ಗುರುವಾರ , ಸೆಪ್ಟೆಂಬರ್ 23, 2021
24 °C

ಎರಡನೇ ದಿನಕ್ಕೆ ಕಾಲಿರಿಸಿದ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ನಡೆಸುತ್ತಿರುವ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿರಿಸಿದೆ.

ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಬೇಕು. ಐಸಿಡಿಎಸ್‌ ಕೆಲಸ ಹೊರತು ಪಡಿಸಿ ಉಳಿದ ಕೆಲಸ ನಿರ್ಬಂಧಿಸಬೇಕು. ಕನಿಷ್ಠ ವೇತನ ಜಾರಿ ಮಾಡಬೇಕು. ಅಂಗನವಾಡಿ ನೌಕರರನ್ನು ಕಾಯಂ ಮಾಡುವ ತನಕ ಕಾರ್ಯಕರ್ತೆಯರಿಗೆ ₹30 ಸಾವಿರ ಮತ್ತು ಸಹಾಯಕರಿಗೆ ₹21 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೀಡಬೇಕು. ಮುಂಬಡ್ತಿ, ವರ್ಗಾವಣೆ, ಪೌಷ್ಟಿಕ ಆಹಾರ ಸರಬರಾಜು ಮಾಡುವ ಎಂಎಸ್‌ಪಿಟಿಸಿ ಗಳಲ್ಲಿ ರಾಜಕೀಯ ಮಧ್ಯ ಪ್ರವೇಶ ತಡೆಯಬೇಕು. ಖಾಲಿಯಿರುವ ಸಹಾಯಕಿಯರು, ಕಾರ್ಯಕರ್ತೆಯರ ಹುದ್ದೆ ಭರ್ತಿ ಮಾಡಬೇಕು. ಬಜೆಟ್‌ನಲ್ಲಿ ಕಡಿತವಾಗಿರುವ ₹8452.38 ಕೋಟಿ ಹಣ ವಾಪಸ್ ನೀಡಬೇಕು. ಐಸಿಡಿಎಸ್ ಯೋಜನೆಗೆ ಅನುದಾನ ಹೆಚ್ಚಿಸಿ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಸೇವಾ ಜೇಷ್ಠತೆಯ ಆಧಾರದಲ್ಲಿ ವೇತನ ನಿಗದಿ ಮಾಡಿ, ಸಹಾಯಕಿಯರು ಮತ್ತು ಕಾರ್ಯಕರ್ತೆಯರ ವೇತನದ ಅಂತರ ಕಡಿಮೆ ಮಾಡಬೇಕು. ಮೊಟ್ಟೆಗಳನ್ನು ಕುಕ್ಕುಟೋದ್ಯಮ ಮಹಾ ಮಂಡಳಿಯಿಂದಲೇ ಸರಬರಾಜು ಮಾಡಿ ಮುಂಗಡವಾಗಿ ಹಣ ನೀಡಬೇಕು. ಕೋಳಿ ಮೊಟ್ಟೆ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಇಂದ್ರಮ್ಮ, ಜೆ.ಪಿ.ಶೈಲಜಾ, ಜಯಂತಿ, ಅರವಿಂದ್‌ ಇದ್ದರು.

ಕೆ.ಆರ್‌.ಪುರಂನಲ್ಲಿರುವ ಉಪ ನಿರ್ದೇಶಕರ ಕಚೇರಿ ರಸ್ತೆಯುದ್ದಕ್ಕೂ ಧರಣಿ ಕುಳಿತಿದ್ದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್‌ ನಿಯಂತ್ರಣ ನಿಯಮಗಳನ್ನು ಗಾಳಿಗೆ ತೂರಿದ್ದರು. ಮಾಸ್ಕ್‌ ಧರಿಸದೆ, ಅಂತರವನ್ನೂ ಪಾಲಿಸದೆ ಧರಣಿ ಕುಳಿತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು