ಗದಗ: ಸಂಭಾವ್ಯ ಕೋವಿಡ್–19 ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆಗೆ ಜಿಲ್ಲಾಡಳಿತ ಕ್ರಮವಹಿಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ‘ಅಪೌಷ್ಟಿಕ ಮಕ್ಕಳ ವಿಶೇಷ ಶಿಬಿರ’ ಹಮ್ಮಿಕೊಳ್ಳಲಾಗಿದೆ.
ಗದಗ ಜಿಲ್ಲೆಯಲ್ಲಿ 243 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಈ ಮಕ್ಕಳಿಗಾಗಿಯೇ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪರೀಕ್ಷಿಸಿ, ಅವರ ಆರೋಗ್ಯ ಸುಧಾರಣೆಗೆ ಅಗತ್ಯವಿರುವ ಚಿಕಿತ್ಸೆ ಹಾಗೂ ಊಟ, ಔಷಧೋಪಚಾರ ನೀಡಲಾಗುತ್ತದೆ. ಜತೆಗೆ ಆ ಮಕ್ಕಳ ತಂದೆ ತಾಯಿಗೆ ಕೋವಿಡ್ ಲಸಿಕೆ ಹಾಕುವ ವ್ಯವಸ್ಥೆ ಕೂಡ ಮಾಡಲಾಗಿದೆ.
‘ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು 14 ದಿನಗಳ ಕಾಲ ಕೇಂದ್ರದಲ್ಲಿ ಇರಿಸಿಕೊಂಡು ಪೌಷ್ಟಿಕ ಊಟೋಪಚಾರ ನೀಡಿ ಅವರ ವಯಸ್ಸಿಗೆ ಅನುಗುಣವಾಗಿ ತೂಕ ಹೆಚ್ಚಿಸಲು ಕ್ರಮವಹಿಸಲಾಗುವುದು. ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್ ಎ. ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಜಿಲ್ಲೆಯಲ್ಲಿ 15 ಸಾವಿರದಷ್ಟಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಈ ಮಕ್ಕಳ ಆರೋಗ್ಯ ಸ್ಥಿತಿಗತಿ ಕುರಿತಂತೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ತೀವ್ರ ಅಪೌಷ್ಟಿಕತೆ ಹಾಗೂ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲು ಕ್ರಮವಹಿಸಲಾಗುತ್ತದೆ’ ಎಂದು ಡಿಎಚ್‌ಒ ಡಾ.ಸತೀಶ್ ಬಸರಿಗಿಡದ ತಿಳಿಸಿದ್ದಾರೆ.
‘ತೂಕ, ವಯಸ್ಸು, ಎತ್ತರ ಈ ಮೂರು ಮಾನದಂಡಗಳನ್ನು ಇರಿಸಿಕೊಂಡು ಮಕ್ಕಳು ಪೌಷ್ಟಿಕತೆಯ ಮಟ್ಟವನ್ನು ನಿರ್ಧರಿಸಲಾಗುತ್ತದೆ. ಶಿಬಿರಕ್ಕೆ ಬಂದ ಕೂಡಲೇ ಮಕ್ಕಳ ಪೋಷಕರ ಕೋವಿಡ್–19 ತಪಾಸಣೆ ನಡೆಸಿ ನೆಗೆಟಿವ್ ಬಂದಲ್ಲಿ ಮಾತ್ರ ಶಿಬಿರಕ್ಕೆ ದಾಖಲಿಸಲಾಗುವುದು. ಶಿಬಿರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುವುದು. ಜತೆಗೆ ಆಪ್ತ ಸಮಾಲೋಚನೆ ನಡೆಸಲಾಗುತ್ತದೆ’ ಎಂದು ಉಸ್ಮಾನ್ ಎ. ತಿಳಿಸಿದ್ದಾರೆ.
‘ಶಿಬಿರದಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಉಚಿತ ಊಟ, ವಸತಿ ಸೌಕರ್ಯವಿದೆ. ಪೌಷ್ಟಿಕ ಆಹಾರ ತಯಾರಿಕಾ ಪ್ರಾತ್ಯಕ್ಷಿಕೆ ನಡೆಸುವುದು, ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ, ಆರೋಗ್ಯ, ಆಹಾರ, ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ಹಾಗೂ ಮನರಂಜನಾ ಕಾರ್ಯಕ್ರಮವೂ ಇರಲಿದೆ’ ಎಂದು ಅವರು ಹೇಳಿದರು.
*
ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 243 ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇನ್‌ಫ್ಲ್ಯುಯೆಂಜಾ ಲಸಿಕೆ ಹಾಕಿಸಲು ಕ್ರಮವಹಿಸಲಾಗಿದೆ. ಕೆಮ್ಮು, ನೆಗಡಿ, ಜ್ವರ ಬಾಧಿಸದಂತೆ ಈ ಲಸಿಕೆ ರಕ್ಷಣೆ ನೀಡಲಿದೆ
–ಡಾ. ಸತೀಶ್ ಬಸರಿಗಿಡದ, ಡಿಎಚ್‌ಒ
*
ಜುಲೈ 14ರವರೆಗೆ ಶಿಬಿರ ನಡೆಯಲಿದ್ದು, ಬೆಳಿಗ್ಗೆ ಯೋಗಾಸನದಿಂದ ಮಕ್ಕಳ ದಿನಚರಿ ಆರಂಭಗೊಳ್ಳಲಿದೆ. ತಜ್ಞ ಮಕ್ಕಳ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿ ಅವಶ್ಯಕತೆ ಇರುವವರಿಗೆ ಚಿಕಿತ್ಸೆ ನೀಡುತ್ತಾರೆ.
–ಉಸ್ಮಾನ್ ಎ., ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.