ಸೋಮವಾರ, ಜನವರಿ 24, 2022
28 °C
ಪ್ರೀತಂಗೌಡ ವಿರುದ್ಧ ವಾಗ್ದಾಳಿ

ಹಾಸನ ಜಿಪಿಎ ಬರೆದುಕೊಟ್ಟಿಲ್ಲ- ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ರಾಮನಗರದಲ್ಲಿ ಸಚಿವರು ಮತ್ತು ಸಂಸದರ ನಡುವೆ ನಡೆದ ಗಲಾಟೆ ಮುಂದಿಟ್ಟುಕೊಂಡು ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆ ಎಂದು ಸ್ಥಳೀಯ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರು ಸುಳ್ಳು ಹೇಳಿಕೆ ನೀಡುವ ಮೂಲಕ ಪರಿಶಿಷ್ಟರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಆರೋಪಿಸಿದರು.

‘ಸಚಿವ ಮತ್ತು ಸಂಸದರ ಗಲಾಟೆ ಬಳಸಿಕೊಂಡು ಕೀಳು ಮಟ್ಟದ ರಾಜಕಾರಣ ಮಾಡಲು ಶಾಸಕರು ಪರಿಶಿಷ್ಟರನ್ನು ಬಳಸಿಕೊಳ್ಳುತ್ತಿದ್ದಾರೆ. ಶಾಸಕರಿಗೆ ಪರಿಶಿಷ್ಟರು ಮತ್ತು ಮುಸ್ಲಿಂರ ಮೇಲೆ ಪ್ರೀತಿ ಇದ್ದರೆ ಅವರ ಬಡಾವಣೆಯಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲಿ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಶಾಸಕರು ಕ್ಷೇತ್ರದ ಅಭಿವೃದ್ಧಿ ಮರೆತ್ತಿದ್ದಾರೆ. ಜಿಲ್ಲೆಯ ಯಾವುದೇ ಇಲಾಖೆಯಲ್ಲಿ ಪರಿಶಿಷ್ಟರು ಅಥವಾ ಮುಸ್ಲಿಂ ಸಮುದಾಯದ ಉನ್ನತ ಮಟ್ಟದ ಅಧಿಕಾರಿಗಳಿಲ್ಲ. ಇದು ಶಾಸಕರ ದಲಿತ ಹಾಗೂ ಅಲ್ಪಸಂಖ್ಯಾತ ವಿರೋಧಿ ನಡೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರದಲ್ಲಿ ಮೀಸಲಾತಿ ಸೇರಿದಂತೆ ಅನೇಕ ರೀತಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಈ ಜನರಿಗೆ ಸಲ್ಲಬೇಕಾಗಿದ್ದ ಅನೇಕ ರೀತಿಯ ಪರಿಹಾರವನ್ನು ಈವರೆಗೂ ನೀಡಿಲ್ಲ. ಅಶ್ವತ್ಥನಾರಾಯಣ ಅವರನ್ನು ಒಲೈಕೆ ಮಾಡಲು ಪ್ರತಿಭಟನೆ ಮಾಡುತ್ತಿದ್ದಾರೆ. ಇವರ ರಾಜಕೀಯ ನಿಷ್ಠೆ ಯಾರ ಕಡೆ ಎಂಬುದನ್ನು ಬಹಿರಂಗ ಪಡಿಸಲಿ’ ಎಂದು ಆಗ್ರಹಿಸಿದರು.

‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಅವರ ಕುಟುಂಬವನ್ನು ಬೈದುಕೊಂಡು ತಿರುಗಾಡಿದರೆ ರಾಷ್ಟ್ರ ಮಟ್ಟದ ನಾಯಕನಾಗುತ್ತೇನೆ ಎಂಬ ಭ್ರಮೆಯಲ್ಲಿ ಶಾಸಕರಿದ್ದಾರೆ. ರಾಮನಗರವನ್ನು ಡಿಕೆಶಿ ಅವರು ಜಿಪಿಎ ಬರೆಸಿಕೊಂಡಿಲ್ಲ, ಅದೇ ರೀತಿ ಹಾಸನವನ್ನು ಪ್ರೀತಂಗೆ ಜಿಪಿಎ ಬರೆದುಕೊಟ್ಟಿಲ್ಲ’ ಎಂದರು.

‘ರಾಮನಗರ ಘಟನೆಯನ್ನು ದೊಡ್ಡ ನಾಯಕರು ನೋಡಿಕೊಳ್ಳುತ್ತಾರೆ. ಹಾಸನದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಶಾಸಕರು, ಈ ವಿಚಾರದಲ್ಲಿ ಮೂಗು ತೂರಿಸುವುದು ಏಕೆ’ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಸಮೀರ್, ರವಿಕುಮಾರ್, ಕುಮಾರ್ ದಿನೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು