ಭಾನುವಾರ, ಜೂನ್ 20, 2021
21 °C
ಎರಡನೇ ನರಸಿಂಹನ ಕಾಲದಲ್ಲಿ ಕೆತ್ತಿದ ಶಾಸನಗಳು

ಹೊಯ್ಸಳರ ಕಾಲದ 2 ಶಿಲಾಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಲೂರು: ಹೊಯ್ಸಳ ವಿಷ್ಣುವರ್ಧನನ ಮರಿಮಗ, ಎರಡನೇ ಬಲ್ಲಾಳನ ಮಗನಾದ ಎರಡನೇ ನರಸಿಂಹನ ಕಾಲದ ಎರಡು ಶಿಲಾಶಾಸನಗಳು ತಾಲ್ಲೂಕಿನ ಬೆಟ್ಟದಕೇಶವಿ ಹಾಗೂ ಮಳವಳ್ಳಿ ಗ್ರಾಮಗಳಲ್ಲಿ ದೊರೆತಿವೆ.

ಬೆಟ್ಟದಕೇಶವಿ ಗ್ರಾಮದಲ್ಲಿ ದೊರೆತ ಶಾಸನವು ಕಾಫಿ ತೋಟವೊಂದರ ಮಧ್ಯದಲ್ಲಿದೆ. ಇದು ಎರಡೂವರೆ ಅಡಿ ಎತ್ತರ, ಒಂದೂವರೆ ಅಡಿ ಅಗಲದ ಆಯತಾಕಾರದ ಬಳಪದಕಲ್ಲಿನ ಫಲಕವಾಗಿದೆ. ಇದರಲ್ಲಿ ಹೊಯ್ಸಳ ಎರಡನೇ ಬಲ್ಲಾಳ, ಅವನ ಮಗ ಎರಡನೇ ನರಸಿಂಹ, ಮಾಧವ ದಂಡನಾಯಕ ಎಂಬ ದಾನಿ ಇತ್ಯಾದಿ ವಿವರಗಳಿವೆ. ಈ ಮಾಧವ ಕ್ರಿ.ಶ 1222ರಲ್ಲಿ ಪ್ರಸನ್ನ ಚೆನ್ನಗೋಪಾಲ ಎಂಬ ದೇವತೆಗೆ ತಗರೆನಾಡಿನ ಬೆಟ್ಟದಕೇಶವಿ ಗ್ರಾಮದ ಆದಾಯವನ್ನು ಧಾರೆ ಎರೆದಿದ್ದಾನೆ. ಶಾಸನ ಸಾಹಿತ್ಯವು ಛಂದೋಬದ್ಧ ಕಾವ್ಯಾತ್ಮಕವಾಗಿದೆ. ಲಿಪಿಯು ಲಿಪಿಶಾಸ್ತ್ರ ಅಭ್ಯಾಸಿಗಳಿಗೆ ಉತ್ತಮ ಆಕರವಾಗುವಷ್ಟು ಸುಂದರವಾಗಿದೆ ಎಂದು ಈ ಶಾಸನಗಳನ್ನು ಪತ್ತೆ ಮಾಡಿರುವ ಸಂಶೋಧಕ ಡಾ.ಶ್ರೀವತ್ಸ ಎಸ್. ವಟಿ ತಿಳಿಸಿದರು.

ಮಳವಳ್ಳಿ ಶಾಸನವು ಬೇಲೂರು ತಾಲ್ಲೂಕಿನ ಕೌರಿ ಗ್ರಾಮದ ಗಡಿಯ ಮಳವಳ್ಳಿ ಎಂಬ ಬೇಚಿರಾಗ್ ಗ್ರಾಮದ ಬಯಲಿನಲ್ಲಿದೆ. ಐದು ಅಡಿ ಎತ್ತರ, ಒಂದೂವರೆ ಅಡಿ ಅಗಲದ ಬಳಪದ ಕಲ್ಲಿನ ಶಾಸನ. ಎರಡನೇ ನರಸಿಂಹನ ಪ್ರಧಾನಿ ಮಲ್ಲಿಕಾರ್ಜುನನ ಅಪ್ಪಣೆಯಂತೆ ಬಂಮಣ್ಣ ದಂಡನಾಯಕನು ಕ್ರಿ.ಶ. 1223ರಲ್ಲಿ ಪ್ರಸನ್ನ ಚೆನ್ನಗೋಪಾಲ ದೇವರಿಗೆ ತಗರೆನಾಡಿನ ಮಲ್ಲವಳ್ಳಿ ಗ್ರಾಮವನ್ನು ದಾನವಾಗಿ ನೀಡಿರುವ ವಿವರಗಳಿವೆ ಎಂದರು.

ಈ ಎರಡೂ ಶಾಸನಗಳಲ್ಲಿ ಪರಸ್ಪರ ಸಂಬಂಧವಿದೆ. ಎರಡೂ ಒಬ್ಬನೇ ರಾಜನ ಕಾಲದ, ಒಂದು ವರ್ಷ ಅಂತರದ ಸಮಕಾಲೀನ ಶಾಸನಗಳು. ಪ್ರಸನ್ನ ಚೆನ್ನಗೋಪಾಲದೇವ ಎಂಬ ಒಂದೇ ದೇವತೆಗೆ ನೀಡಲಾದ ದಾನ ಶಾಸನಗಳು. ಬೆಟ್ಟದಕೇಶವಿ ಶಾಸನದಲ್ಲಿ ದೇವತೆಯ ದೇವಾಲಯದ ಊರಿನ ಹೆಸರು ಅಳಿಸಿಹೋಗಿದ್ದು, ‘ಬೆ. . . . . ದ’ ಎಂದಷ್ಟೇ ಉಳಿದಿದೆ. ಮಳವಳ್ಳಿ ಶಾಸನದಲ್ಲಿ ‘ಬೆಲಹೂರ’ ಎಂದಿದೆ. ಬೇಲೂರಿನ ಅತಿಪುರಾತನ ಹೆಸರು ಬೆಲಹೂರು ಆಗಿತ್ತು ಎಂದು ಈ ಶಾಸನಗಳು ಹೇಳುತ್ತಿವೆ.

ಬೆಟ್ಟದಕೇಶವಿ ಶಾಸನದ ಅಳಿಸಿರುವ ಭಾಗ ‘ಬೆಲಹುರದ’ ಎಂದಾಗಿದೆ. ಮಳವಳ್ಳಿ ಶಾಸನದಲ್ಲಿ ‘ಬೆಲುಹೂರ’ ಎಂದಿದೆ. ಹೀಗೆ ಬೇಲೂರಿನಲ್ಲಿ ಚೆನ್ನಗೋಪಾಲ ಎಂಬ ದೇವತೆ 12ನೇ ಶತಮಾನದಲ್ಲಿದ್ದು, ಅದಕ್ಕೆ ಎರಡು ಊರುಗಳ ದಾನ ನೀಡಲಾಗಿದೆ. ಆದರೆ, ಈಗ ಬೇಲೂರಿನಲ್ಲಿ ಆ ಹೆಸರಿನ ದೇವಾಲಯವೇ ಇಲ್ಲ! ಈ ಕುತೂಹಲಕರ ಹಿನ್ನೆಲೆಯಲ್ಲಿ ಇನ್ನೂ ಹಲವಾರು ಪೂರ್ವಪ್ರಕಟಿತ ಶಾಸನಗಳನ್ನು ಆಧರಿಸಿ ‘ಅದು ಯಾವ ದೇವತೆ? ಯಾವ ಊರಿನದು? ದಾನ ನೀಡಿದ ದಂಡನಾಯಕರ ಹಿನ್ನೆಲೆಯೇನು? ಆ ದೇವತೆಗೆ ನೀಡಲಾದ ಇನ್ನಿತರ ದಾನಗಳೇನು? ಮುಂತಾದ ವಿವರಗಳನ್ನೂ ಸಂಶೋಧಿಸಿದ್ದೇನೆ. ಈ ಸಂಶೋಧನೆಯು ಬೇಲೂರಿನ ದೇವಾಲಯ ಹಾಗೂ ಅಧ್ಯಾತ್ಮದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲುವಂತಿದೆ. ಈ ಬಗ್ಗೆ ಮತ್ತೊಂದು ಸಂಶೋಧನಾ ಲೇಖನದ ಮೂಲಕ ಹೆಚ್ಚಿನ ಕುತೂಹಲಕರ ವಿಚಾರಗಳನ್ನು ವಿವರವಾಗಿ ಮಂಡಿಸಲಾಗುವುದು. ಈ ಶಾಸನಗಳ ಸಾಹಿತ್ಯವನ್ನು ಎಪಿಗ್ರಾಫಿಯಾ ಶಾಸನ ಸಂಪುಟಕ್ಕೆ ಸೇರಿಸಲು ಯತ್ನಿಸಲಾಗುವುದು’ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.