ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿನ ಬಿಂಬದ ಸಮ್ಯಗ್ದರ್ಶನದ ಆಶಯ: ಕಣ್ಮನ ಸೆಳೆಯುವ ಏಕಶಿಲಾ ಮಾನಸ್ತಂಭ

ಅಹಂಕಾರ ತ್ಯಜಿಸುವ ತಾಣ
Published : 15 ಆಗಸ್ಟ್ 2024, 7:58 IST
Last Updated : 15 ಆಗಸ್ಟ್ 2024, 7:58 IST
ಫಾಲೋ ಮಾಡಿ
Comments

ಶ್ರವಣಬೆಳಗೊಳ: ಪ್ರತಿಯೊಬ್ಬ ಮನುಷ್ಯನ ಅಹಂಕಾರ ದೂರ ಮಾಡುವುದರ ಪ್ರತೀಕವಾಗಿರುವ ಬೃಹತ್ ಮಾನಸ್ತಂಭ, ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿದ್ದು, ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಮನೋಲ್ಲಾಸಕ್ಕೆ ಪ್ರವಾಸವಾದರೆ, ಆತ್ಮ ಶಾಂತಿಗೆ ತೀರ್ಥ ಯಾತ್ರೆ ಎಂದಾಗ ಶ್ರವಣಬೆಳಗೊಳ ನೆನಪಾಗದಿರದು. 2300 ವರ್ಷಗಳ ಪ್ರಾಚೀನ ಇತಿಹಾಸವನ್ನು ತನ್ನೊಡಲಿನಲ್ಲಿ ಇಟ್ಟುಕೊಂಡಿರುವ ತಪೋಭೂಮಿಯ ಈ ಕ್ಷೇತ್ರದಲ್ಲಿ ಬಾಹುಬಲಿಯ 58.8 ಅಡಿ ಏಕ ಶಿಲಾ ಮೂರ್ತಿ ಒಂದೆಡೆಯಾದರೆ, ವಿಂಧ್ಯಗಿರಿ, ಚಂದ್ರಗಿರಿ ನಗರ ಹಾಗೂ ಸುತ್ತಮುತ್ತ ಸುಮಾರು 40 ಬಸದಿಗಳಿವೆ.

3ನೇ ಶತಮಾನದಿಂದ ಮಗಧ ದೊರೆ ಸಾಮ್ರಾಟ್ ಚಂದ್ರಗುಪ್ತ ಮೌರ್ಯ ಹಾಗೂ ಅಂತಿಮ ಶ್ರುತ ಕೇವಲಿ ಭದ್ರಬಾಹು ಮುನಿಗಳ ಸಲ್ಲೇಖನ ಸಮಾಧಿ ಮರಣದಿಂದಾಗಿ ಚಂದ್ರಗಿರಿ ಚಿಕ್ಕಬೆಟ್ಟ ಪ್ರಖ್ಯಾತಿ ಹೊಂದಿದೆ. ಇಲ್ಲಿ 13 ಬಸದಿಗಳು, ಅಪೂರ್ವ ಶಿಲಾ ಶಾಸನಗಳು, ನಿಷಧಿ ಮಂಟಪಗಳು, ಸ್ಮಾರಕಗಳು ರನ್ನ ಹಾಗೂ ಚಾವುಂಡರಾಯನ ಹಸ್ತಾಕ್ಷರ ಮತ್ತು ಭದ್ರಬಾಹುಗಳ ಚರಣವಿರುವ ಗುಹೆ ಇದೆ.

ಚಂದ್ರಗಿರಿಯಲ್ಲಿ ಅತ್ಯಂತ ಎತ್ತರದ ಮಾನಸ್ತಂಭ ಮತ್ತು ಬ್ರಹ್ಮಸ್ತಂಭಗಳು ಗಮನ ಸೆಳೆಯುತ್ತಿವೆ. ಸಾಮಾನ್ಯವಾಗಿ ಮಾನಸ್ತಂಭಗಳು ಜೈನ ಸಂಸ್ಕೃತಿಯ ಸಂಪ್ರದಾಯದಲ್ಲಿ ಜಿನ ಬಸದಿಯ ಮುಂಭಾಗದಲ್ಲಿ ಇರುತ್ತವೆ. ಜಿನ ದರ್ಶನಕ್ಕಾಗಿ ಬಸದಿಯ ಒಳಗಡೆ ಶುದ್ಧ ಭಾವನೆಯಿಂದ ಪ್ರವೇಶ ಮಾಡುವಾಗ ಪ್ರತಿಯೊಬ್ಬರೂ ಜಿನ ದರ್ಶನ ಮಾಡುವ ಮುಂಚಿತವಾಗಿ ಮಾನಸ್ತಂಭದ ಬಳಿ ಅಹಂಕಾರ ಬಿಟ್ಟು ಪ್ರಾಂಗಣವನ್ನು ಪ್ರವೇಶ ಮಾಡಬೇಕು. ಆಗ ನಿರಹಂಕರವಾಗಿ, ನಿರ್ವಿಕಾರವಾಗಿ, ಶುದ್ಧಾತ್ಮವಾಗಿ ಗರ್ಭಗುಡಿಯ ಒಳಗಿರುವ ಜಿನ ಬಿಂಬದ ಸಮ್ಯಗ್ದರ್ಶನ ಮಾಡುವುದೇ ಮಾನಸ್ತಂಭದ ಮುಖ್ಯ ಆಶಯ.

ಅಂತಹ ಒಂದು ಸುಂದರ ಬೃಹತ್ ಮಾನಸ್ತಂಭವು 23 ನೇ ತೀರ್ಥಂಕರರಾದ ಭಗವಾನ್ ಅಂತರಾಳ ಪಾರ್ಶ್ವನಾಥ ಬಸದಿಯ ಮುಂದೆ ಕಂಗೊಳಿಸುತ್ತಿದೆ. ಮಾನಸ್ತಂಭ, ಗರ್ಭಗುಡಿಯ ತೀರ್ಥಂಕರರ ಶರೀರಾಕೃತಿಯ 12 ಪಟ್ಟು ಎತ್ತರವಿರುತ್ತದೆ. ಹಾಗೆಯೇ 3 ಖಂಡಗಳಲ್ಲಿ ವಿಭಾಗಿತವಾಗಿರುತ್ತದೆ. ಇದು 3 ಲೋಕಕ್ಕೂ ಮಾನ್ಯವಾಗಿದ್ದು, ಇದರ ದರ್ಶನ ಮಾಡಿದವರ ಅಹಂಕಾರ ದೂರವಾಗಿ ಧಾರ್ಮಿಕ ಶ್ರದ್ಧೆ ಮೂಡುತ್ತದೆ ಎಂಬ ಪ್ರತೀತಿ ಇದೆ.

ಮಾನಸ್ತಂಭ ಕರ್ನಾಟಕದ ಕಲೆಗೆ ಮಾತ್ರವಲ್ಲ, ಭಾರತೀಯ ಕಲಾ ಪ್ರಪಂಚಕ್ಕೆ ಜೈನರು ನೀಡಿರುವ ಅಮೋಘ ಕಾಣಿಕೆಯಾಗಿದೆ. ಇದರ ಕುರಿತು ಪಾಶ್ಚಿಮಾತ್ಯ ಪಂಡಿತ ಸ್ಮಿತ್, ‘ಜಿನಾಲಯಗಳೆದುರು ನಭಶ್ಚುಂಬಿಯಾಗಿ ನಿಂತಿರುವ ಇವು ಕೇವಲ ಅಳತೆಯ ದೃಷ್ಟಿಯಿಂದ ಮಾತ್ರವಲ್ಲ, ಕಲಾ ದೃಷ್ಠಿಯಿಂದಲೂ ಹಿರಿಯದಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕ ಬೆಟ್ಟದಲ್ಲಿರುವ 18ಅಡಿಯ ಅಂತರಾಳ ಪಾರ್ಶ್ವನಾಥ ಸ್ವಾಮಿಯು ಕಮಲ ಪೀಠದಲ್ಲಿ ವಿರಾಜಮಾನರಾಗಿರುವುದು.
ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕ ಬೆಟ್ಟದಲ್ಲಿರುವ 18ಅಡಿಯ ಅಂತರಾಳ ಪಾರ್ಶ್ವನಾಥ ಸ್ವಾಮಿಯು ಕಮಲ ಪೀಠದಲ್ಲಿ ವಿರಾಜಮಾನರಾಗಿರುವುದು.

ಚಿಕ್ಕಬೆಟ್ಟದ ಸುಂದರ ಮಾನಸ್ತಂಭ

ಚಿಕ್ಕಬೆಟ್ಟದ ಮೇಲಿರುವ ಮಾನಸ್ತಂಭವು ಸುಂದರವಾಗಿದ್ದು 80 ಅಡಿ ಎತ್ತರದ್ದಾಗಿದೆ. ಅನಂತ ಕವಿಯ ಬೆಳಗೊಳದ ಗೊಮ್ಮಟೇಶ್ವರ ಚರಿತೆ ಆಧಾರದಿಂದ ಈ ಸ್ತಂಭವನ್ನು ಪುಟ್ಟಯ್ಯನೆಂಬ ಜೈನ ವ್ಯಾಪಾರಿ ಚಿಕ್ಕದೇವರಾಜೇಂದ್ರನ ಕಾಲದಲ್ಲಿ ಕ್ರಿ.ಶ.1672ರಲ್ಲಿ ನಿಲ್ಲಿಸದನೆಂದು ತಿಳಿದು ಬರುತ್ತದೆ.

ಇಲ್ಲಿಯ ಸ್ತಂಭದ ತಳಭಾಗದಲ್ಲಿ ಎತ್ತರವಾದ 3 ಹಂತಗಳ ವೇದಿಕೆ ಇದ್ದು 3ನೇ ಹಂತವಾದ ಮೇಲೆ ಕಂಬದ ಚೌಕಾಕಾರದ ಭಾಗದಲ್ಲಿ ಬ್ರಹ್ಮಯಕ್ಷ ಪದ್ಮಾವತಿ ಕೂಷ್ಮಾಂಡಿನಿ ಮತ್ತು ಯಕ್ಷ ಶಿಲ್ಪಗಳನ್ನು ಬಿಡಿಸಲಾಗಿದೆ. ಅಲ್ಲಿಂದ ಮೇಲಕ್ಕೆ 8 ಮೂಲೆಯುಳ್ಳದ್ದಾಗಿದ್ದು ಅಲ್ಲಲ್ಲಿ ರತ್ನಪಟ್ಟಿಕೆಗಳಿಂದ ಶೋಭಾಯಮಾನವಾಗಿದೆ. ತುದಿಯಲ್ಲಿ 2 ವೃತ್ತಾಕಾರದ ಮುಚ್ಚಳಗಳು ಬಂದಿದ್ದು ಕೆಳಗಡೆ ಚಿಕ್ಕದಾಗಿಯೂ ಮೇಲೆ ದೊಡ್ಡದಾಗಿಯೂ ಅದರ ಮೇಲೆ ಅಗಲವಾದ ಚೌಕಾಕಾರದ ಪದ್ಮ ಫಲಕ ಬಂದಿದೆ.

ಈ ಪದ್ಮ ಫಲಕದ ಮೇಲೆ 4 ಕಂಬಗಳನ್ನಿಟ್ಟು ಚಿಕ್ಕ ಮಂಟಪ ರಚಿಸಿ ಅದನ್ನು ಸ್ತಂಭಗಳಿಂದ ಶಿಖರದಿಂದ ಅಲಂಕಾರಗೊಳಿಸಲಾಗಿದೆ. ಈ ಮಂಟಪದಲ್ಲಿ ನಿಂತ ಚತುರ್ಮುಖ ಜಿನ ಬಿಂಬಗಳನ್ನು ಸ್ಥಾಪಿಸಲಾಗಿದೆ. ಮಂಟಪದ 4 ಮೂಲೆಗಳಲ್ಲಿ ಚಿಕ್ಕ ಗೋಪುರಗಳಿದ್ದು ಮಧ್ಯೆ ಇರುವ ಗೋಪುರ 3 ಹಂತಗಳಲ್ಲಿ ಕೆಳಗಿನಿಂದ ಮೇಲಕ್ಕೆ ಚಿಕ್ಕದಾಗುತ್ತ ಮಧ್ಯೆ ಕಲಶವನ್ನು ಹೊಂದಿದೆ.

ಶಿಲ್ಪಕಲೆಗೆ ಮಹತ್ತರ ಕೊಡುಗೆ

2001ರಲ್ಲಿ ಪ್ರಥಮ ಬಾರಿಗೆ ಚಂದ್ರಗಿರಿ ಮಹೋತ್ಸವ ಆಚರಿಸಿದಾಗ ಈ ಮಾನಸ್ತಂಭಕ್ಕೆ ವೇದಿಕೆ ರಚಿಸಿ ಜಿನ ಮೂರ್ತಿಗಳಿಗೆ ಅಭಿಷೇಕ ನೆರವೇರಿಸಲಾಗಿತ್ತು ಎಂದು ಇತಿಹಾಸ ಪ್ರಾಧ್ಯಾಪಕ ಜೀವಂಧರ್ ಕುಮಾರ್ ಹೋತಪೇಟೆ ಹೇಳುತ್ತಾರೆ.

ಬಸದಿಗಳ ಎದುರಿಗಿನ ಮಾನಸ್ತಂಭಗಳು ಗೊಮ್ಮಟೇಶ್ವರ ಮೂರ್ತಿಯಂತೆ ಭಾರತೀಯ ಶಿಲ್ಪಕಲೆಗೆ ಮಹತ್ವ ಪೂರ್ಣ ಕೊಡುಗೆಯಾಗಿದೆ. ಜೈನ ವಾಸ್ತು ಶಿಲ್ಪದ ಮಾದರಿಯಾಗಿರುವ ಮಾನಸ್ತಂಭಗಳು ಅತ್ಯಂತ ಪ್ರಾಮುಖ್ಯತೆ ಪಡೆದಿವೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT