ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ | ಕುಡಿಯುವ ನೀರಿನಲ್ಲಿ ರಾಜಕೀಯ ಬೇಡ: ಸಂತೋಷ

Published 7 ಮಾರ್ಚ್ 2024, 14:14 IST
Last Updated 7 ಮಾರ್ಚ್ 2024, 14:14 IST
ಅಕ್ಷರ ಗಾತ್ರ

ಶಿರಹಟ್ಟಿ: ‘ಸ್ಥಳೀಯ ಪಟ್ಟಣ ಪಂಚಾಯ್ತಿ ವಾರ್ಡ್‌ ನಂ. 3ರ ಕನಕದಾಸ ಸರ್ಕಲ್ ಹತ್ತಿರ ಸ್ಥಾಪಿಸಲಾದ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಶೀಘ್ರವೇ ಪ್ರಾರಂಭಿಸಬೇಕು’ ಎಂದು ಪಟ್ಟಣ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸಂತೋಷ ಕುರಿ ಆಗ್ರಹಿಸಿದರು.

ನೀರಿನ ಘಟಕ ಉದ್ಘಾಟನೆಗೊಂಡ ನಂತರವೂ ಪ್ರಾರಂಭವಾಗದಿರುವುದನ್ನು ಖಂಡಿಸಿ ಮಾತನಾಡಿದ ಅವರು, ‘ಪಟ್ಟಣದಲ್ಲಿ ಒಂದು ವ್ಯವಸ್ಥಿತ ಶುದ್ಧ ಕುಡಿಯುವ ನೀರಿನ ಘಟಕವಿಲ್ಲದೇ ಜನರು ಫ್ಲೋರೈಡ್‌ಯುಕ್ತ ನೀರು ಕುಡಿದು, ಕಾಲು, ಮಂಡಿ ನೋವಿನಿಂದ  ಬಳಲುತ್ತಿದ್ದಾರೆ. ಹಲವಾರು ಬೇಡಿಕೆ ಮನವಿಗಳ ನಂತರ ಸ್ಪಂದನೆ ನೀಡಿದ ಪಟ್ಟಣ ಪಂಚಾಯ್ತಿ ಸದ್ಯ ಶುದ್ಧ ಕುಡಿಯುವ ನೀರಿನ ಘಟಕವನ್ನು ಏಜೆನ್ಸಿ ಮೂಲಕ ಸ್ಥಾಪಿಸಿದ್ದಾರೆ. ಆದರೆ ಇದರಲ್ಲಿ ರಾಜಕೀಯ ಮಾಡುತ್ತಿರುವ ಕೆಲ ಜನಪ್ರತಿನಿಧಿಗಳಿಂದ ಪಟ್ಟಣದ ನಾಗರಿಕರಿಗೆ ಇನ್ನೂ ಶುದ್ಧ ನೀರು ಸಿಗದಂತಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಪಟ್ಟಣದ ಜನರ ಆರೋಗ್ಯದ ಜೊತೆ ಆಟ ಆಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು ಘಟಕದ ಬೋರ್ಡಿನ ಮೇಲೆ ಹೆಸರು ಹಾಗೂ ಫೋಟೋ ಹಾಕಬೇಕೆಂಬ ಮೂರ್ಖತನದ ಮಾತು ಹೇಳುತ್ತಿರುವುದು ತೀವ್ರ ಖಂಡನೀಯ. ಇಂತಹ ಪ್ರಭಾವಗಳಿಗೆ ಅಧಿಕಾರಿಗಳು ತಲೆಗೊಡದೇ ಅದನ್ನು ಪ್ರಾರಂಭಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಸದ್ಯ ಬರಗಾಲದ ಬವಣೆಯಲ್ಲಿ ಬಸವಳಿಯುತ್ತಿರುವ ಸಾರ್ವಜನಿಕರಿಗೆ ಕನಿಷ್ಠ ಪಕ್ಷ ಶುದ್ಧ ನೀರಾದರೂ ಸಿಗುವಂತಾಗಬೇಕು. ಪಟ್ಟಣದ ಜನತೆಗೆ ಅತ್ಯಾವಶ್ಯಕ ಇರುವ ಈ ಶುದ್ಧ ನೀರಿನ ಘಟಕವನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ಈ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಹೋದಲ್ಲಿ ವಾರ್ಡ್ ಹಾಗೂ ಪಟ್ಟಣದ ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪರಶುರಾಮ್ ಹಾಲಪ್ಪನವರ, ನಾಗಪ್ಪ ಪರಸಾಪುರ, ಜಗದೀಶ್ ಇಟ್ಟೆಕಾರ, ಬಸವರಾಜ ಇಂಗಳಗಿ, ಚಂದ್ರು ಜೋಗೇರ, ಮುದಕಣ್ಣ ವರವಿ, ಚಂದ್ರು ಹಮ್ಮಿಗಿ, ಮಾಂತೇಶ ಗಾರವಾಡ, ಮಂಜುನಾಥ ಕುರಿ, ಸುರೇಶ್ ವಾಲಿಕಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT