ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲ ನೀಡಿದ ಸಾಮಾಜಿಕ ಅರಣ್ಯ ಇಲಾಖೆ ಶ್ರಮ

160 ಕಿ.ಮೀ.ನಷ್ಟು ದೂರ ರಸ್ತೆ ಬದಿ ಗಿಡ ಬೆಳೆಸಿದ ಇಲಾಖೆ
Last Updated 5 ಜೂನ್ 2021, 5:59 IST
ಅಕ್ಷರ ಗಾತ್ರ

ರೋಣ: ಸಾಮಾಜಿಕ ಅರಣ್ಯ ಇಲಾಖೆಯ ರೋಣ ಭಾಗದ ಸಿಬ್ಬಂದಿ ವರ್ಷಕ್ಕೆ 40ರಿಂದ 50 ಕಿ.ಮೀ.ವರೆಗೆ ರಸ್ತೆ ಬದಿಯ ಎರಡು ಭಾಗಕ್ಕೆ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿರುವ ಕಾರಣ ಇಂದು ರೋಣ ಹಾಗೂ ಗಜೇಂದ್ರಗಡ ತಾಲ್ಲೂಕು ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ ಹೋಗುವ 160 ಕಿ.ಮೀ.ನಷ್ಟು ದೂರದವರೆಗೆ ಗಿಡಗಳು ಬೆಳೆದು ನಿಂತಿವೆ.

2018-19ನೇ ಸಾಲಿನಲ್ಲಿ ನರೇಗಾ ಯೋಜನೆ ಅಡಿ ₹2,92,574 ಕೂಲಿ ಮೊತ್ತ ಪಾವತಿಸಿ 9,300 ಗಿಡಗಳನ್ನು, 2019-20ನೇ ಸಾಲಿನಲ್ಲಿ ₹4,34,303 ಕೂಲಿ ಮೊತ್ತ ಪಾವತಿಸಿ 9,300 ಗಿಡಗಳನ್ನು ಹಾಗೂ 2020-21ನೇ ಸಾಲಿನಲ್ಲಿ ₹7,19,987 ಕೂಲಿ ಮೊತ್ತ ಪಾವತಿಸಿ 9,300 ಗಿಡಗಳನ್ನು ಕೌಜಗೇರಿ, ಮಾಳವಾಡ, ನಿಡಗುಂದಿ, ಗಜೇಂದ್ರಗಡ, ಮಾರನಬಸರಿ, ಕಳಕಾಪುರ, ಚಿಕ್ಕಮಣ್ಣೂರ, ಗುಜಮಾಗಡಿ, ಹಿರೇಮಣ್ಣೂರ, ಮುದೇನಗುಡಿ, ಕೊತಬಾಳ, ತಳ್ಳಿಹಾಳ, ಸೂಡಿ, ಬೆಳವಣಿಕಿ ಭಾಗದ ರಸ್ತೆಯ ಎರಡು ಬದಿಯಲ್ಲಿ ನೆಡಲಾಗಿದೆ. ಇಂದು ಎಲ್ಲಾ ಗಿಡಗಳನ್ನು ಉತ್ತಮ ಬೆಳವಣಿಗೆಯನ್ನು ಹೊಂದಿದ್ದು ದಾರಿ ಹೋಕರಿಗೆ ನೆರಳು, ಗಾಳಿ ನೀಡುತ್ತಿವೆ.

ನರೇಗಾ ಯೋಜನೆ ಅಡಿ ಸಸಿಗಳನ್ನು ರಸ್ತೆ ಬದಿಯಲ್ಲಿ ನೆಡುವಾಗ ಹೊಲದ ರೈತರ ಮನ ಒಲಿಸುವುದು, ಗ್ರಾಮಸ್ಥರನ್ನು ಪ್ರೇರೇಪಿಸುವುದು ಹಾಗೂ ಪರಿಸರದ ಕುರಿತು ತಿಳಿವಳಿಕೆ ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರ ಪರಿಣಾಮದಿಂದ ಹಳ್ಳಿಗಳಲ್ಲಿ ಯಾರಾದರೂ ಗಿಡಗಳನ್ನು ಕಡಿದರೆ ಹಿರಿಯರು ಪಂಚಾಯ್ತಿ ಕಟ್ಟೆಗೆ ತಂದು ದಂಡ ವಸೂಲಿ ಮಾಡುತ್ತಿದ್ದಾರೆ. ಪ್ರತಿ ಇಂತಿಷ್ಟು ಕಿ.ಮೀ.ಗೆ ವಿವಿಧ ತಳಿಯ ಹಾಗೂ ಕೃಷಿಗೆ ಉಪಯುಕ್ತವಾಗುವ ಮತ್ತು ನೋಡುಗರಿಗೆ ಆಕರ್ಷಕವಾಗುವ ಮಾದರಿಯಲ್ಲಿ ಬೇವು, ಹೆಬ್ಬೆವು, ಚರ್ರೀ, ಹತ್ತಿ ಹಣ್ಣು, ಗುಲ್‌ ಮೊಹರ್‌, ಹೊಂಗೆ, ಗೊಬ್ಬರ ಗಿಡ, ಕಾಡು ನೆಲ್ಲಿ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.

‘ಬೇಸಿಗೆಯಲ್ಲಿ ಟ್ಯಾಂಕರ್‌ ಬಳಸಿ ನೀರು ಹಾಕಲಾಗುತ್ತದೆ. ಆಯಾ ಭಾಗದಲ್ಲಿ ನೇಮಕ ಮಾಡಿರುವ ಗಿಡ ಸಂರಕ್ಷಕರು, ಸ್ಥಳಿಯರು, ಗಾರ್ಡ್ ಗಳು, ನರೇಗಾ ಅಧಿಕಾರಿ, ಕಾರ್ಮಿಕರ, ರೈತರಸಹಾಯ ಮಾಡುತ್ತಿದ್ದಾರೆ. ಶಾಸಕ ಕಳಕಪ್ಪ ಜಿ. ಬಂಡಿ ಅವರ ಸಹಕಾರದಲ್ಲಿ ರಸ್ತೆ ವಿಸ್ತರಣೆ ಕಾರಣದಿಂದ ಬೇವಿನಕಟ್ಟಿ ಕ್ರಾಸ್‌ನಿಂದ ಗಜೇಂದ್ರಗಡ ಮಾರ್ಗದ ಕಡೆ 900 ಸಸಿಗಳನ್ನು ಬೇರು ಸಮೇತ ಕಿತ್ತು ಮರಳಿ ಬೇರೆ ಜಾಗದಲ್ಲಿ ಬೆಳೆಸಲಾಗಿದೆ. ಇದು ನಮ್ಮ ಮಣ್ಣಿನಲ್ಲಿ ಯಶಸ್ವಿಯಾಗಿದ್ದು ಇತಿಹಾಸವಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಪ್ರಕಾಶ ಪವಾಡಿಗೌಡ್ರ ತಿಳಿಸಿದರು.

ರಸ್ತೆಗೆ ಮೆರುಗು
ರೋಣ ತಾಲ್ಲೂಕಿನ ಕೊತಬಾಳ- ತಳ್ಳಿಹಾಳ ವ್ಯಾಪ್ತಿಯ ರಸ್ತೆ ಬದಿಯಲ್ಲಿ 8 ಕಿ.ಮೀ. ದೂರದಷ್ಟು ಬೆಳೆಸಲಾದ ಹತ್ತಿ ಹಣ್ಣಿನ ಗಿಡ ಈಗ ಹಣ್ಣು ನೀಡುತ್ತಿದ್ದು ಗ್ರಾಮಸ್ಥರು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ರೈತರು, ಕೃಷಿ ಕಾರ್ಮಿಕರು ಹತ್ತಿ ಹಣ್ಣನ್ನು ತಿನ್ನುತ್ತಿದ್ದಾರೆ. ದಾರಿ ಹೋಕರು ನೆರಳಿನ ಆಶ್ರಯವನ್ನು ಪಡೆಯುತ್ತಿದ್ದಾರೆ. ಬೆಳವಣಿಕೆ, ಗುಜಮಾಗಡಿ, ಹಿರೇಮಣ್ಣೂರ, ಮುದೇನಗುಡಿ, ಕೊತಬಾಳ ಭಾಗದಲ್ಲಿ ಬೆಳೆಸಲಾದ ಗುಲ್‌ ಮೊಹರ್‌ ಹೂವಿನ ಗಿಡಗಳು ನೋಡುಗರನ್ನು ಸೆಳೆಯುತ್ತಿವೆ. ಹಳ್ಳಿಗೆ ಹೋಗುವ ರಸ್ತೆಗಳು ವಿದೇಶದ ರಸ್ತೆಗಳ ಹಾಗೆ ಆಕರ್ಷಕವಾಗಿ ಕಾಣುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT