಮ ಹಾಗೂ ಜನಸಂಖ್ಯೆ ಹೆಚ್ಚಾದಂತೆ ನೀರಿನ ಅವಶ್ಯಕತೆ ಹೆಚ್ಚಾಯಿತು. ಇದನ್ನರಿತ ಪುರಸಭೆ, ಸರ್ಕಾರ ಸುಮಾರು 58 ಎಕರೆ ಹೆಚ್ಚು ಪ್ರದೇಶದಲ್ಲಿ ಕೆಂಪಗೆರೆ ನಿರ್ಮಿಸಿತು. ನಾಲ್ಕೈದು ವರ್ಷದವರೆಗೂ ಇಡೀ ಪಟ್ಟಣಕ್ಕೆ ಈ ಕೆರೆಯ ನೀರನ್ನು ಶುದ್ಧೀಕರಿಸಿ ನಳಗಳ ಮೂಲಕ ಪೂರೈಸಲಾಗುತ್ತಿತ್ತು.

ನರಗುಂದದ ಐತಿಹಾಸಿಕ ಪಡುವನಗೊಂಡ ಕೆರೆಯ ಪ್ರವೇಶದಲ್ಲಿಯೇ ಜಾನುವಾರುಗಳ ಕಟ್ಟಲಾಗಿದೆ
ನರಗುಂದದ ಐತಿಹಾಸಿಕ ಪಡುವನಗೊಂಡ ಕೆರೆಯ ಪ್ರವೇಶದಲ್ಲಿಯೇ ಜಾನುವಾರುಗಳ ಕಟ್ಟಲಾಗಿದೆ

ಆದರೆ, ಅಂತರ್ಜಲ ಮಟ್ಟದ ಏರಿಳಿತ ಹಾಗೂ ನವಿಲುತೀರ್ಥ ಜಲಾಶಯದಿಂದ ನೇರವಾಗಿ ಪೈಪ್‌ಲೈನ್ ಮೂಲಕ ನೀರು ಪೂರೈಕೆಯಾಗುತ್ತಿರುವ ಪರಿಣಾಮವೋ ಈ ಕೆರೆಯೂ ಅವನತಿಯತ್ತ ಸಾಗಿದೆ. ಇದರಿಂದಾಗಿ ಪಟ್ಟಣದಲ್ಲಿನ ಎಲ್ಲ ಕೆರೆಗಳು ಸಂಪೂರ್ಣ ಕಲುಷಿತಗೊಂಡು ಬಳಕೆಗೆ ಯೋಗ್ಯವಿಲ್ಲದಂತಾಗುತ್ತಿವೆ.

ಜನರ ಬದುಕು, ಆರೋಗ್ಯ ಹಾಗೂ ಪಟ್ಟಣದ ಸ್ವಚ್ಛತೆ ದೃಷ್ಟಿಯಿಂದ ಕೆರೆಗಳ ಕಾಯಕಲ್ಪಕ್ಕೆ ಸರ್ಕಾರ, ಸ್ಥಳೀಯ ಸಂಸ್ಥೆಗಳು ತಕ್ಷಣವೇ ಮುಂದಾಗಬೇಕು. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೆರೆಗಳ ಅಭಿವೃದ್ಧಿ ಹಾಗೂ ಕಾಯಕಲ್ಪಕ್ಕೆ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಪಟ್ಟಣದ ಸೌಂದರ್ಯ ಹಾಗೂ ಆರೋಗ್ಯ ದೃಷ್ಟಿಯಿಂದ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಲಾಗುವುದು
ಪಿ.ಕೆ. ಗುಡದರಿ ಮುಖ್ಯಾಧಿಕಾರಿ ಪುರಸಭೆ ನರಗುಂದ

ಅನಾರೋಗ್ಯದ ಕೇಂದ್ರವಾದ ಕೆರೆಗಳು

ನರಗುಂದ ಪಟ್ಟಣದ ಆರು ಕೆರೆಗಳು ಸಂಪೂರ್ಣ ಕಲುಷಿತಗೊಂಡು ಸುತ್ತಲೂ ಜಾಲಿ ಕಂಟಿ ತ್ಯಾಜ್ಯ ವಸ್ತುಗಳಿಂದ ಆವೃತವಾಗಿವೆ. ಕೆರೆ ದಂಡೆಗಳ ಮೇಲೆ ಸಮೀಪ ಮನೆಗಳೂ ಇವೆ. ಇದರಿಂದಾಗಿ ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳು ಕೆರೆ ಸೇರುತ್ತಿವೆ. ನಾಗರಿಕ ಪ್ರಜ್ಞೆ ಇರದ ಜನರು ಕೆರೆ ದಂಡೆಯನ್ನೇ ಶೌಚಕ್ಕೆ ಬಳಸಿ ಅದೇ ನೀರನ್ನೇ ಬಳಸುವ ದೃಶ್ಯ ಕಾಣುತ್ತಿವೆ. ಇದರಿಂದ ಕೆರೆಗಳು ಕೂಡ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ದುರ್ವಾಸನೆ ಬೀರುತ್ತಿವೆ. ಪಟ್ಟಣದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಈ ಅವ್ಯವಸ್ಥೆ ನೋಡಿದ ಪ್ರಜ್ಞಾವಂತ ಜನರು ‘ಹೇಗಿದ್ದ ಕೆರೆಗಳು ಹೇಗಾದವಲ್ಲಾ’ ಎಂದು ಮರುಗುತ್ತಿದ್ದಾರೆ.

ಕೆರೆಗಳಿಗೆ ಕಾಯಕಲ್ಪ ಎಂದು?

ನರಗುಂದ ಪಟ್ಟಣದ ಕೆರೆಗಳು ಅವ್ಯವಸ್ಥೆ ಅಸ್ವಚ್ಛತೆಯ ಗೂಡಾಗಿದ್ದರೂ ಸರ್ಕಾರ ಕೆರೆ ಅಭಿವೃದ್ಧಿ ಪ್ರಾಧಿಕಾರ ಸಣ್ಣ ನೀರಾವರಿ ಇಲಾಖೆ ಪುರಸಭೆ ಕೆರೆಗಳ ಅಭಿವೃದ್ಧಿಯತ್ತ ಗಮನಹರಿಸಿಲ್ಲ. ಅವರ ನಿರ್ಲಕ್ಷ್ಯದಿಂದಾಗಿ ಕೆರೆಗಳು ಕೆರೆಗಳಾಗಿಯೇ ಉಳಿಯಬೇಕೆಂಬ ದೂರದೃಷ್ಟಿ ಸಾಕಾರಗೊಳ್ಳುತ್ತಿಲ್ಲ. ಈ ಎಲ್ಲ ಕಾರಣಗಳಿಂದ ‘ಪಟ್ಟಣದ ಕೆರೆಗಳಿಗೆ ಕಾಯಕಲ್ಪ ಎಂದು’ ಎಂಬ ಪ್ರಶ್ನೆಯನ್ನು ನಾಗರಿಕರು ಕೇಳುವಂತಾಗಿದೆ. ಪಟ್ಟಣದಲ್ಲಿ ಆರಕ್ಕೂ ಹೆಚ್ಚು ಬೃಹತ್ ಕೆರೆಗಳಿದ್ದು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು. ಇಲ್ಲಿ ಮೀನು ಸಾಕಣೆ ತೋಟಗಾರಿಕೆಯಂತಹ ಉಪಕಸಬುಗಳಿಗೆ ಆದ್ಯತೆ ನೀಡಬೇಕು. ಆಗ ಮಾತ್ರ ಕೆರೆಗಳು ಮೂಲ ಸ್ಥಿತಿಯಲ್ಲಿ ಉಳಿಸಬಹುದು ಎಂದು ಪಟ್ಟಣದ ನಾಗರಿಕರು ಹೇಳುತ್ತಾರೆ. ‘ಕೆರೆಗಳ ಸುತ್ತಲಿನ ವಾತಾವರಣ ನೋಡಿದರೆ ಪುರಸಭೆ ತಾತ್ಕಾಲಿಕವಾದರೂ ಕಂಟಿಗಳನ್ನು ಸ್ವಚ್ಛಗೊಳಿಸಬೇಕು. ಇದರಿಂದ ಪಟ್ಟಣದ ಸೌಂದರ್ಯ ಹೆಚ್ಚುತ್ತದೆ‌’ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಐತಿಹಾಸಿಕ ಪಡುವನಗೊಂಡ ಕೆರೆ ದುರಸ್ತಿಯಾಗಬೇಕು. ಅರ್ಧ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಕೆರೆಯನ್ನು ಸರ್ಕಾರ ಮೂಲಸ್ಥಿತಿಗೆ ತರಲು ಸಮರ್ಪಕ ಯೋಜನೆ ರೂಪಿಸಬೇಕು
–ನಾಗಪ್ಪ ಗಡೇಕಾರ
ಪಡುವನಗೊಂಡ ಕೆರೆ ಹಾಗೂ ಹಾಲಭಾವಿ ಕೆರೆ ಹಿಂದೆ ಕುಡಿಯಲು ವರದಾನವಾಗಿದ್ದವು. ಆದರೆ ಈಗಿನ ಕಲುಷಿತ ಪರಿಸ್ಥಿತಿ ನೋಡಿದರೆ ಜಾನುವಾರುಗಳೂ ಕುಡಿಯದಂತಾಗಿವೆ. ಇದನ್ನು ಅರಿತು ಪುರಸಭೆ ಸ್ವಚ್ಛತೆಗೆ ಕ್ರಮವಹಿಸಬೇಕು.
–ಇಮಾಮಸಾಬ ಕುಂದಗೋಳ
ದಂಡಾಪುರ ನರಗುಂದ ನೀರಿಗೆ ಹಾಹಾಕಾರ ಸೋಮಾಪುರ ಕೆರೆ ನೀರು ಕಲುಷಿತವಾಗುತ್ತಿದೆ. ಉಳಿದ ಕೆರೆಗಳು ಹಾಳಾದಂತೆ ಈ ಕೆರೆ ಹಾಳಾಗಬಾರದು. ಅದಕ್ಕಾಗಿ ಆರಂಭದಲ್ಲಿಯೇ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಮುಂದೆ ನೀರಿನ ಸಮಸ್ಯೆ ಎದುರಾದಾಗ ಹಾಹಾಕಾರ ಎದುರಿಸಬೇಕಾಗುತ್ತದೆ.
–ಫಕೀರಪ್ಪ ಜೋಗಣ್ಣವರ
ನರಗುಂದ ಕೆರೆಗಳ ಸ್ವಚ್ಛತೆ ಕಾಪಾಡಿ ಕೆರೆಗಳು ಬಳಕೆಯಾಗದಿದ್ದರೂ ಜನರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದರೆ ಈ ಕೆರೆಗಳು ಬೃಹತ್ ಕೊಳಚೆ ಹೊಂಡಗಳಾದರೂ ಅಚ್ಚರಿ ಪಡಬೇಕಿಲ್ಲ.
– ವಾಸು ಚವ್ಹಾಣ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT