ಬುಧವಾರ, ಜನವರಿ 29, 2020
27 °C
ಕುಡಿಯುವ ನೀರಿನ ಪೈಪ್‌ಲೈನ್‌ ಸೋರಿಕೆಯಿಂದ ರಸ್ತೆಗೆ ಹಾನಿ

ರಾಜ್ಯ ಹೆದ್ದಾರಿ; ಸವಾರರಿಗೆ ಹೆಮ್ಮಾರಿ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ನಗರದ ಮೂಲಕ ಹಾದು ಹೋಗಿರುವ ಪಾಲಾ–ಬಾದಾಮಿ ರಾಜ್ಯ ಹೆದ್ದಾರಿಯು ಗುಂಡಿಗಳ ಆಗರವಾಗಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ, ಈ ಗುಂಡಿಗೆ ಬಿದ್ದು ಗಾಯ ಮಾಡಿಕೊಳ್ಳುವುದು ಖಚಿತ.

ರಾಜ್ಯ ಹೆದ್ದಾರಿ– 7 ನಗರದೊಳಗಿನಿಂದ 8 ಕಿ.ಮೀ ಹಾದು ಹೋಗಿದೆ. ಈ ಎಂಟು ಕಿ.ಮೀ ರಸ್ತೆಯಲ್ಲಿ ಹೆಜ್ಜೆಗೊಂದರಂತೆ ಗುಂಡಿಗಳಿವೆ. ಭೂಮರಡ್ಡಿ ವೃತ್ತ ಮತ್ತು ಹಳೆ ಕೋರ್ಟ್‌ ವೃತ್ತದ ಬಳಿ ಕುಡಿಯುವ ನೀರಿನ ಪೈಪ್‌ಲೈನ್‌ ಸೋರಿಕೆಯಿಂದ ರಸ್ತೆ ಸಂಪೂರ್ಣ ಹಾಳಾಗಿದೆ.

ಭೂಮರಡ್ಡಿ ವೃತ್ತದ ಬಳಿ ಪೈಪ್‌ಲೈನ್‌ ಒಡೆದು ದೊಡ್ಡ ಗುಂಡಿ ಬಿದ್ದು ಮೂರು ತಿಂಗಳು ಕಳೆದಿದೆ. ಪೈಪ್‌ಲೈನ್‌ ದುರಸ್ತಿ ಮಾಡಿದ ನಂತರ, ಗುಂಡಿಗೆ ಮಣ್ಣು ಹಾಕಿ ಕೈಬಿಡಲಾಗಿದೆ. ರಾತ್ರಿ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ದುಸ್ಥಿತಿ ಕಂಡ ಸಂಚಾರ ಪೊಲೀಸರು, ಹೆದ್ದಾರಿ ಮಧ್ಯದಲ್ಲಿ ಬ್ಯಾರಿಕೇಡ್ ಇಟ್ಟು ಸವಾರರಿಗೆ ಅಪಾಯದ ಸೂಚನೆ ನೀಡಿದ್ದಾರೆ.

ಹಳೆ ಕೋರ್ಟ್‌ ವೃತ್ತದ ಬಳಿಯೂ ಕುಡಿಯುವ ನೀರಿನ ಸೋರಿಕೆಯಿಂದ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ಇಲ್ಲೂ ಜೆಸಿಬಿಯಿಂದ ಗುಂಡಿಗೆ ಸ್ವಲ್ಪ ಮಣ್ಣು ಸುರಿಯಲಾಗಿದೆ. ಆದರೆ, ನೀರು ಸೋರುತ್ತಿರುವುದರಿಂದ ರಸ್ತೆ ಕೆಸರುಗದ್ದೆಯಾಗಿದೆ. ಈ ವೃತ್ತದ ಎದುರಿಗೇ ಪ್ರಾಚ್ಯವಸ್ತು ಸಂಗ್ರಹಾಲಯ ಇದೆ. ಇಲ್ಲಿಗೆ ಪ್ರತಿನಿತ್ಯ ಹಲವು ಪ್ರವಾಸಿಗರು ಬರುತ್ತಾರೆ. ರಸ್ತೆ ದುರವಸ್ಥೆ ನೋಡಿಯೇ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ರೋಟರಿ ವೃತ್ತ, ತೋಂಟದಾರ್ಯ ಮಠದ ದ್ವಾರಬಾಗಿಲು ಸಮೀಪ, ಹಳೆಯ ಕೋರ್ಟ್‌ ಮುಂಭಾಗ, ರೈಲ್ವೆ ಕೆಳಸೇತುವೆ, ಹೆಲ್ತ್‌ ಕ್ಯಾಂಪ್‌ ಈ ಪ್ರದೇಶದಲ್ಲಿ ಒಮ್ಮೆ ಸುತ್ತಾಡಿದರೆ ರಾಜ್ಯ ಹೆದ್ದಾರಿಯ ದುರವಸ್ಥೆಯ ನೇರ ದರ್ಶನವಾಗುತ್ತದೆ. ರಸ್ತೆ ನಿರ್ವಹಣೆ ಲೋಕೋಪಯೋಗಿ ಇಲಾಖೆಯದ್ದು. ಆದರೆ, ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತಿದೆ.

ಮೃತ್ಯುಕೂಪವಾಗಿರುವ ಈ ರಸ್ತೆಯನ್ನು ದಾಟಿಕೊಂಡೇ ನಿತ್ಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ನಗರಸಭೆ ಪೌರಾಯುಕ್ತರು ಪ್ರಯಾಣಿಸುತ್ತಾರೆ. ಆದರೆ, ರಸ್ತೆ ದುರವಸ್ಥೆ ಅವರ ಕಣ್ಣಿಗೂ ಬಿದ್ದಿಲ್ಲ. ಸಾರ್ವಜನಿಕರು, ಸವಾರರು ಮಾತ್ರ ಆಡಳಿತ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ನಿತ್ಯ ಇದೇ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು