ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮಿ ನರಸಿಂಹಸ್ವಾಮಿ ಇರುವವರೆಗೆ ನಮಗೇನೂ ತೊಂದರೆ ಇಲ್ಲ: ಎಚ್.ಡಿ.ರೇವಣ್ಣ

Published 2 ಜೂನ್ 2024, 9:15 IST
Last Updated 2 ಜೂನ್ 2024, 9:15 IST
ಅಕ್ಷರ ಗಾತ್ರ

ಹೊಳೆನರಸೀಪುರ: ಶಾಸಕ ಎಚ್.ಡಿ. ರೇವಣ್ಣ ಭಾನುವಾರ ಹೊಳೆನರಸೀಪುರದ ವಿವಿಧ ದೇಗುಲಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬಕ್ಕೆ ಎದುರಾಗಿರುವ ಸಂಕಷ್ಟಗಳು ದೂರವಾಗಲು ರೇವಣ್ಣ ದೇವರ ಮೊರೆ ಹೋಗಿದ್ದಾರೆ.

ಬೆಳಿಗ್ಗೆ ಮನೆದೇವರಿಗೆ ಪೂಜೆ ಸಲ್ಲಿಸಿದ ಅವರು, ದೇವೇಗೌಡರ ಹುಟ್ಟೂರು ಹರದನಹಳ್ಳಿಯ ದೇವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಹೊಳೆನರಸೀಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೋತ್ತರ ಸಮೀಕ್ಷಗಳ ಕುರಿತು ಪ್ರತಿಕ್ರಿಯಿಸಿ, ‘ಅದರ ಬಗ್ಗೆ ನಾನು ಇವತ್ತು ಏನೂ ಹೇಳಲ್ಲ. ಈ ದೇಶ ಉಳಿಯಬೇಕಾದರೆ ಮೋದಿಯವರು ಪ್ರಧಾನ ಮಂತ್ರಿ ಆಗಬೇಕು. ಲಕ್ಷ್ಮೀನರಸಿಂಹ ಸ್ವಾಮಿ ಇರುವವರೆಗೂ ನಮಗೇನು ತೊಂದರೆಯಿಲ್ಲ. ಲೋಕಸಭೆ ಚುನಾವಣೆಯ ಮೂರು ಕ್ಷೇತ್ರ ಗೆಲ್ಲುತ್ತೇವೆ’ ಎಂದು ಹೇಳಿದರು.

ಭವಾನಿ ರೇವಣ್ಣ ಅವರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದೇನೂ ನನಗೆ ಗೊತ್ತಿಲ್ಲ’ ಎಂದಷ್ಟೇ ಹೇಳಿದರು.

‘ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೇವೆ. ನಾನೇ ಖುದ್ದಾಗಿ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ನಮ್ಮ ಶಾಸಕರೂ ಪ್ರಚಾರ ಮಾಡಿದ್ದಾರೆ’ ಎಂದರು.

‘ಸ್ವಾತಂತ್ರ‍್ಯ ಬಂದ 75 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಯಾರಾದರೂ ಒತ್ತು ಕೊಟ್ಟ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿ. 1,600 ಪ್ರೌಢಶಾಲೆ, 600 ಪದವಿಪೂರ್ವ ಕಾಲೇಜು, 250 ಪ್ರಥಮ ದರ್ಜೆ ಕಾಲೇಜು ಕೊಟ್ಟಿದ್ದಾರೆ. ₹7 ಸಾವಿರ ಕೋಟಿ ಅನುದಾನವನ್ನು ಶಾಲಾ-ಕಾಲೇಜು ಕಟ್ಟಡಗಳಿಗೂ ಕೊಟ್ಟಿದ್ದಾರೆ. 4,800 ಶಿಕ್ಷಕರು, 1,600 ಪಿಯುಸಿ ಉಪನ್ಯಾಸಕರನ್ನು ಕುಮಾರಸ್ವಾಮಿ, ಯಡಿಯೂರಪ್ಪ ಇದ್ದಾಗ ನೇಮಕ ಮಾಡಿದ್ದಾರೆ’ ಎಂದು ಹೇಳಿದರು.

‘ಈಗ ಜೆಡಿಎಸ್-ಬಿಜೆಪಿ ಸೇರಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮಾಡುತ್ತಿದ್ದೇವೆ. ಎಲ್ಲ ಒಟ್ಟಾಗಿ ಕೆಲಸ ಮಾಡಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿ ವಿವೇಕಾನಂದ ಗೆದ್ದೇ ಗೆಲ್ಲುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT