ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಜಿಲ್ಲೆಯಲ್ಲಿ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ

ಅಂಗಡಿಗಳು, ಪೆಟ್ರೋಲ್‌ ಬಂಕ್‌, ವಾಹನ ಸಂಚಾರವಿಲ್ಲದೆ ಜಿಲ್ಲೆ ಸಂಪೂರ್ಣ ಸ್ತಬ್ಧ
Last Updated 22 ಮಾರ್ಚ್ 2020, 14:46 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ಹರಡದಂತೆ ತಡೆಯಲು ಪ್ರಧಾನಿ ಮೋದಿ ಭಾನುವಾರ ದೇಶದಾದ್ಯಂತ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಎಲ್ಲರೂ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಿದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಶಿವಮೊಗ್ಗ ನಗರದಲ್ಲಿ ದ್ವಿಚಕ್ರ ವಾಹನ, ಬಸ್ ಸಂಚಾರ, ಲಾರಿಗಳ ಸಂಚಾರ ಸ್ತಬ್ಧವಾಗಿದ್ದವು. ಕೆಲ ಆಟೊಗಳು ಬೆಳಿಗ್ಗೆ ಅಲ್ಲಲ್ಲಿ ಕಂಡು ಬಂದರೂ ಮಾಮೂಲಿಗಿಂತ ಕಡಿಮೆ ಸಂಚಾರವಿತ್ತು. ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಪ್ರಮುಖ ಬೀದಿಗಳ ಅಂಗಡಿಗಳು, ಹೋಟೆಲ್, ದಿನಸಿ ಅಂಗಡಿಗಳು ಬಂದ್ ಆಗಿದ್ದವು. ಪೆಟ್ರೋಲ್ ಬಂಕ್‌ ಸಹ (ತುರ್ತು ಪರಿಸ್ಥಿತಿಯನ್ನು ಹೊರತು ಪಡಿಸಿ) ಬಂದ್ ಆಗಿದ್ದವು. ಅಗತ್ಯ ಸೇವೆಯ ಅಡಿಯಲ್ಲಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳನ್ನು ತೆರೆಯಲಾಗಿತ್ತು.

ಮನೆಗಳಿಂದ ಸಾರ್ವಜನಿಕರು ಹೊರಗೆ ಬರದೆ ಗಾಂಧಿ ಬಜಾರ್, ಕೋಟೆ ರಸ್ತೆ, ಬಸ್ ನಿಲ್ದಾಣದ ಸುತ್ತಮುತ್ತ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಬಾಲರಾಜ್ ಅರಸ್ ರಸ್ತೆ, ವಿದ್ಯಾನಗರ, ವಿನೋಬ‌ನಗರ, ಸವಳಂಗ ರಸ್ತೆ, ಗೋಪಿ ವೃತ್ತ, ಬಿ.ಎಚ್. ರಸ್ತೆ, ನೆಹರೂ ರಸ್ತೆ ಮೊದಲಾದ ಕಡೆಗಳಲ್ಲಿ ಜನರ ಓಡಾಟ ವಿರಳವಾಗಿತ್ತು.

ಬೆಳಿಗ್ಗಿನ‌ ಜಾವ 6 ಗಂಟೆಗೆ ಬೆಂಗಳೂರಿನಿಂದ ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್‌ನಿಂದಶಿವಮೊಗ್ಗಕ್ಕೆ ಬಂದ ಪ್ರಯಾಣಿಕರು ಶಿವಮೊಗ್ಗದ ಸುತ್ತಮುತ್ತ ಗ್ರಾಮ, ತಾಲ್ಲೂಕಿಗೆ ತೆರಳಲು ಬಸ್‌ಗಳಿಲ್ಲದೆ ಪರದಾಡಿದರು. ಮುಂದಿನ ಪ್ರಯಾಣ ಬೆಳೆಸಲು ಪ್ರಯಾಣಿಕರು ಇತರೆ ವಾಹನಗಳನ್ನು ಹಿಡಿದು ಅವರು ಕೇಳುವ ಹಣವನ್ನು ನೀಡಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹಣವಿದ್ದವರು ತೀರ್ಥಹಳ್ಳಿಗೆ ₹ 1,500 ಪ್ಯಾಸೆಂಜರ್ ಆಟೊಗಳಿಗೆ ನೀಡುವ ಮೂಲಕ ತಮ್ಮ ತಮ್ಮ ಊರಿಗಳಿಗೆ ತೆರಳಿದರು. ಈ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್‌ ಮಾಡದಿರುವುದು ಕಂಡು ಬಂತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಒಂದು ಯುನಿಟ್ ಇಟ್ಟುಕೊಂಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಾಸಗಿ ಬಸ್ ನಿಲ್ದಾಣದ ಬಳಿ ಸ್ಕ್ರೀನಿಂಗ್‌ ಕೇಂದ್ರ ತೆರೆಯದೆ ನಿರ್ಲಕ್ಷ್ಯ ವಹಿಸಿದ್ದು ಕಂಡುಬಂತು.

ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದ ಜನರು

ಜನತಾ ಕರ್ಫ್ಯೂ ಬೆಂಬಲಿಸಿ ಬೆಳಿಗ್ಗೆಯಿಂದ ಮನೆ ಒಳಗಿದ್ದ ಜನರು ಸಂಜೆ 5 ಗಂಟೆಯಾಗುತ್ತಿದ್ದಂತೆ ಹೊರಬಂದು ಜಪ್ಪಾಳೆ ತಟ್ಟಿದರು.

ಗಾಂಧಿ ಬಜಾರ್, ಜಯನಗರ, ಬಸವನಗುಡಿ, ಕೃಷಿನಗರದ, ದುರ್ಗಿಗುಡಿ, ಗಾಂಧಿನಗರ, ವಿನೋಬನಗರದಲ್ಲಿ ಮನೆಯಿಂದ ಹೊರ ಬಂದು ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರು, ನರ್ಸ್, ಪೊಲೀಸ್, ಮಾಧ್ಯಮದವರು, ಆಂಬುಲೆನ್ಸ್ ಚಾಲಕರು, ಅಗತ್ಯ ವಸ್ತುಗಳ ಸೇವೆಯ ವಾಹನ ಚಾಲಕರಿಗೆ ಚಪ್ಪಾಳೆ ತಟ್ಟುವ ಮೂಲಕ, ಗಂಟೆ, ಜಾಗಟೆ ಬಾರಿಸುವ ಮೂಲಕ ಧನ್ಯವಾದ ಸಲ್ಲಿಸಿದರು.

ಪೆಬಲ್ ಅಪಾರ್ಟ್ ಮೆಂಟ್‌ನಲ್ಲಿ ದೇಶದ ಬಾವುಟ ಹಿಡಿದು ‘ಭಾರತ್‌ ಮಾತಾಕಿ ಜೈ’ ಎನ್ನುತ್ತಿದ್ದುದೂ ವಿಶೇಷವಾಗಿತ್ತು. ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ತಮ್ಮ ಕುಟುಂಬ ಸಮೇತ ಮನೆಯಿಂದ ಹೊರ ಬಂದು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು.

ನಗರದ ಬಿ.ಎಚ್. ರಸ್ತೆಯ ದೀಪಕ್ ಪೆಟ್ರೋಲ್‌ ಬಂಕ್ ಆವರಣದಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ಜನರು ಒಟ್ಟಾಗಿ ಸೇರಿಕೊಂಡು ಚಪ್ಪಾಳೆ ತಟ್ಟಿದರು.

ಪ್ರಯಾಣಿಕರು ಊರು ಸೇರಲು ನೆರವಾದ ಗಂಗಮ್ಮ

ಭಾನುವಾರ ಬೆಳಿಗ್ಗೆ ಬೆಂಗಳೂರು ಸೇರಿ ವಿವಿಧೆಡೆಯಿಂದ ಬಂದು, ತಮ್ಮ ಊರಿಗೆ ಪ್ರಯಾಣ ಬೆಳೆಸಲು ವಾಹನಗಳಿಲ್ಲದೆ ಪರದಾಡಿದ ಪ್ರಯಾಣಿಕರಿಗೆ ಖಾಸಗಿ ಬಸ್‌ ನಿಲ್ದಾಣದ ಬಳಿ ಹೂವು ಮಾರುವ ಗಂಗಮ್ಮ ಎಂಬ ಮಹಿಳೆ ನೆರವಾದರು.

ತಮ್ಮ ಊರಿಗೆ ವಾಹನಗಳಿಲ್ಲದೆ ಹೇಗೆ ಹೋಗುವುದು ಎಂದು ದುಗುಡದಲ್ಲಿದ್ದವರಿಗೆ ಗಂಗಮ್ಮ ನೀವು ಯಾವ ಊರಿಗೆ ಹೋಗಬೇಕು? ಎಂದು ಕೇಳಿ, ಆ ಮಾರ್ಗವಾಗಿ ಹೋಗುವ ಆಟೊ, ಗೂಡ್ಸ್‌ ಆಟೊ, ಲಾರಿಗಳು ಬಂದರೆ ನಿಲ್ಲಿಸಿ ಆ ವಾಹನಗಳಿಗೆ ಹತ್ತಿಸಿದರು.

ಬ್ಯಾಗ್‌, ಮಕ್ಕಳು ಇದ್ದ ಮಹಿಳೆಯರಿಗೆ ತಾವೇ ಲಗೇಜ್‌ ಹಿಡಿದು ವಾಹನ ಹತ್ತಿಸಿ ಬಂದರು. ಆ ವಾಹನದಲ್ಲಿ ಜಾಗವಿದ್ದರೆ ಉಳಿದ ಪ್ರಯಾಣಿಕರನ್ನು ಕರೆದು ಹತ್ತಿಸಿ ಪ್ರಯಾಣಿಕರು ತಮ್ಮ ಊರು ಸೇರಲು ನೆರವಾದರು.

ಗಂಗಮ್ಮ ಸವರ್‌ಲೈನ್‌ ನಿವಾಸಿ, ಅನೇಕ ವರ್ಷಗಳಿಂದ ಹೂವು ವ್ಯಾಪಾರ ಮಾಡುತ್ತಿದ್ದಾರೆ.

ಮನೆಯಲ್ಲೆ ಕುಳಿತು ಜಿಲ್ಲೆಯ ವಿದ್ಯಮಾನ ವೀಕ್ಷಿಸಿದ ಜಿಲ್ಲಾಧಿಕಾರಿ

ಪತ್ರಕರ್ತರಿಗೆ ಪ್ರೆಸ್ ಟ್ರಸ್ಟ್‌ ಊಟದ ವ್ಯವಸ್ಥೆ ಮಾಡಿತ್ತು. ಜಿಲ್ಲಾಧಿಕಾರಿ ಇಡೀ ದಿನ ಮನೆ ಬಿಟ್ಟು ಹೊರಬರಲಿಲ್ಲ. ಮನೆಯಲ್ಲೇ ಕುಳಿತು ಜಿಲ್ಲೆಯ ವಿದ್ಯಮಾನ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT