ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ನಾಗರ ಪಂಚಮಿ ಸಂಭ್ರಮಾಚರಣೆಗೆ ಬರದ ಮಂಕು

Last Updated 19 ಜುಲೈ 2012, 9:20 IST
ಅಕ್ಷರ ಗಾತ್ರ


“ಮಣ್ಣನ್ನು ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನು-ಅಣ್ಣಯ್ಯ
ಮಣ್ಣೆ ಲೋಕದಲಿ ಬೆಲೆಯಾದ್ದು ”

ಎಂಬ ನಾನ್ನುಡಿಯಂತೆ ಮಣ್ಣು ಬದುಕಿನ ಮೂಲವೆಂಬ ಸಂಗತಿಯನ್ನು ಎತ್ತಿ ತೋರಲಾಗಿದೆ. “ಮಣ್ಣಿನ ಮಗನೆಂದು ಕರೆಯಿಸಿಕೊಳ್ಳುವ ರೈತನ ದೃಷ್ಟಿಯಲ್ಲಿ ಮಣ್ಣು ಎಂದೂ ಕೀಳಾದ ವಸ್ತುವಲ್ಲ.” ಭೂ ತಾಯಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ, ಗೌರವಿಸಿ, ಪೂಜಿಸುವ ಉತ್ತರ ಕರ್ನಾಟಕದ ರೈತ ಸಮೂಹದ ಪಾಲಿಗೆ ಮಹತ್ವದ ಹಬ್ಬವೆಂದೇ ಕರೆಯಲ್ಪಸುವ ”ನಾಗರ ಪಂಚಮಿ” ಸಂಭ್ರಮಾಚರಣೆಗೆ ಬರದ ಕಾರ್ಮೋಡ ಕವಿದಿದೆ.

 ಮಣ್ಣು ಪೂಜೆಯ ಹೆಸರಿನಲ್ಲಿ ವ್ಯಕ್ತವಾಗುವ ದೇವತೆ ಹುತ್ತಪ್ಪ. ಶ್ರಾವಣ ನಾಗಪ್ಪನ ಪೂಜೆಯ ಕಾಲ ದ್ರಾವಿಡರಿಂದ ಪ್ರಾರಂಭವಾದ ಪದ್ಧತಿ ಇದಾಗಿದ್ದರೂ ಆರ್ಯ ದ್ರಾವಿಡ ಸಂಸ್ಕೃತಿ ಸಂಕರಗೊಂಡ ಮೇಲೆ ಈ ನಾಗಪೂಜೆ ಸಾರ್ವತ್ರಿಕವೆನಿಸಿದೆ. ನಮ್ಮಲ್ಲಿ ಪ್ರಾಚೀನ ಕಾಲದಿಂದಲ್ಲೂ ನಾಗಪೂಜೆಗೆ ವಿಶೇಷ ಮಹತ್ವ ಕೊಡುತ್ತ ಬಂದಿದ್ದಾರೆ. ಕಾರಣ ಶ್ರೀ ವಿಷ್ಟು ಶೇಷತಾಯಿ, ಶಿವ ಸರ್ಪ ಭೂಷಣ, ಭೂಮಿಯನ್ನು ನೆತ್ತಿಯ ಮೇಲೆ ಹ್ತೊತವ ಆದಿಶೇಷ. ಗಣಪತಿಯ ಹೊಟ್ಟೆಯ ನಡುಕಟ್ಟು ನಾಗದೇವ.

ಇಂದು ನಾಗಪೂಜೆ ಸಂಪ್ರದಾಯದಲ್ಲಿ ವಿಭಿನ್ನತೆ ಕಂಡು ಬಂದರೂ ನಾಗಪೂಜೆಗೆ ಪ್ರಾಮುಖ್ಯತೆ ಇದೆ. ಪ್ರಾಚೀನ ಅರಸು ಮನೆತನಗಳು ನಾಗನಿಗೆ ಗೌರವ ನೀಡಿವೆ. ಕ್ರಿ.ಶ 2ನೆಯ ಶತಮಾನದಲ್ಲಿ ಚಟುವಂಶದ ಶಿವಸ್ಕಂದ ನಾಗಶ್ರೀಯಿಂದ ರಚಿತವಾದ ನಾಗಪ್ರತಿಮೆ ಅಂದಿನ ಕಾಲದ ನಾಗದೇವನ ಮಹತ್ವಕ್ಕೆ ಸಾಕ್ಷಿಯೆನಿಸಿದೆ. ನಾಗನಿಕಾ, ನಾಗಮಲಿಕಾ, ನಾಗಶ್ರೀ ಎಂಬ ಸ್ತ್ರೀ ನಾಮಗಳು ಅಂದಿನ ನಾಗೋಪಾಸನೆಯನ್ನು ಸೂಚಿಸುವವಂತಿವೆ. ಇಂದು ಸಂಪ್ರದಾಯದಲ್ಲಿ ವಿಭಿನ್ನತೆ ಕಂಡು ಬಂದರೂ ನಾಗಪೂಜೆಗೆ ಪ್ರಾಮುಖತೆಯಿದೆ. ಶ್ರಾವಣ ಶುದ್ಧ ಪಂಚಮಿಯ ದಿನವೇ ಈ ಹುಟ್ಟು ಕೈಕೊಳ್ಳುವುದಕ್ಕೆ ನಿರ್ದಿಷ್ಟವಾದ ಕಾರಣ ತಿಳಿಯದೆ ಹೋದರೂ ನಾಗಪೂಜೆಗೆ ಪ್ರಾಮುಖ್ಯತೆ ಇದೆ. ಶ್ರಾವಣ ಶುದ್ಧ ಪಂಚಮಿಯ ದಿನವೇ ಈ ಹಬ್ಬ ಕೈಕೊಳ್ಳುವುದಕ್ಕೆ ನಿರ್ದಿಷ್ಟವಾದ ಕಾರಣ ತಿಳಿಯದೆ ಹೋದರೂ ಜನಪದ ಕಥೆಯೊಂದು ಈ ಬಗೆಗೆ ಹೇಳುತ್ತದೆ.

ಹಿನ್ನಲೆ
: ಒಕ್ಕಲಿಗನೊಬ್ಬ ರಂಟೆ ಹೊಡೆಯುತ್ತಿದ್ದಾಗ ಅದರ ಕುಡಕ್ಕೆ ಸಿಕ್ಕು ಹಾವಿನ ಮರಿಗಳೆಲ್ಲ ಸತ್ತು ಹೋದದ್ದರಿಂದ ತಾಯಿ ಹಾವು ರೊಚ್ಚಿಗೆದ್ದು ಅಂದಿನ ರಾತ್ರಿ ಆ ಒಕ್ಕಲಿಗನ ಮನೆಯ ಮಂದಿಯನ್ನೆಲ್ಲ ಕಚ್ಚಿಕೊಂದು ಹಾಕಿದರೂ ಅದರ ರೋಷ ಶಮನವಾಗದೆ ಹೋದಲ್ಲಿ ಅತ್ತೆಯ ಮನೆಯಲ್ಲಿದ್ದ ಆ ಒಕ್ಕಲಿಗನ ಮಗಳನ್ನು ಕೊಲ್ಲಲ್ಲು ಅತ್ತ ಹೊರಟಿತು. ಅದೇ ಹೊತ್ತಿಗೆ ಅತ್ತೆಯ ಮನೆಯಲ್ಲಿದ್ದ ಆ ಒಕ್ಕಲಿಗನ ಮಗಳು ಮಣ್ಣಿನ ಹಾವನ್ನು ಮಾಡಿ ಹಾಲೆರೆಯುತ್ತಿದ್ದುದನ್ನು ಕಂಡ ನಾಗಿಣಿಯ ರೊಚ್ಚು ತಕ್ಕಮಟ್ಟಿಗೆ ಶಾಂತವಾಯಿತು.
ಅದು ತಾನು ಒಕ್ಕಲಿಗನ ಮನೆಯಲ್ಲಿ ಮಾಡಿದ ಕೇಡನ್ನು ಹೇಳಲು, ಆಕೆ ಬೋರಾಡಿ ಅತ್ತು ತನ್ನ ತವರವರನ್ನೆಲ್ಲ ಬದುಕಿಸೆಂದು ಬೇಡಿಕೊಂಡಳು. ಆ ನಾಗಿಣಿಗೆ ಕರುಣೆ ಹುಟ್ಟಿ ಒಕ್ಕಲಿಗನ ಮನೆಗೆ ಬಂದು ಎಲ್ಲರ ವಿಷವನ್ನು ಮರಳಿ ಹೀರಿ ಬದುಕಿಸಿದ್ದರಿಂದ ಅವರೆಲ್ಲ ನಾಗಿಣಿಯನ್ನು ಪೂಜಿಸುತ್ತ ಬಂದರೆಂಬ ಕಥೆಯಿದೆ. ಅಂದು ಶ್ರಾವಣ ಶುದ್ಧ ಚೌತಿಯಾದ್ದರಿಂದ ಅಂದಿನ ದಿನವನ್ನು ನಾಗ ಚೌತಿ ಎಂಬ ಹೆಸರಿನಿಂದ ಕರೆಯುತ್ತ ಬಂದುದೇ ನಾಗಪೂಜೆಗೆ ಕಾರಣವೆನಿಸಿತು. ಮಗಳ ಈ ಉಪಕಾರದ ದ್ಯೋತಕವಾಗಿಯೇ ಇಂದಿಗೂ ನಾಗಪಂಚಮಿ ಹಬ್ಬಕ್ಕೆ ಮಗಳನ್ನು ತವರಿನವರು ಕರೆತರುವರೆಂದು ಜಾನಪದರು ಹೇಳಿತ್ತಾರೆ.

ಮೂರು ದಿನದ ಹಬ್ಬ: ಮನೆ ಮನೆಗಳಲ್ಲಿ ಹಬ್ಬಕ್ಕೆ ಮೊದಲೇ ನಾಗದೇವನ ನೈವೇದ್ಯಕ್ಕೆ ಅರಳು, ಅರಳಿಟ್ಟು, ತಂಬಿಟ್ಟು, ವಿಧವಿಧ ಉಂಡಿ, ಎಳ್ಳುಚಿಗಳಿಗಳನ್ನು ತಯಾರಿಸುತ್ತಾರೆ. ಈ ನಾಗಪಂಚಮಿ ಮೂರು ದಿವಸದ ಹಬ್ಬ. ಮೊದಲನೆಯದಿನ ನಾಗರ ಅಮವಾಸ್ಯೆ ಅಂದರೆ ರೊಟ್ಟಿ ಪಂಚಮಿ, ಎರಡನೆಯ ದಿನ ನಾಗಚೌತಿ, ಮೂರನೆಯ ದಿನ ನಾಗರ ಪಂಚಮಿ. ನಾಗರ ಅಮವಾಸ್ಯೆಯ ದಿನ ಹೆಣ್ಣು ಮಕ್ಕಳು ತಮ್ಮ ಸಮಸ್ತ ಬಳಗದೊಂದಿಗೆ ಹಣತೆ ಪೂಜೆ ಮಾಡುವುದುಂಟು.

ಮನೆ ಮಂದಿಯೆಲ್ಲ ಕರಕಿ ಪತ್ರಿಯಿಂದ ನಾಗದೇವನಿಗೆ ಹಾಲನೆರೆಯುತ್ತ ದೇವರ ಪಾಲು, ದಿಂಡರ ಪಾಲು, ಸಮಸ್ತ ಬಳಗದವರ ಪಾಲನ್ನು ಸಮರ್ಪಣೆ ಮಾಡುವರು. ನಾಗದೇವನಿಗೆ ಹಿಡಿದ ಎಡೆಯನ್ನು ಹೆಣ್ಣುಮಕ್ಕಳು ಉಣ್ಣ ಬಾರದೆಂಬ ಪ್ರತೀತಿ ಜನಪದರಲ್ಲಿದೆ.

ನಾಗರ ಪಂಚಮಿ ಹಬ್ಬದಂದು ಚಿಕ್ಕ ಮಕ್ಕಳಿಗೆ ಸಿಹಿ, ಹೊಸ ಬಟ್ಟೆ, ಜೋಕಾಲಿಯಾಟದ ಹರ್ಷವಾದರೆ ವಾರಿಗೆಯ ಗೆಳತಿಯರಿಗೆ ಸಂಪೂರ್ಣ  ಸ್ವಾತಂತ್ರ್ಯ ಒಟ್ಟುಗೂಡಿ ನಾಗಪ್ಪನಿಗೆ ಹಾಲನೆರೆಯುವುದು, ತಮ್ಮ ಸುಖ ದುಖ:ಗಳನ್ನು ಗೆಳತಿಯರಲ್ಲಿ ವಿನಿಯೋಗಿಸಿಕೊಳ್ಳವಲ್ಲಿ ಇದೊಂದು ಉತ್ತಮ ಅವಕಾಶ.

ನಾಗರ ಪಂಚಮಿ ಹಬ್ಬ ಮುಗಿಸಿ ಹೆಣ್ಣು ಮಕ್ಕಳು ಗಂಡನ ಮನೆಗೆ ತೆರಳಬೇಕೆಂದರೆ ಮನಸ್ಸಿಲ್ಲ. ಗೆಳತಿಯರು ಅವಳನ್ನು `ಸಣ್ಣ ಸೋಮವಾರ ತನಕ ಅಣ್ಣ ಹೇಳಿದಂಗ ಕೇಳು~ ಎಂದು ಬುದ್ದವಾದ ಹೇಳಿದರೆ, ಗಂಡನ ಮನೆಯ ಕಟ್ಟುಕರಾರಿನ ಮೂಲಕ ಹಬ್ಬಕ್ಕಾಗಿ ತಂಗಿಯನ್ನು ಕೆರೆತಂದ ಅಣ್ಣ ಅವಳನ್ನು ಸಕಾಲಕ್ಕೆ ಮರಳಿ ಕಳಿಸಬೇಕಲ್ಲವೆ. ತವರಿಗೆ ಬಂದ ಹೆಣ್ಣು ಮಕ್ಕಳಿಗೆ ಕೊಡುಗೆಯಾಗಿ ಸೀರೆ ಮುಂತಾದವುಗಳನ್ನು ಉಡುಗೊರೆಯಾಗಿ ಕೊಟ್ಟು ಅಣ್ಣ ಅವಳನ್ನು ಮರಳಿ ಕಳಿಸಿ ಬರುವ ಸಂಪ್ರದಾಯವಿದೆ.

ನಾಗಪೂಜೆ ಮಾಡಿದರೆ ಮಕ್ಕಳಾಗುತ್ತವೆ ಎಂಬ ಭಾವನೆ ಇಂದಿಗೂ ಜನಮನದಲ್ಲಿ ಜೀವಂತವಾಗಿದೆ. ಹೀಗೆ ಜಾನಪದ ಹಬ್ಬಗಳು ಹಳ್ಳಿಗರ ಬದುಕಿಗೆ ಹೊಸ ಪ್ರೇರಣೆಯನ್ನೋದಗಿಸುವ ಶಕ್ತಿಗಳಾಗಿವೆ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT