ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು: ಕಾರ್ಮಿಕರ ಮಕ್ಕಳ ಸುರಕ್ಷತೆಗೆ ಕೂಸಿನಮನೆ

ಬಣ್ಣದ ಚಿತ್ರಗಳ ಆಕರ್ಷಣೆ, ಸ್ವಚ್ಛ ಪರಿಸರದ ಕೊಠಡಿ
Published 2 ಮಾರ್ಚ್ 2024, 6:34 IST
Last Updated 2 ಮಾರ್ಚ್ 2024, 6:34 IST
ಅಕ್ಷರ ಗಾತ್ರ

ಹಳೇಬೀಡು: ಸುರಕ್ಷಿತವಲ್ಲದ ಸ್ಥಳದಲ್ಲಿ ಪುಟ್ಟ ಮಕ್ಕಳೊಂದಿಗೆ ಕೂಲಿ ಕೆಲಸ ಮಾಡುವ ಪರಿಸ್ಥಿತಿ ಸಾಕಷ್ಟು ಪಾಲಕರನ್ನು ಕಾಡುತ್ತಿದೆ. ಕೂಲಿ ಕಾರ್ಮಿಕರ 1 ವರ್ಷದಿಂದ 3 ವರ್ಷದೊಳಗಿನ ಮಕ್ಕಳ ಸುರಕ್ಷತೆಗಾಗಿ ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಒಂದು ಕೊಠಡಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಕೂಸಿನಮನೆ ನಿರ್ಮಾಣ ಮಾಡಲಾಗಿದೆ.

ಆಕರ್ಷಕವಾದ ಚಿತ್ರಗಳಿಂದ ಕಂಗೊಳಿಸುತ್ತಿರುವ ಸ್ವಚ್ಛವಾದ ಕೂಸಿನ ಮನೆಗೆ 4 ಮಕ್ಕಳು ಪ್ರವೇಶ ಪಡೆದಿದ್ದಾರೆ. 15 ಮಕ್ಕಳು ಪ್ರವೇಶ ಪಡೆಯುವ ಸಾಧ್ಯತೆ ಇದೆ.

‘ರಸ್ತೆ, ಕಟ್ಟಡ ನಿರ್ಮಾಣ ಮೊದಲಾದ ಕೆಲಸದಲ್ಲಿ ತೊಡಗಿದ್ದಾಗ ಮಹಿಳಾ ಕಾರ್ಮಿಕರು ಪುಟ್ಟ ಮಕ್ಕಳನ್ನು ಜೊತೆಯಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಮನೆ ಮಂದಿಯೆಲ್ಲರೂ ಕೂಲಿ ಕೆಲಸ ಮಾಡಿದರೆ ಮಾತ್ರ ಹೊಟ್ಟೆಪಾಡು ಸಾಧ್ಯ ಎನ್ನುವ ಪರಿಸ್ಥಿತಿಯಲ್ಲಿ ಸಾಕಷ್ಟು ಕುಟುಂಬಗಳಿವೆ. ವಯೋವೃದ್ದರು ಸಹ ಕೈಲಾದ ಕೆಲಸ ಮಾಡಿಕೊಂಡು ಜೀವನ ಸಾಗಿಸುವುದರಿಂದ, ಮನೆಯಲ್ಲಿ ಮಕ್ಕಳ ಲಾಲನೆ, ಪಾಲನೆಗೆ ಹಿರಿಯರು ಸಹ ಇರುವುದಿಲ್ಲ. ಹೀಗಾಗಿ ಮಕ್ಕಳ ಸರಕ್ಷತೆ ಕಾಪಾಡಲು ಸರ್ಕಾರ ಕೂಲಿ ಕಾರ್ಮಿಕರ ನೆರವಿಗೆ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಹಳೇಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕೂಸಿನ ಮನೆ ಆರಂಭಿಸಲಾಗಿದೆ’ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಸ್.ಸಿ.ವಿರೂಪಾಕ್ಷ.

‘ಹೊಲ, ಗದ್ದೆಗಳಲ್ಲಿ ಒಂದು ಕಡೆ ಮಗುವನ್ನು ಮಲಗಿಸಿ ಕೆಲಸ ಮಾಡುವಾಗ ಕ್ರಿಮಿಕೀಟ ಮಾತ್ರವಲ್ಲದೇ ಹಾವು ಮೊದಲಾದ ವಿಷ ಜಂತುಗಳಿಂದ ಮಕ್ಕಳ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಬಿಸಿಲು, ಮಳೆ, ಗಾಳಿ ಹಾಗೂ ದೂಳಿನಿಂದಲೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಸಾಧ್ಯತೆ ಇರುತ್ತದೆ ಎಂಬುದನ್ನು ಮನಗಂಡು ಸರ್ಕಾರ ಕೂಸಿನ ಮನೆಗೆ ಅನುದಾನ ನೀಡಿದೆ’ ಎನ್ನುತ್ತಾರೆ ವಿರೂಪಾಕ್ಷ.

ಹಳೇಬೀಡಿನ ಕೆಪಿಎಸ್ ಶಾಲೆಯ ಕೊಠಡಿಯೊಂದರಲ್ಲಿ ನಿರ್ಮಿಸಿರುವ ಕೂಸಿನ ಮನೆಯಲ್ಲಿ ಮಕ್ಕಳ ಮನಸ್ಸಿಗೆ ಹಿತ ನೀಡುವ ಕಾರ್ಟೂನ್ಗಳನ್ನು ಚಿತ್ರಿಸಲಾಗಿದೆ. ಚಿತ್ರದ ಮೂಲಕ ಅಕ್ಷರ ಪರಿಚಯ ಮಾಡಲಾಗಿದೆ. ಮಕ್ಕಳು ಆಡುವ ಆಟದ ಪರಿಚಯವನ್ನು ಸಹ ಗೋಡೆಗಳಲ್ಲಿ ಬರೆಸಲಾಗಿದೆ. ಕೂಸಿನಮನೆಯಲ್ಲಿ ಸ್ವಚ್ಛತೆ ಕಾಪಾಡಲಾಗಿತ್ತು. ಮಕ್ಕಳಿಗೆ ಅಗತ್ಯವಿರುವ ಆರೋಗ್ಯಕರ ಪರಿಸರ ನಿರ್ಮಿಸಲಾಗಿದೆ.

‘ಗ್ರಾಮೀಣ ಮಕ್ಕಳು ಬೌದ್ಧಿಕ ಬೆಳವಣಿಗೆ ಹೊಂದುವುದರೊಂದಿಗೆ ಶೈಕ್ಷಣಿಕವಾಗಿ ಪ್ರಗತಿಯಾಗಬೇಕು ಎಂಬ ಪರಿಕಲ್ಪನೆಯಿಂದ ಕೂಸಿನಮನೆ ಆರಂಭವಾಗಿದೆ. ಬೆಳಿಗ್ಗೆ 10 ಸಂಜೆ 5 ರವರೆಗೂ ಕೂಸಿನಮನೆಯ ಸಂರಕ್ಷಕರು ಹಾಗೂ ಸಹಾಯಕರು ಮಕ್ಕಳ ಸುರಕ್ಷತೆ ಕಾಪಾಡುವುದರೊಂದಿಗೆ ಮಕ್ಕಳ ಜೊತೆ ಆಟ –ಪಾಠದಲ್ಲಿ ತೊಡಗಿಕೊಂಡಿರುತ್ತಾರೆ. ಮಕ್ಕಳ ಮನಸ್ಸನ್ನು ಉತ್ತಮ ದಾರಿಗೆ ಕೊಂಡೊಯ್ಯವ ಕೆಲಸ ಕೂಸಿನ ಮನೆಯಲ್ಲಿ ನಡೆಯಲಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ.

‘ಮಕ್ಕಳಿಗೆ ಹಾಲು, ಮೊಟ್ಟೆ, ಕಿಚಡಿಯನ್ನು ತಿನ್ನಿಸಲಾಗುವುದು. ಹಾಡು, ನೃತ್ಯ ಹಾಗೂ ಅಟದೊಂದಿಗೆ ಮಕ್ಕಳ ಸಂರಕ್ಷಣೆ ಕಾಪಾಡಲಾಗುವುದು. ವರ್ಣಮಾಲೆ, ದೇಹದ ಭಾಗಗಳನ್ನು ಪರಿಚಯ ಮಾಡುವುದರೊಂದಿಗೆ ಶಿಸ್ತು, ಸಂಯಮವನ್ನು ಕಲಿಸಲಾಗುವುದು’ ಎಂದು ಕೂಸಿನಮನೆ ಸಂರಕ್ಷಕಿ ಕಾವ್ಯಾ ಎನ್.ಎಚ್ ಹೇಳುತ್ತಾರೆ.

‘ಕಾರ್ಮಿಕರ ಮಕ್ಕಳ ಸುರಕ್ಷತೆಗೆ ಕೂಸಿನಮನೆಯ ಅಗತ್ಯವಿತ್ತು. ಪುಟ್ಟ ಮಕ್ಕಳಿರುವ ಕಾರ್ಮಿಕ ಕುಟುಂಬಕ್ಕೆ ಅನುಕೂಲ ಆಗಿದೆ’ ಎಂದರು ಕಾರ್ಮಿಕ ಮಹಿಳೆ ಸರೋಜ.

ಕುಟುಂಬದವರೆಲ್ಲ ಕೂಲಿ ಕೆಲಸ ಮಾಡುವ ಸಾಕಷ್ಟು ಮನೆಗಳಲ್ಲಿ ಪುಟ್ಟ ಮಕ್ಕಳಿವೆ. ಕಾರ್ಮಿಕರ ಕುಟುಂಬಗಳು ಕೂಸಿನ ಮನೆಯ ಸದುಪಯೋಗ ಮಾಡಿಕೊಳ್ಳಬೇಕಿದೆ. ಗ್ರಾಮ ಪಂಚಾಯಿತಿಯವರು ಕೂಸಿನಮನೆ ಸದ್ಬಳಕೆ ಮಾಡಿಕೊಳ್ಳುವಂತೆ ಕೂಲಿ ಕಾರ್ಮಿಕರಿಗೆ ಸಲಹೆ ಮಾಡುತ್ತಿದ್ದಾರೆ.

ಮಕ್ಕಳ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆ ನಿರ್ವಹಿಸುತ್ತದೆ. ಮಕ್ಕಳ ಆರೋಗ್ಯ ತೂಕ ಹಾಗೂ ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕ ಆಹಾರ ಕೊಡಲಾಗುತ್ತದೆ.
- ಎಸ್.ಸಿ.ವಿರೂಪಾಕ್ಷ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ
ಕೂಲಿ ಕಾರ್ಮಿಕರ ಮಕ್ಕಳಿಗೆ ನಗರದ ಹೈಟೆಕ್ ನರ್ಸರಿ ಶಾಲೆಗಿಂತ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದೆ. ಕಾರ್ಮಿಕರು ಸದುಪಯೋಗ ಮಾಡಿಕೊಂಡು ಮಕ್ಕಳ ಸುರಕ್ಷತೆ ಕಾಪಾಡಬೇಕು.
- ನಿತ್ಯಾನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT