ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬೆ ದರ್ಶನಕ್ಕೆ ಭಕ್ತರ ದಂಡು: ಮೈಸೂರು ರಾಜವಂಶಸ್ಥ ಯದುವೀರ್‌ ದರ್ಶನ

Last Updated 31 ಅಕ್ಟೋಬರ್ 2021, 15:04 IST
ಅಕ್ಷರ ಗಾತ್ರ

ಹಾಸನ: ಹಾಸನಾಂಬಾ ಮತ್ತು ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಭಾನುವಾರ
ಅಪಾರ ಸಂಖ್ಯೆಯಲ್ಲಿ ಭಕ್ತರು ಶಕ್ತಿದೇವತೆ ದರ್ಶನ ಪಡೆದರು.

ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಸಾಗಿ ದೇವಿಯ ದರ್ಶನ ಪಡೆದು ಧನ್ಯತಾಭಾವ ಮೆರೆದರು. ಭಾನುವಾರ ರಜಾ ದಿನವಾದ್ದರಿಂದ ಹೊರ ಜಿಲ್ಲೆಯಿಂದ ಹೆಚ್ಚಿನವರು ಬಂದಿದ್ದರು. ₹ 300 ಹಾಗೂ ₹ 1 ಸಾವಿರ ಮುಖಬೆಲೆಯ ಟಿಕೆಟ್‌ ದರ್ಶನದ ಸಾಲುಗಳಲ್ಲಿಯೂ ಭಕ್ತರು ಸಂಖ್ಯೆ ಹೆಚ್ಚು ಕಂಡು ಬಂತು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹಾಸನಾಂಬಾದೇವಿ ದರ್ಶನ ಪಡೆದರು. ಈ ವೇಳೆ ಹಾಸನ ನಗರಸಭೆ ಅಧ್ಯಕ್ಷ ಆರ್‌. ಮೋಹನ್ ಇದ್ದರು.

ಸುದ್ದಿಗಾರರ ಜತೆ ಮಾತನಾಡಿದ ಯದುವೀರ, ‘ಮೊದಲ ಬಾರಿಗೆ ಹಾಸನಾಂಬಾ ದೇವಿ ದರ್ಶನ ಪಡೆದಿದ್ದೇನೆ. ಮನಸ್ಸಿಗೆ ಸಂತೋಷ ಉಂಟು ಮಾಡಿದೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ. ಸುಖ–ಶಾಂತಿ, ನೆಮ್ಮದಿ ನೆಲೆಸಲಿ ಎಂದು ದೇವಿ ಬಳಿ ಪ್ರಾರ್ಥಿಸಿರುವೆ. ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶನಿವಾರ ರಾತ್ರಿ ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ ದೇವಿ ದರ್ಶನ ಪಡೆದರು. ಕರ್ನಾಟಕ ರಾಜ್ಯೋತ್ಸವ ದಿನವಾದ ಸೋಮವಾರ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನಕ್ಕೆ ಬರುವ ನಿರೀಕ್ಷೆ ಇದೆ.

ಸ್ವಯಂ ಸೇವಕರು, ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತಿರುವ ಭಕ್ತರ ಬಳಿಗೆ ಹೋಗಿ ಕುಡಿಯುವ ನೀರು ಪೂರೈಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನ ಸುತ್ತಮುತ್ತ ಪೂಜೆ ಸಾಮಗ್ರಿಗಳು, ಬಾಳೆಹಣ್ಣು, ಹೂವು ವ್ಯಾಪಾರ ಬಿರುಸಿನಿಂದ ನಡೆಯುತ್ತಿದೆ. ನಗರದ ಹೋಟೆಲ್‌, ಲಾಡ್ಜ್‌ಗಳು ತುಂಬಿವೆ. ಹಾಸನಾಂಬೆ ದರ್ಶನೋತ್ಸವ ಪ್ರಯುಕ್ತ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಅಲ್ಲಲ್ಲಿ ಫೋಟೊ ಹಾಗೂ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.

ಮಾಸ್ಕ್‌ ಧರಿಸದವರಿಗೆ ಸ್ಥಳದಲ್ಲಿಯೇ ₹ 10 ಪಡೆದು ಮಾಸ್ಕ್‌ ನೀಡಲಾಯಿತು. ಮಾಸ್ಕ್‌ ಮಾರಾಟದಿಂದ ಬಂದ ಹಣವನ್ನು ದೇವರ ಹುಂಡಿಗೆ ಹಾಕಲಾಗುವುದು ಎಂದು ಏಕಲವ್ಯ ರೋವರ್ಸ್‌ ಮುಕ್ತ ದಳದ ನಾಯಕ ಆರ್.ಜಿ.ಗಿರೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT