ಶುಕ್ರವಾರ, ಫೆಬ್ರವರಿ 28, 2020
19 °C
ಮಹಾರಾಷ್ಟ್ರದಿಂದ ಮತ್ತೆ ಆವಕ ಆರಂಭ; ಕೆ.ಜಿಗೆ ಸರಾಸರಿ ₹70 ದರ

ಗದಗದಲ್ಲಿ ಈರುಳ್ಳಿ ದರ ಇಳಿಕೆ: ಅಂತೂ ಗ್ರಾಹಕರಿಗೆ ನಿರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಗದಗ: ಕೆ.ಜಿ.ಗೆ ₹150ರ ಗಡಿ ದಾಟಿದ್ದ ಈರುಳ್ಳಿ ಧಾರಣೆ ಸದ್ಯ ₹60ಕ್ಕೆ ಇಳಿದಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಆವಕವಾಗುತ್ತಿರುವ ಈರುಳ್ಳಿ ಪ್ರಮಾಣ ಹೆಚ್ಚಿದೆ. ಇದರ ಲಾಭವನ್ನು ವರ್ತಕರು ಗ್ರಾಹಕರಿಗೆ ನಿಧಾನವಾಗಿ ವರ್ಗಾಯಿಸುತ್ತಿದ್ದು, ಬೆಲೆಯಲ್ಲಿ ದಿನೇ ದಿನೆ ಅಲ್ಪ ಇಳಿಕೆ ಕಾಣುತ್ತಿದೆ.

ಡಿಸೆಂಬರ್‌ ಅಂತ್ಯದವರೆಗೆ ಇಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ, ದೊಡ್ಡ ಗಾತ್ರದ ಒಂದು ಕೆ.ಜಿ ಈರುಳ್ಳಿ ಬೆಲೆ ₹140 ಇತ್ತು. ಮಧ್ಯಮ ಗಾತ್ರದ ಗಡ್ಡೆಗಳು ₹120ಕ್ಕೆ, ನಿಂಬೆಹಣ್ಣಿನ ಗಾತ್ರದ ಗಡ್ಡೆಗಳು ₹100ಕ್ಕೆ ಹಾಗೂ ಬೆಳ್ಳುಳ್ಳಿ ಗಾತ್ರದ ಗಡ್ಡೆಗಳು ₹80ಕ್ಕೆ ಮಾರಾಟವಾಗುತ್ತಿತ್ತು. ಇದರಿಂದ ಮಧ್ಯಮ ವರ್ಗದ ಗ್ರಾಹಕರಿಗೆ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಆದರೆ, ಜನವರಿ ಮೊದಲ ವಾರದಿಂದ ಈ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ.

ಜಿಲ್ಲೆಯಲ್ಲಿ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಅದರ ಬೆನ್ನಲ್ಲೇ ಬಂದ ಪ್ರವಾಹದಿಂದ ನೂರಾರು ಎಕರೆ ಪ್ರದೇಶದ ಈರುಳ್ಳಿ ಬೆಳೆ ಜಮೀನಿನಲ್ಲೇ ಕೊಳೆತು ಹೋಗಿತ್ತು. ಹೀಗಾಗಿ ಸ್ಥಳೀಯವಾಗಿ ಮಾರುಕಟ್ಟೆಗೆ ಪೂರೈಕೆಯಾಗುವ ಈರುಳ್ಳಿ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿತ್ತು. ಇದರಿಂದ ಜತೆಗೆ ಮಹಾರಾಷ್ಟ್ರದಲ್ಲಿ ಪ್ರವಾಹದಿಂದಾಗಿ, ಅಲ್ಲಿಂದ ಜಿಲ್ಲೆಗೆ ಆವಕವಾಗುತ್ತಿರುವ ಈರುಳ್ಳಿ (ಪುಣಾ ಗಡ್ಡೆ) ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿತ್ತು. ಇದು ಬೆಲೆ ಏರಿಕೆಗೆ ಕಾರಣವಾಗಿತ್ತು.

‘ಜನವರಿ ಮೊದಲ ವಾರದಿಂದ ಮಹಾರಾಷ್ಟ್ರದಿಂದ ಮತ್ತೆ ಈರುಳ್ಳಿ ಆವಕ ಪ್ರಾರಂಭವಾಗಿದೆ. ಗಾತ್ರದಲ್ಲಿ ಸ್ಥಳೀಯ ಈರುಳ್ಳಿಗಿಂತಲೂ ಇವು ದೊಡ್ಡವು. ಬೇಗ ಕೊಳೆತು ಹೋಗುವುದಿಲ್ಲ. ಇಂತಹ ಒಣಗಿದ ಗಡ್ಡೆಗಳಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ವ್ಯಾಪಾರಿ ಹುಸೇನ್‌ ರಾಜಾಸಾಬ್‌ ಹೇಳಿದರು.

ಮಹಾರಾಷ್ಟ್ರದಿಂದ ಈರುಳ್ಳಿ ಆವಕ ಹೆಚ್ಚಿದರೂ ಅದರ ಸಂಪೂರ್ಣ ಲಾಭವನ್ನು ವರ್ತಕರು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಹೀಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ನಿರೀಕ್ಷಿತ ಮಟ್ಟದಲ್ಲಿ ಇಳಿದಿಲ್ಲ. ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ಸರಾಸರಿ ₹4 ಸಾವಿರಕ್ಕೆ ಈರುಳ್ಳಿ ಖರೀದಿಸುವ ವರ್ತಕರು ಅದನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ₹5 ರಿಂದ ₹6 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಬೆಳಗಾವಿ, ಅರಸೀಕರೆ, ಕೊಪ್ಪಳ, ಕೋಲಾರದಿಂದ ಗದಗ ಮಾರುಕಟ್ಟೆಗೆ ಟೊಮೆಟೊ  ಆವಕವಾಗುತ್ತದೆ. ಟೊಮೊಟೊ ಪೂರೈಕೆ ಹೆಚ್ಚಿರುವುದರಿಂದ ಬೆಲೆ ಕೆ.ಜಿಗೆ ₹10ಕ್ಕೆ ಇಳಿದಿದೆ. ಆಲೂಗಡ್ಡೆ ಕೆ.ಜಿಗೆ ₹35ಕ್ಕೆ ಮಾರಾಟವಾಗುತ್ತಿದೆ. ಹೀರೇಕಾಯಿ, ಬೆಂಡೆಕಾಯಿ, ಚವಳಿಕಾಯಿ, ಕ್ಯಾರೆಟ್‌, ಎಲೆಕೋಸು, ಮೂಲಂಗಿ, ಹಸಿಮೆಣಸಿನಕಾಯಿ, ಬದನೆ, ಬೀನ್ಸ್‌ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆ ಕೆ.ಜಿಗೆ ₹60 ರಿಂದ ₹70 ಇದೆ.

ಗದಗ ಎಪಿಎಂಸಿಗೆ ಈರುಳ್ಳಿ ಆವಕ

ತಿಂಗಳು;          ಆವಕ(ಕ್ವಿಂಟಲ್‌);       ಬೆಲೆ(₹ಗಳಲ್ಲಿ)

ಅಕ್ಟೋಬರ್‌;   29,909;                      2800

ನವೆಂಬರ್‌;     1,11,263;                    5000

ಡಿಸೆಂಬರ್‌;      20,964;                      7000

ಒಟ್ಟು ಆವಕ: 1,62,136

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು