ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಅನುಷ್ಠಾನಕ್ಕೆ ಆಗ್ರಹ: ಮೇಕೆಗೆ ಸನ್ಮಾನ

ಅಣೆಕಟ್ಟೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ
Last Updated 6 ಡಿಸೆಂಬರ್ 2018, 11:21 IST
ಅಕ್ಷರ ಗಾತ್ರ

ರಾಮನಗರ: ಮೇಕೆದಾಟು ಅಣೆಕಟ್ಟೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ರಾಜ್ಯ ಸರ್ಕಾರದ ಗಮನದ ಸೆಳೆಯುವ ಸಲುವಾಗಿ ಇಲ್ಲಿನ ಐಜೂರು ವೃತ್ತದಲ್ಲಿ ಗುರುವಾರ ಮೇಕೆಗೆ ಸನ್ಮಾನ ಮಾಡಿ ಪ್ರತಿಭಟನೆ ನಡೆಸಲಾಯಿತು.

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ಮಾತನಾಡಿ ‘ಮೇಕೆದಾಟು ಅಣೆಕಟ್ಟೆ ನಿರ್ಮಾಣ ಕಾಮಗಾರಿಯು ಕಳೆದ 5–6 ವರ್ಷದ ಹಿಂದೆಯೇ ಆರಂಭಗೊಂಡು ಈಗ ಮುಗಿಯಬೇಕಿತ್ತು. ಇದೀಗ ಕೇಂದ್ರ ಜಲ ಆಯೋಗದ ಅನುಮತಿಯೂ ದೊರೆತಿದೆ. ವಾಸ್ತವದಲ್ಲಿ ಈ ಕಾಮಗಾರಿಗೆ ಯಾರ ಅನುಮತಿಯೂ ಬೇಕಿಲ್ಲ. ಯಾವ ನ್ಯಾಯಾಲಯವೂ ತಡೆಯಾಜ್ಞೆ ನೀಡಿಲ್ಲ. ಆದಾಗ್ಯೂ ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ಮಂದಗತಿಯ ಧೋರಣೆ ಅನುಸರಿಸುತ್ತಿದೆ’ ಎಂದು ಟೀಕಿಸಿದರು.

ತಮಿಳುನಾಡಿಗೂ ಈ ಯೋಜನೆಗೂ ಸಂಬಂಧ ಇಲ್ಲ. ಯೋಜನೆಯಿಂದ ಅವರಿಗೆ ಯಾವುದೇ ಅನ್ಯಾಯ ಆಗುವುದಿಲ್ಲ. ನಮಗೆ ಕುಡಿಯಲು ನೀರು ಬಿಟ್ಟರೆ ಉಳಿದೆಲ್ಲ ನೀರು ತಮಿಳುನಾಡಿಗೇ ಹರಿಯುತ್ತದೆ. ಹೀಗಾಗಿ ಅವರೂ ಸಹಕರಿಸಬೇಕು ಎಂದು ಆಗ್ರಹಿಸಿದರು.

ಯೋಜನೆಗೆ ತಮಿಳುನಾಡು ಅಡ್ಡಿಯನ್ನು ಖಂಡಿಸಿ ಇದೇ 16ರಂದು ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು. ಹೊಸೂರು ಬಳಿ ಕರ್ನಾಟಕ –ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಇದೇ ಧೋರಣೆ ಮುಂದುವರಿದರೆ ಕರ್ನಾಟಕ ಬಂದ್ ಆಚರಿಸಲಾಗುವುದು ಎಂದು ಎಚ್ಚರಿಸಿದರು.

ಇದೇ 10ರಂದು ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭ ಆಗಲಿದೆ. ಮೊದಲ ದಿನವೇ ಮುಖ್ಯಮಂತ್ರಿಗಳು ಯೋಜನೆಯ ಸಂಪೂರ್ಣ ವಿವರ ನೀಡಬೇಕು. ಜಲ ಸಂಪನ್ಮೂಲ ಸಚಿವರ ಕ್ಷೇತ್ರದಲ್ಲಿಯೇ ಈ ಅಣೆಕಟ್ಟೆ ನಿರ್ಮಾಣ ಆಗಲಿದೆ. ಈ ಬಗ್ಗೆ ಅವರಿಗೆ ಸಾಕಷ್ಟು ಮಾಹಿತಿ ಇದೆ. ಅವರು ಇನ್ನಷ್ಟು ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಜೊತೆಗಿದ್ದರು. ಬಳಿಕ ತಂಡವು ಮೇಕೆದಾಟಿಗೆ ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT