ಸೋಮವಾರ, ಜನವರಿ 25, 2021
19 °C
‘ಸ್ವೆರೋಸ್‌ ಕರ್ನಾಟಕ’ ಸಮಾವೇಶದಲ್ಲಿ ಡಾ. ಆರ್‌.ಎಸ್‌.ಪ್ರವೀಣ್‌ ಕುಮಾರ್‌

ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಬೀದಿಯಲ್ಲಿ ನಿಂತು ಹೋರಾಟ ಮಾಡಿದರೆ ಹಕ್ಕು ಮತ್ತು ಸವಲತ್ತುಗಳು ಸಿಗುವುದಿಲ್ಲ. ಶಿಕ್ಷಣದಿಂದ ಮಾತ್ರ ತಳಸಮುದಾಯಗಳ ಆಮೂಲಾಗ್ರ ಬದಲಾವಣೆ ಸಾಧ್ಯ. ಹಾಗಾಗಿ, ನಮ್ಮ ಬದುಕಿನ ಸುಧಾರಣೆಗಾಗಿ, ಹಕ್ಕಿಗಾಗಿ ಅತ್ಯುನ್ನತ ಶಿಕ್ಷಣ ಪಡೆಯುವತ್ತ ಗಮನ ಹರಿಸಬೇಕು’ ಎಂದು ಸ್ವೆರೋಸ್‌ ನೆಟ್‌ವರ್ಕ್‌ ಅಧ್ಯಕ್ಷ ಹಾಗೂ ಐಪಿಎಸ್‌ ಅಧಿಕಾರಿ ಡಾ. ಆರ್‌.ಎಸ್‌.ಪ್ರವೀಣ್‌ ಕುಮಾರ್‌ ಅಭಿಪ್ರಾಯಪಟ್ಟರು.

ನಗರದ ಡಾ. ಬಾಬು ಜಗಜೀವನ್‌ ರಾಮ್‌ ಭವನದಲ್ಲಿ ಭಾನುವಾರ ನಡೆದ ‘ಸ್ವೆರೋಸ್‌ ಕರ್ನಾಟಕ’ ರಾಜ್ಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ತಳ ಸಮುದಾಯಗಳು ಇಂದು ಅವಕಾಶಗಳಿಂದ ವಂಚಿತವಾಗಿರುವುದು ಮತ್ತು ತಮ್ಮ ಹಕ್ಕುಗಳಿಗಾಗಿ ಇಂದಿಗೂ ಹೋರಾಟ ಮಾಡುತ್ತಲೇ ಇರುವುದಕ್ಕೆ ಭಯವೇ ಕಾರಣ. ಶಿಕ್ಷಣ ಇಲ್ಲದಿದ್ದಾಗ ಮನಸ್ಸಿನಲ್ಲಿ ಭಯ ಮೂಡುತ್ತದೆ. ಪೋಷಕರು ಮಕ್ಕಳ ಮನಸ್ಸಿನಲ್ಲಿ ಅಡಗಿರುವ ಭಯ ಹೋಗಲಾಡಿಸಿ ಅವರಿಗೆ ಶಿಕ್ಷಣ ಕೊಡಿಸಬೇಕು. ಆಗ ಮಾತ್ರ ನಮ್ಮ ಬದುಕಿನಲ್ಲಿ, ಆಲೋಚನಾ ಕ್ರಮದಲ್ಲಿ ಬದಲಾವಣೆ ಕಾಣಲು ಸಾಧ್ಯ’ ಎಂದು ಹೇಳಿದರು.

‘ಇಂಗ್ಲಿಷ್‌ ಎಂಬುದು ಅನ್ನ ಮತ್ತು ಬದುಕಿನ ಭಾಷೆಯಾಗಿದ್ದು, ಎಲ್ಲರಿಗೂ ಆಂಗ್ಲ ಮಾಧ್ಯಮದಲ್ಲೇ ಶಿಕ್ಷಣ ದೊರೆಯುವಂತಾಗಬೇಕು. ಶ್ರೀಮಂತರು ಎಲ್ಲ ಸವಲತ್ತುಗಳನ್ನು ಪಡೆದು, ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ತಳ ಸಮುದಾಯದ ಮಕ್ಕಳು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡು ಅದೇ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ. ಹಾಗಾಗಿ, ಪರಿಶಿಷ್ಟ ಜಾತಿ, ಪಂಗಡದ ಮಕ್ಕಳು ಕೂಡ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆದು, ಅವಕಾಶಗಳನ್ನು ಬಳಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು’ ಎಂದು ಅಭಿಪ್ರಾಯಪಟ್ಟರು.

ಕುಂಬಳಗೋಡು ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘದ ಉಪಾಧ್ಯಕ್ಷ ಲಿಂಗೇಶ್‌ ಎಚ್‌.ಎಸ್‌. ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ತಳ ಸಮುದಾಯಗಳ ಬದುಕು ಸುಧಾರಿಸಿಲ್ಲ. ನಮ್ಮ ಮಕ್ಕಳಿಗೆ ಸರಿಯಾಗಿ ಕನಸು ಕಟ್ಟಲು ಬರುವುದಿಲ್ಲ. ಕಟ್ಟಿದ ಕನಸನ್ನು ನನಸಾಗಿಸಲು ನಡೆಯಬೇಕಾದ ದಾರಿಯ ಬಗ್ಗೆ ಪಕ್ವತೆ ಇಲ್ಲ. ಹಾಗಾಗಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ವ್ಯಾಪಾರ, ಉದ್ಯಮದಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಅವರಿಗೆ ಪ್ರತಿದಿನವೂ ಸ್ವಾವಲಂಬನೆಯ ಇಂಜೆಕ್ಷನ್‌ ನೀಡುತ್ತಿರಬೇಕು’ ಎಂದು ಅಭಿಪ್ರಾಯಪಟ್ಟರು.

ನಿರ್ದೇಶಕ ವಿನಯ್‌ ಕುಮಾರ್‌ ಜಿ.ಬಿ. ಮಾತನಾಡಿ, ‘ವಿಶ್ವ ರತ್ನ ಡಾ. ಬಿ.ಆರ್‌.ಅಂಬೇಡ್ಕರ್‌ ನಮ್ಮ ಸಮುದಾಯದ ಜನರೆಲ್ಲರೂ ಬಲಿಷ್ಠರಾಗಬೇಕು ಎಂದು ಬಯಸಿದರು. ಸಂಘಟನೆಯ ನೀಲಿ ಬಣ್ಣ ವಿಶಾಲ ಮನೋಭಾವದ ಸಂಕೇತ. ನಾವು ಹೃದಯ ಶ್ರೀಮಂತರಾಗಬೇಕು. ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಡಿಮೆ ಇದ್ದು, ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮುದಾಯವನ್ನು ಬಲಿಷ್ಠಗೊಳಿಸಬೇಕು’ ಎಂದು ಹೇಳಿದರು.

ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ರಾಜ್ಯ ಸಂಚಾಲಕ ಡಾ. ಕೆ.ಬಿ.ಓಬಳೇಶ್‌ ಮಾತನಾಡಿ, ‘ತಳಸಮುದಾಯದ ಮಕ್ಕಳನ್ನು ಹೀನವಾಗಿ ಕಾಣುವ ಪರಿಸ್ಥಿತಿ ಇದ್ದು, ಹಕ್ಕು ಮತ್ತು ಸವಲತ್ತು ಒದಗಿಸುವಲ್ಲಿ ತಾರತಮ್ಯ ಮಾಡುತ್ತಿರುವ ರಾಜ್ಯದ ಸರ್ಕಾರಿ ಹಾಸ್ಟೆಲ್‌ಗಳನ್ನು ಮೊದಲು ಸ್ವಚ್ಛ ಮಾಡಬೇಕಿದೆ. ಹೊಣೆಗಾರಿಕೆಯ ಅರಿವು ಮೂಡಿಸಲು ಹೋರಾಟ ಮಾಡಬೇಕಿದೆ. ನಮ್ಮ ರಾಜ್ಯದಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಇದ್ದರೂ ಕೂಡ ಪರಿಶಿಷ್ಟ ವರ್ಗದ ಮಕ್ಕಳ ಬದುಕು ಸುಧಾರಿಸಿಲ್ಲ. ತೆಲಂಗಾಣದ ವಿಲೇಜ್‌ ಲರ್ನಿಂಗ್‌ ಸೆಂಟರ್‌ಗಳು ನಮಗೆ ಮಾದರಿ ಆಗಬೇಕು’ ಎಂದು ಹೇಳಿದರು.

ಹಣಕಾಸು ಇಲಾಖೆಯ ಜಂಟಿ ನಿರ್ದೇಶಕ ಭಾಗ್ಯಲಕ್ಷ್ಮಿ, ನಿರ್ದೇಶಕ ಟಿ.ಕೆ.ದಯಾನಂದ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ದೇವರಾಜ್‌ ಎನ್‌. ಇದ್ದರು.

ಸಮುದಾಯ ಕಲಿಕಾ ಕೇಂದ್ರದಿಂದ ಶೈಕ್ಷಣಿಕ ಬದಲಾವಣೆ
‘ತಳ ಸಮುದಾಯಗಳ ಜನರು ಹೆಂಡ, ಸಾರಾಯಿ ಬಿಡಬೇಕು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆ ಮಾಡುವುದಿಲ್ಲ, ಬಾಲ್ಯ ವಿವಾಹ ಪ್ರೋತ್ಸಾಹಿಸುವುದಿಲ್ಲ ಎಂದು ಶಪಥ ಮಾಡಬೇಕು’ ಎಂದು ಡಾ. ಆರ್‌.ಎಸ್‌.ಪ್ರವೀಣ್‌ ಕುಮಾರ್‌ ಹೇಳಿದರು.

‘ಸಮುದಾಯದ ಮಕ್ಕಳು ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸು ಮಾಡಿ ಜಿಲ್ಲಾಧಿಕಾರಿ, ಎಸ್‌ಪಿ ಆಗಬೇಕು. ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ವೈದ್ಯ, ಎಂಜಿನಿಯರ್‌, ಉದ್ಯಮಿ ಆಗಬೇಕು. ತೆಲಂಗಾಣದಂತೆ ಇಲ್ಲೂ ಕೂಡ ಸಮುದಾಯ ಕಲಿಕಾ ಕೇಂದ್ರಗಳನ್ನು ತೆರೆದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಹೇಳಿದರು.

ಗಮನ ಸೆಳೆದ ಸ್ವೆರೋಸ್‌ ಘೋಷಣೆಗಳು
ಹಸಿವಾದರೆ ಅನ್ನ ತಿನ್ನಬೇಡಿ; ಅಕ್ಷರ ತಿನ್ನಿರಿ, ತಮಟೆ ಬಡಿಯುವ ಕೈಗಳು ಡಾಲರ್‌ ಎಣಿಸಬೇಕು, ಚಪ್ಪಲಿ ಹೊಲೆಯುವ ಕೈಗಳು ಚರಿತ್ರೆ ಬರೆಯಬೇಕು, ಕುಡುಗೋಲು ಹಿಡಿಯುವ ಕೈಗಳು ಕೋಡಿಂಗ್‌ ಕಲಿಯಬೇಕು, ಬಿಯರ್‌ ಬೇಡ ನಮಗೆ ಬುಕ್‌ ಬೇಕು ಎಂಬ ಸ್ವೆರೋಸ್‌ ಘೋಷಣೆಗಳು ಸಭಿಕರ ಗಮನ ಸೆಳೆದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು