ಬಲಾಢ್ಯ ರಾಷ್ಟ್ರ ಬಿಜೆಪಿಯಿಂದ ನಾಶ

ಗದಗ: ‘60 ವರ್ಷಗಳ ಕಾಲ ಶ್ರಮವಹಿಸಿ ನಿರ್ಮಾಣ ಮಾಡಿದ ಶಕ್ತಿಶಾಲಿ ಭಾರತವನ್ನು ಭಾರತೀಯ ಜನತಾ ಪಾರ್ಟಿ ಆರೇಳು ವರ್ಷಗಳಲ್ಲಿ ನಾಶ ಮಾಡಿದೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ ಗಂಭೀರ ಆರೋಪ ಮಾಡಿದರು.
ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಅವರು ಮಾತನಾಡಿ, ‘ಕಾಂಗ್ರೆಸ್ ಪಕ್ಷಕ್ಕೆ ರೋಚಕ ಇತಿಹಾಸವಿದೆ. ಸ್ವಾತಂತ್ರ್ಯಸಂಗ್ರಾಮದಲ್ಲಿ ಏಳೂವರೆ ಲಕ್ಷಕ್ಕೂ ಹೆಚ್ಚು ಜನರು ಪ್ರಾಣತ್ಯಾಗ ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ನಾವು. ಶ್ರೇಷ್ಠ ಸಂವಿಧಾನ ನೀಡಿದವರು ನಾವು. ಭಾರತವನ್ನು ಬಲಾಢ್ಯ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸಿದ್ದು ಕಾಂಗ್ರೆಸ್ ಪಕ್ಷ. ಆದರೆ, ಕೇವಲ ಆರೇಳು ವರ್ಷಗಳಲ್ಲಿ ಶಕ್ತಿಶಾಲಿ ಭಾರತವನ್ನು ಬಿಜೆಪಿಯವರು ನಾಶ ಮಾಡಿದ್ದಾರೆ’ ಎಂದು ದೂರಿದರು.
‘ಸಿಎಂ ಕುಟುಂಬದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ’ ಎಂಬ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಇತಿಹಾಸವಿರುವ ಕಾಂಗ್ರೆಸ್‌ಗೆ ಧ್ವನಿ ಎತ್ತುವುದು ಗೊತ್ತಿಲ್ಲವೇ?’ ಎಂದು ಕಿಡಿಕಾರಿದರು.
‘ಬಿಜೆಪಿಯಲ್ಲಿ ಸ್ವಜನ ಪಕ್ಷಪಾತ, ಜನವಿರೋಧಿ ನೀತಿ, ಕೆಸರೆರಚಾಟ, ಭ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದೆ. ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಸಂವಿಧಾನ ಆಶಯಗಳಿಗೆ ಅನುಗುಣವಾಗಿ ನಡೆಯುತ್ತಿಲ್ಲ. ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ವರದಿ ನೀಡಿ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು’ ಎಂದು ಹೇಳಿದರು.
‘ಬಿಜೆಪಿ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ಯಾವ ವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿವೆ ಎಂಬುದನ್ನು ಹೇಳಲಿ’ ಎಂದು ಸವಾಲು ಹಾಕಿದರು.
‘ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಚರ್ಚೆ’ ಕುರಿತು ಪ್ರತಿಕ್ರಿಯಿಸಿದ ಎಸ್.ಆರ್.ಪಾಟೀಲ, ‘ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಆಗಲು ಅರ್ಧ ಡಜನ್‌ಗಿಂತಲೂ ಹೆಚ್ಚು ಜನರು ಇದ್ದಾರೆ. ಎಲ್ಲ ಸಮುದಾಯದವರಿಗೂ ನಮ್ಮ ಸಮುದಾಯದ ನಾಯಕರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇರುವುದು ಸಹಜ. ಆದರೆ, ಕಾಂಗ್ರೆಸ್‌ನಲ್ಲಿ ಸಿಎಂ ವಿಚಾರವನ್ನು ಹಾದಿಬೀದಿಯಲ್ಲಿ ನಿರ್ಣಯ ಮಾಡುವುದಿಲ್ಲ. ಪಕ್ಷಕ್ಕೆ ಬಹುಮತ ಬಂದ ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನನ್ನು ಆಯ್ಕೆ ಮಾಡಿ, ನಂತರ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುತ್ತಾರೆ. ಇದು ನಮ್ಮ ಪಕ್ಷದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ’ ಎಂದು ಹೇಳಿದರು.
‘ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಯನ್ನು ಹಾದಿಬೀದಿಯಲ್ಲಿ ಮಾಡದಂತೆ ರಾಜಕೀಯ ಮುಖಂಡರ ಅನುಯಾಯಿಗಳು, ಅಭಿಮಾನಿಗಳಿಗೆ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ’ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ. ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ನಿಜವೋ; ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕೂಡ ಅಷ್ಟೇ ನಿಶ್ಚಿತ. ಬಿಜೆಪಿ ಧೂಳೀಪಟವಾಗಲಿದೆ
ಎಸ್.ಆರ್.ಪಾಟೀಲ, ಕಾಂಗ್ರೆಸ್ ಹಿರಿಯ ಮುಖಂಡ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.