ಶನಿವಾರ, ಏಪ್ರಿಲ್ 1, 2023
29 °C
ಕರ್ನಾಟಕ ಮಹಿಮ್ನಃ ಸ್ತೋತ್ರ ಪ್ರೇರಣೆಯಿಂದ ಅರಳಿದ ಭುವನೇಶ್ವರಿ ಮೊದಲ ರೇಖಾ ಚಿತ್ರ

ನರೇಗಲ್: ಕನ್ನಡಮ್ಮನಿಗೆ ನಿತ್ಯ ನಿರಂತರ ಪೂಜೆ

ಚಂದ್ರು ಎಂ. ರಾಥೋಡ್ Updated:

ಅಕ್ಷರ ಗಾತ್ರ : | |

Prajavani

ನರೇಗಲ್: ಏಕೀಕರಣಕ್ಕಾಗಿ ನಡೆಯುತ್ತಿದ್ದ ಹೋರಾಟದ ಸಂದರ್ಭದಲ್ಲಿ‌ ಭುವನೇಶ್ವರಿಯ (ಕನ್ನಡಮ್ಮನ) ಚಿತ್ರದ ಮೊಟ್ಟ ಮೊದಲ ರೇಖಾ ಚಿತ್ರ ಅಥವಾ ತೈಲಚಿತ್ರ ಅನಾವರಣಗೊಳಿಸಲು ಪ್ರೇರಣೆಯಾದವರು ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಏಕೀಕರಣದ ರೂವಾರಿ ಅಂದಾನಷ್ಟ ದೊಡ್ಡಮೇಟಿಯವರು.

11ನೇ ಜನವರಿ 1953 ರಂದು ಜಕ್ಕಲಿಯ ಅನ್ನದಾನೇಶ್ವರ ಮಠದಲ್ಲಿ ಈ ತೈಲ ಚಿತ್ರವನ್ನು ದೊಡ್ಡಮೇಟಿಯವರ ಕಲ್ಪನೆಯಂತೆ ಮೊದಲ ಬಾರಿಗೆ ರಚಿಸಿದವರು ಗದುಗಿನ ಚಿತ್ರಕಲಾವಿದ ಸಿ.ಎನ್. ಪಾಟೀಲರು. ಅಂದಿನಿಂದ ಜಕ್ಕಲಿಯಲ್ಲಿರುವ ಮನೆಯ ಜಗಲಿ ಮೇಲೆ ಆರಡಿ ಎತ್ತರದ ಭುವನೇಶ್ವರಿ ತೈಲಚಿತ್ರಕ್ಕೆ ನಿತ್ಯ ಬೆಳಿಗ್ಗೆ ಪೂಜೆ ಸಲ್ಲುತ್ತಿದೆ.

ಭುವನೇಶ್ವರಿಯ ಈ ಚಿತ್ರವನ್ನು ರಚನೆ ಮಾಡಲು ಕಲಾವಿದರೊಂದಿಗೆ, ಸಾಹಿತಿಗಳೊಂದಿಗೆ, ಕನ್ನಡಪರ ಹೋರಾಟಗಾರರೊಂದಿಗೆ 3 ತಿಂಗಳು ನಿರಂತರ ಚರ್ಚೆ ಮಾಡಿದ್ದಾರೆ. ಭುವನೇಶ್ವರಿಯ ಕೈಬಳೆಗಳು ಹೇಗೆ ಇರಬೇಕು ಎಂದು 3 ದಿನ ಚರ್ಚಿಸಿ ಚಿತ್ರಿಸಲಾಗಿದೆ ಎಂದು ಅಂದಾನಪ್ಪ ದೊಡ್ಡಮೇಟಿಯವರು ಹೇಳಿದ್ದನ್ನು ಕುಟುಂಬಸ್ಥರು ನೆನಪು ಮಾಡಿಕೊಳ್ಳುತ್ತಾರೆ.

ಜಕ್ಕಲಿಯಲ್ಲಿರುವ ಜಗಲಿ ಮೇಲಿರುವ ತೈಲಚಿತ್ರದಲ್ಲಿ ಭುವನೇಶ್ವರಿ ಎಡಗೈಯಲ್ಲೊಂದು ಪುಸ್ತಕವಿದೆ. ಹೀಗಾಗಿ ಸರಸ್ವತಿ ಎನ್ನಬಹುದು. ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದಿರುವುದರಿಂದ ಪರಮೇಶ್ವರಿ ಎನ್ನಬಹುದು. ಮತ್ತೊಂದು ಕೈಯಲ್ಲಿ ಕಮಲ ಹಿಡಿದಿರುವುದರಿಂದ ಲಕ್ಷ್ಮಿ ಎನ್ನಬಹುದು. ಬಿಳಿ ಸೀರೆ ಹಾಗೂ ಹಸಿರು ಕುಪ್ಪಸ ತೊಡಿಸಲಾಗಿದೆ. ಮುಖ್ಯವಾಗಿ ಭುವನೇಶ್ವರಿ ನಿಂತ ಭಂಗಿಯೇ ಕರ್ನಾಟಕ ನಕ್ಷೆಯಾಗಿದೆ. ಭುವನೇಶ್ವರಿ ಸುತ್ತ ಹೊಯ್ಸಳರು, ಬನಶಂಕರಿ ದೇವಸ್ಥಾನ, ಚಾಲುಕ್ಯರ ಶಿಲ್ಪಕಲೆ, ಹಂಪಿ ಕಡಲೆಕಾಳು ಗಣಪ, ಹಂಪಿ ವಿರೂಪಾಕ್ಷ, ಶ್ರವಣಬೆಳಗೊಳ, ಜೋಗ, ವಿಜಾಪುರ ಗೋಳಗುಮ್ಮಟ, ಕರ್ನಾಟಕದ ಕರಾವಳಿ ಪ್ರದೇಶ, ಹಸಿರು ಸಂಪತ್ತನ್ನು ಚಿತ್ರಿಸಲಾಗಿದೆ. ಜೊತೆಗೆ ರತ್ನಖಚಿತ ಮೆಟ್ಟಿಲುಗಳ ಮೇಲೆ ಭುವನೇಶ್ವರಿ ಕುಳಿತಿದ್ದಾಳೆ.

‘ಮಂತ್ರಮಯಿ ಕರ್ನಾಟಕ ಮಾತೆ’ ಎಂದೇ ಪ್ರಸಿದ್ದಿ ಪಡೆದಿರುವ ದೊಡ್ಡಮೇಟಿಯವರ ಕನ್ನಡಮ್ಮನ ಕೃತಿಗೆ ಬಳ್ಳಾರಿ ಶಿಲ್ಪಿ ಕೊಂಡಾಚಾರಿಯವರು 1953ರಲ್ಲಿ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಇವರ ಶ್ಲೋಕಗಳನ್ನು ಸಂಸ್ಕೃತಕ್ಕೆ ಅನುವಾದಿಸಿ ಪ್ರಕಟಿಸಿದವರು ವಿದ್ವಾನ್ ಹ.ಪಿ.ನಾರಾಯಣ ಶಾಸ್ತ್ರಿಯವರು. ‘ಕರ್ನಾಟಕ ಮಹಿಮ್ನಃಸ್ತೋತ್ರ’ವೇ ಭುವನೇಶ್ವರಿ ತೈಲಚಿತ್ರಕ್ಕೆ ಮೂಲ ಆಕಾರವೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಡಾ.ಸಿ.ಆರ್. ಗೋವಿಂದರಾಜು ಅವರ `ಕನ್ನಡಮ್ಮ’ ಕೃತಿ ದಾಖಲಿಸಿದೆ. ದೊಡ್ಡಮೇಟಿಯವರು ರಚಿಸಿದ ಕರ್ನಾಟಕ ಮಹಿಮ್ನಃ ಸ್ತೋತ್ರದ ಶ್ಲೋಕವನ್ನು ಅ.ನ.ಕೃಷ್ಣರಾಯರ `ಕನ್ನಡಮ್ಮನ ಗುಡಿ’ ಕಾದಂಬರಿಯಲ್ಲಿಯೂ ಕಾಣಬಹುದು.

ಖ್ಯಾತ ಸಂಶೋಧಕ ಎಂ. ಚಿದಾನಂದ ಮೂರ್ತಿಯವರು ತಮ್ಮ ಪುಸ್ತಕವೊಂದಕ್ಕೆ ಇದೇ ಕನ್ನಡ ಭುವನೇಶ್ವರಿಯ ಚಿತ್ರವನ್ನು ಮುಖ ಪುಟಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಹಾಗೂ ನಂತರದ ದಿನಗಳಲ್ಲಿ ಅನುಮತಿ ಇಲ್ಲದೆ ಭುವನೇಶ್ವರಿಯ ಚಿತ್ರವನ್ನು ಬಳಕೆ ಮಾಡಿಕೊಂಡಿದ್ದಕ್ಕೆ ಸಾಹಿತಿ ಜ್ಞಾನದೇವ ದೊಡ್ಡಮೇಟಿಯವರಿಗೆ ಪತ್ರ ಬರೆದಿದ್ದಾರೆ ಎಂದು ಗ್ರಾಮದ ನಿವೃತ್ತ ಶಿಕ್ಷಕ ಎಂ. ಎಸ್.‌ ಧಡೆಸೂರಮಠ ತಿಳಿಸಿದರು.

ಜಕ್ಕಲಿ ಗ್ರಾಮದ ಚಿತ್ರ ಬಳಕೆಗೆ ಆಗ್ರಹ

ನಾಡ ಮಾತೆ ಭುವನೇಶ್ವರಿಯ ಭಾವಚಿತ್ರ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹೇಳಿರುವಂತೆ ಏಕರೂಪದ ಕನ್ನಡ ಭುವನೇಶ್ವರಿ ಭಾವಚಿತ್ರ ಬಳಸುವಂತೆ ತೀರ್ಮಾನ ಕೈಗೊಂಡಿರುವುದು ಸಂತಸದಾಯಕ ವಿಷಯವಾಗಿದೆ. ಆದರೆ ಏಕೀಕರಣ ಸಂದರ್ಭದಲ್ಲಿ ಅಂದಾನಪ್ಪ ದೊಡ್ಡಮೇಟಿಯವರ ಪರಿಕಲ್ಪನೆಯಲ್ಲಿ ರಚನೆ ಮಾಡಲ್ಪಟ್ಟ ಕನ್ನಡಿಗರ ಮಾತೆ ಭುವನೇಶ್ವರಿ ದೇವಿಯ ಏಕಮೇವ ಭಾವಚಿತ್ರವನ್ನು ಬಳಸಲು ಸರ್ಕಾರ ಮುಂದಾಗಬೇಕು ಎಂದು ಗದಗ ಜಿಲ್ಲೆಯ ಸಾಹಿತಿಗಳ, ಕನ್ನಡಪರ ಹೋರಾಟಗಾರರ, ವಿವಿಧ ಮಠದ ಶ್ರೀಗಳ, ರಾಜಕಾರಣಿಗಳ ಆಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು