ರೋಣ: ತಾಲ್ಲೂಕಿನಾದ್ಯಂತ ಪ್ರಮುಖ ಆಹಾರ ಬೆಳೆಯಾದ ಹೆಸರು ಒಕ್ಕಣೆ ಪ್ರಾರಂಭವಾಗಿದ್ದು, ಪರ ರಾಜ್ಯಗಳಿಂದ ಬೃಹತ್ ವಕ್ಕಣೆ ಯಂತ್ರಗಳು ನಗರಕ್ಕೆ ದಾಂಗುಡಿ ಇಟ್ಟಿದ್ದು, ರಸ್ತೆ ಮಾರ್ಗದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿವೆ.
ಆಂಧ್ರ ಪ್ರದೇಶ ತಮಿಳುನಾಡು ತೆಲಂಗಾಣ ರಾಜ್ಯಗಳಿಂದ ನಗರಕ್ಕೆ ಬಂದಿರುವ ಬೃಹತ್ ಒಕ್ಕಣೆ ಯಂತ್ರಗಳು ನಗರದ ಕಿರಿದಾದ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ತೀವ್ರ ಸಂಚಾರ ಸಮಸ್ಯೆ ಉಂಟಾಗಿದೆ. ನಗರದ ಸೂಡಿ ವೃತ್ತ, ಮುಲ್ಲಾನಬಾವಿ ಸರ್ಕಲ್, ಪೋತರಾಜನಕಟ್ಟೆ, ಬಸ್ ನಿಲ್ದಾಣದ ಮುಂಭಾಗದ ಬಳಿ ವ್ಯಾಪಕ ಅಡೆತಡೆ ಉಂಟಾಗಿ ವಾಹನ ಸಂಚಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಸುಗಮ ಸಂಚಾರ ಗಗನ ಕುಸುಮವಾಗಿದೆ.
ಇತ್ತೀಚೆಗೆ ಪೊಲೀಸ್ ಇಲಾಖೆ ಹಲವು ಇಲಾಖೆಗಳ ಸಹಯೋಗದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ಸ್ಥಳ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಇನ್ನೆಷ್ಟು ದಿನ ಬೇಕು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಬೃಹತ್ ವಾಹನ ಒಂದು ಕ್ರಾಸ್ ಮಧ್ಯದಲ್ಲಿ ಸಿಲುಕಿಕೊಂಡರೆ ಸುಮಾರು 40 ನಿಮಿಷದಿಂದ ಒಂದು ಗಂಟೆಯವರೆಗೆ ಸಂಚಾರ ಸಂಪೂರ್ಣ ಬಂದಾಗುತ್ತಿದ್ದು, ನಗರಕ್ಕೆ ಹೊರ ವರ್ತುಲ ರಸ್ತೆ ಇರದ ಕಾರಣ ಸಮಸ್ಯೆ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ.
ಆಟೋ ಟಾಂಗಾಗಳಿಗೆ ನಿಲ್ದಾಣವಾದ ಮಿನಿ ಬಸ್ ನಿಲ್ದಾಣ: ಕೆಲವು ಕಡೆ ಮುಖ್ಯರಸ್ತೆಯನ್ನು ವಿಸ್ತರಣೆ ಮಾಡಲಾಗಿದೆ. ಆದರೂ ಕೂಡಾ ಟಂಟಂ, ಕಾರು, ದ್ವಿಚಕ್ರ ವಾಹನಗಳ ಸವಾರರು ರಸ್ತೆ ಮಧ್ಯೆದಲ್ಲಿಯೇ ನಿಲ್ಲಿಸುತ್ತಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಅಲ್ಲದೆ ರಸ್ತೆ ಮಧ್ಯೆ ನಿಲ್ಲುತ್ತಿದ್ದ ಬಸ್‌ಗಳನ್ನು ಸೂಡಿ ವೃತ್ತದ ಬಳಿ ನಿರ್ಮಿಸಿರುವ ಮಿನಿ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾಗುತ್ತಿತ್ತು. ಅದು ಈಗ ಖಾಸಗಿ ವಾಹನ, ಅಟೊ, ಟಂಟಂಗಳ ತಂಗುದಾಣವಾಗಿದೆ. ಮತ್ತೆ ರಸ್ತೆಯಲ್ಲಿಯೇ ಸಾರಿಗೆ ಸಂಸ್ಥೆಗಳ ಬಸ್ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು ಮಾಡುತ್ತಿವೆ.
ಇದಕ್ಕೆ ತಾಲ್ಲೂಕು, ಸ್ಥಳೀಯ ಆಡಳಿತ ಸೇರಿದಂತೆ ಪೊಲೀಸ್ ಇಲಾಖೆ ಸಂಚಾರ ಜಾಗೃತಿ ಜೊತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
ನಗರದ ಒಳ ರಸ್ತೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಪುರಸಭೆ ವ್ಯಾಪ್ತಿಗೆ ಬರುತ್ತವೆ. ಪುರಸಭೆ ಮತ್ತು ಪೊಲೀಸ್ ಇಲಾಖೆ ಯಾವುದೇ ಸಹಾಯ ನಿರೀಕ್ಷಿಸಿದಲ್ಲಿ ನಮ್ಮ ಇಲಾಖೆಯಿಂದ ಸಹಕಾರ ನೀಡಲಾಗುವುದುನಾಗರಾಜ.ಕೆ ತಹಶೀಲ್ದಾರ್
ರಸ್ತೆ ಸಂಚಾರ ಮತ್ತು ಸುರಕ್ಷತೆಯ ಮೇಲೆ ಹದ್ದಿನ ಕಣ್ಣಿಡಲು ಪೋಲಿಸ್ ಇಲಾಖೆ ಜಾರಿಗೆ ತಂದಿರುವ ‘ಥರ್ಡ್ ಐ’ (ಸಿಸಿ ಕ್ಯಾಮೆರಾ ಆಧರಿತ ತಂತ್ರಜ್ಞಾನ) ವ್ಯವಸ್ಥೆ ಸಂಚಾರ ನಿಯಮ ಉಲ್ಲಂಘನೆ ಅತಿ ಭಾರದ ವಸ್ತುಗಳ ಸಾಗಾಟ ಮರಳು ತುಂಬಿದ ಲಾರಿಗಳು ಕಂಡು ಬಂದಿವೆ. ನಿಗದಿಪಡಿಸಿದ ಸಮಯ ಪರವಾನಗಿ ಮೀರಿ ಕೆಲವು ಬೃಹತ್ ವಾಹನಗಳು ಸಂಚರಿಸುತ್ತಿರುವುದು ಕಂಡು ಬಂದಿವೆ.
ಇವುಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬಹುದು. ಆದರೆ ಆ ಕೆಲಸ ಆಗುತ್ತಿಲ್ಲ ಎಂಬುವುದು ನಾಗರಿಕರ ಅಸಮಾಧಾನ. ಈ ಕುರಿತು ಪಿಎಸ್‌ಐ ಪ್ರಕಾಶ ಬಣಕಾರ ಅವರು ಪ್ರತಿಕ್ರಿಯೆ ನೀಡಿದ್ದು ಈಗಾಗಲೇ ಪುರಸಭೆ ಮತ್ತು ಕಂದಾಯ ಇಲಾಖೆ ಸಹಕಾರದೊಂದಿಗೆ ಬೀದಿ ಬದಿ ಅಂಗಡಿಗಳ ತೆರವಿಗೆ ಸೂಚಿಸಲಾಗಿದ್ದು ಸದ್ಯದಲ್ಲಿಯೇ ರಸ್ತೆ ಕಾಮಗಾರಿಗೆ ಚಾಲನೆ ನೀಡುತ್ತಿರುವುದರಿಂದ ಆ ಸಮಯದಲ್ಲಿ ಪಾದಚಾರಿ ರಸ್ತೆ ನಿರ್ಮಾಣ ಮಾಡಲು ಕೋರಿದ್ದು ಶೀಘ್ರದಲ್ಲಿ ಸಂಚಾರ ಸಮಸ್ಯೆ ಬಗೆಹರಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.