ಸಕಲೇಶಪುರ: ‘ತಾಲ್ಲೂಕಿನ ಹಲವೆಡೆ ರೈತರು ಉಳುಮೆ ಮಾಡುತ್ತಿರುವ ಭೂಮಿ, ಡೀಮ್ಡ್ ಅರಣ್ಯಕ್ಕೆ ಸೇರಿದೆ ಎಂದು ಒಕ್ಕಲೆಬ್ಬಿಸಲು ಮುಂದಾಗಿರುವುದನ್ನು ಖಂಡಿಸಿ ಪಶ್ಚಿಮಘಟ್ಟದ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ’ ಎಂದು ಸಮಿತಿ ಅಧ್ಯಕ್ಷ ಬಾಚಹಳ್ಳಿ ಪ್ರತಾಪ್ ಗೌಡ ಹೇಳಿದರು.
ತಾಲ್ಲೂಕಿನ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುಪ್ರೀಂಕೋರ್ಟ್ ನೀಡಿರುವ ಆದೇಶ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿದೆ. ಇದರಿಂದಾಗಿ ಪಶ್ಚಿಮಘಟ್ಟದ ಅಂಚಿನ ಜನರ ಬದುಕು ಅತಂತ್ರವಾಗಿದ್ದು, ಈ ಸಮಸ್ಯೆ ಪರಿಹಾರಕ್ಕಾಗಿ ಸಂಘಿಟಸಲಾಗುತ್ತಿದೆ’ ಎಂದರು.
‘ಸುಪ್ರೀಂಕೋರ್ಟ್ ತೀರ್ಪಿನಿಂದ ಬೆಳೆಗಾರರು, ಮುಖ್ಯವಾಗಿ ಸಣ್ಣ ಬೆಳೆಗಾರರಿಗೆ ಸಂಕಷ್ಟವಾಗುತ್ತಿದೆ. ತಾಲ್ಲೂಕಿನ ಕಾಡಿನ ಅಂಚಿನಲ್ಲಿ 13 ಹಳ್ಳಿಗಳ ಜನರಿಗೆ ತೊಂದರೆಯಾಗುತ್ತಿದೆ. ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆ ರೈತರು ಸಂಘಟಿತವಾಗುತ್ತಿದ್ದೇವೆ. ಹೈಕೋರ್ಟ್ ನಿವೃತ್ತ ನ್ಯಾಯವಾದಿಗಳು, ಮೂಡಿಗೆರೆ, ಕೊಡಗು ಜಿಲ್ಲೆಯ ರೈತರು, ಹೋರಾಟಗಾರರು ಪಾಲ್ಗೊಂಡಿದ್ದಾರೆ’ ಎಂದರು.
ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ‘ಸರ್ಕಾರ ಒಕ್ಕಲೆಬ್ಬಿಸಲು ಮುಂದಾದರೆ ರೈತರು ಬಹಳ ಸಂಕಷ್ಟ ಎದುರಿಸಬೇಕಾಗುತ್ತದೆ. ಇಲ್ಲಿನ ಮೂಲನಿವಾಸಿಗಳನ್ನು ಡ್ರೀಮ್ಡ್ ಫಾರೆಸ್ಟ್, ಸೆಕ್ಷನ್ 4 ಹೆಸರಿನಲ್ಲಿ ಒಕ್ಕಲೆಬ್ಬಿಸುವ ತಂತ್ರ ನಡೆಯುತ್ತಿದೆ. ಅತಿವೃಷ್ಟಿಯಿಂದ ಹಾನಿಯಾಗಿದೆ. ಮಾನವ ಮತ್ತು ಕಾಡುಪ್ರಾಣಿ ಸಂಘರ್ಷ ಸಮಸ್ಯೆ ದಿನೇ ದಿನೇ ಜಟಿಲವಾಗುತ್ತಿದೆ. ಇಲ್ಲಿನ ರೈತರು ಮಾರುಕಟ್ಟೆ ಬೆಲೆಯಲ್ಲಿ ತಮ್ಮ ಹಿಡುವಳಿ ಭೂಮಿ ಸರ್ಕಾರಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಸರ್ಕಾರ ಈ ಭೂಮಿಯನ್ನು ಖರೀದಿ ಮಾಡಿ ಅರಣ್ಯ ವಿಸ್ತರಣೆ ಮಾಡಲಿ’ ಎಂದರು.
‘ನಮ್ಮ ಹೋರಾಟ ಯಾವುದೇ ಸರ್ಕಾರಗಳ ವಿರುದ್ಧ ಅಲ್ಲ, ನಮ್ಮ ಜನರ ಬದುಕಿನ ಪರವಾಗಿದೆ. ಇದರ ಕಾರ್ಯ ವ್ಯಾಪ್ತಿ ಪಶ್ಚಿಮ ಘಟ್ಟವಾಗಿದೆ’ ಎಂದರು.
ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ. ಮೋಹನ್‌ಕುಮಾರ್, ರೈತ ಹೋರಾಟಗಾರ ಮಂಜಯ್ಯ, ಹೋರಾಟಗಾರ್ತಿ ಆಶಾ, ಕೊಡಗಿನ ಭರತ್, ಮೂಡಗೆರೆಯ ದಿನೇಶ್, ಸೇರಿದಂತೆ ವಿವಿಧ ಪ್ರದೇಶದ 16 ಹೋರಾಟಗಾರರು, ಮಾಜಿ ಶಾಸಕ ಬಿ. ಆರ್ ಗುರುದೇವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.